ಮುಂಬೈ: ಭಾರತೀಯ ಚಿತ್ರರಂಗದ ದಂತಕಥೆ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ 'ಗಾನ ಕೋಗಿಲೆ' ಆಶಾ ಭೋಂಸ್ಲೆ (92) ಅವರು ಭಾನುವಾರ (ಏಪ್ರಿಲ್ 12) ಮುಂಬೈನಲ್ಲಿ(Asha Bhosle Passes Away) ನಿಧನರಾಗಿದ್ದಾರೆ. ಅವರ ಅಗಲಿಕೆಯ ಸುದ್ದಿ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಸಚಿನ್ ತೆಂಡೂಲ್ಕರ್ ಭಾವುಕ ವಿದಾಯ
ಆಶಾ ಭೋಸ್ಲೆ ಅವರ ಪಾರ್ಥಿವ ಶರೀರವನ್ನು ಮುಂಬೈನ ಲೋವರ್ ಪರೇಲ್‌ನಲ್ಲಿರುವ 'ಕಾಸಾ ಗ್ರಾಂಡೆ' ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಅವರೊಂದಿಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಆಶಾ ತೈ ಅವರ ಪಾರ್ಥಿವ ಶರೀರವನ್ನು ಕಂಡ ಸಚಿನ್ ತೀವ್ರ ಭಾವುಕರಾದರು. ಕುಟುಂಬಸ್ಥರನ್ನು ಮಾತನಾಡಿಸುವಾಗ ಸಚಿನ್ ಅವರ ಕಣ್ಣಾಲಿಗಳು ತುಂಬಿ ಬಂದವು, ಹನಿಗಳನ್ನು ಒರೆಸುತ್ತಾ ಅವರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರ ಕಣ್ಣನ್ನು ತೇವಗೊಳಿಸಿತು.
ಸಚಿನ್ ಮತ್ತು ಆಶಾ ಭೋಸ್ಲೆ ನಡುವೆ ಕೇವಲ ಅಭಿಮಾನಿ-ಗಾಯಕಿಯ ಸಂಬಂಧವಿರಲಿಲ್ಲ, ಅದನ್ನೂ ಮೀರಿದ ಆತ್ಮೀಯ ಒಡನಾಟವಿತ್ತು. ಸಚಿನ್ ಆಶಾ ಅವರನ್ನು 'ಆಶಾ ತೈ' ಎಂದೇ ಕರೆಯುತ್ತಿದ್ದರು. ಇತ್ತೀಚೆಗೆ ಜಾಮ್‌ನಗರದಲ್ಲಿ ನಡೆದ ಅರ್ಜುನ್ ತೆಂಡೂಲ್ಕರ್ ಮದುವೆಯಲ್ಲೂ ಆಶಾ ಭೋಸ್ಲೆ ಪಾಲ್ಗೊಂಡಿದ್ದರು ಎಂಬುದು ವಿಶೇಷ.
ಎಕ್ಸ್ (X) ನಲ್ಲಿ ಸಚಿನ್ ಕಂಬನಿ
ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾ, "ನಮಗೆ ಆಶಾ ತೈ ಕುಟುಂಬದ ಸದಸ್ಯರಂತಿದ್ದರು. ಇಂದು ಅನುಭವಿಸುತ್ತಿರುವ ನಷ್ಟವನ್ನು ವಿವರಿಸಲು ಪದಗಳೇ ಸಾಲುತ್ತಿಲ್ಲ. ಒಂದು ಕ್ಷಣ ಹೃದಯ ಮೌನವಾಗುತ್ತದೆ, ಮರುಕ್ಷಣವೇ ಅವರು ನಮಗೆ ಉಡುಗೊರೆಯಾಗಿ ನೀಡಿದ ಅಸಂಖ್ಯಾತ ಮಧುರ ಹಾಡುಗಳ ನೆನಪು ಕಾಡುತ್ತಿದೆ. ಕಾಲವೇ ಸ್ತಬ್ದಗೊಂಡಂತೆ ಅನಿಸುತ್ತಿದೆ. ಆದರೆ ಅವರ ಗೀತೆಗಳ ಮೂಲಕ ಅವರು ಎಂದಿಗೂ ಅಜರಾಮರ," ಎಂದು ಕಂಬನಿ ಮಿಡಿದಿದ್ದಾರೆ.
ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಆಶಾ ಭೋಸ್ಲೆ ಅವರ ಅಂತಿಮ ಸಂಸ್ಕಾರವು ಇಂದು (ಏಪ್ರಿಲ್ 13) ಸಂಜೆ 4 ಗಂಟೆಗೆ ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ನಡೆಯಲಿದೆ. ಮಹಾರಾಷ್ಟ್ರ ಸರ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ (Full State Honours) ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಲಕ್ಷಾಂತರ ಅಭಿಮಾನಿಗಳು ಮತ್ತು ಬಾಲಿವುಡ್‌ನ ದಿಗ್ಗಜರು ತಮ್ಮ ಪ್ರೀತಿಯ ಗಾಯಕಿಗೆ ಕೊನೆಯ ವಿದಾಯ ಹೇಳಲು ಮುಂಬೈಗೆ ಧಾವಿಸುತ್ತಿದ್ದಾರೆ. ಆಶಾ ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕದ ಸುವರ್ಣ ಯುಗವೊಂದು ಕೊನೆಗೊಂಡಂತಾಗಿದೆ,(ಏಜೆನ್ಸೀಸ್).