NEET Paper Leak >ನೆಹರೂ ಜಮಾನಾದಿಂದ ಹಿಡಿದು ಮೋದಿ ಆಡಳಿತದವರೆಗೆ: ನೈತಿಕ ಹೊಣೆ ಹೊತ್ತು ಸಚಿವ ಸ್ಥಾನ ತೊರೆದ ಹಿರಿಯ ನಾಯಕರ ಇತಿಹಾಸ ಇಲ್ಲಿದೆ! 
ದೇಶ

ನೆಹರೂ ಜಮಾನಾದಿಂದ ಹಿಡಿದು ಮೋದಿ ಆಡಳಿತದವರೆಗೆ: ನೈತಿಕ ಹೊಣೆ ಹೊತ್ತು ಸಚಿವ ಸ್ಥಾನ ತೊರೆದ ಹಿರಿಯ ನಾಯಕರ ಇತಿಹಾಸ ಇಲ್ಲಿದೆ! | NEET Paper Leak

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak) ಹಾಗೂ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಭಾರತದಾದ್ಯಂತ, ವಿಶೇಷವಾಗಿ ನವದೆಹಲಿಯಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ದಿನದಿಂದ ದಿನಕ್ಕೆ ಒತ್ತಾಯ ಹೆಚ್ಚಾಗುತ್ತಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಈ ವಿಷಯದಲ್ಲಿ ತನ್ನ ನಿಲುವನ್ನು ಸಡಿಲಗೊಳಿಸಿಲ್ಲ.
ಪ್ರಧಾನ್ ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಮತ್ತು ಇತ್ತೀಚೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗಲಾಟೆ ಸೃಷ್ಟಿಸಲು ವಿದ್ಯಾರ್ಥಿಗಳನ್ನು ರಾಜಕೀಯ ಉಪಕರಣಗಳಾಗಿ ನಾಚಿಕೆಯಿಲ್ಲದೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನ್ ಅವರು ಸ್ವತಃ ರಾಜೀನಾಮೆ ನೀಡುವ ಯಾವುದೇ ಒಲವು ತೋರಿಸದಿದ್ದರೂ, ಭಾರತೀಯ ರಾಜಕೀಯ ಇತಿಹಾಸದಲ್ಲಿ ತಮ್ಮ ಇಲಾಖೆಗಳಲ್ಲಿ ನಡೆದ ಪ್ರಮುಖ ಅಪಘಾತಗಳು ಅಥವಾ ದುರದೃಷ್ಟಕರ ಘಟನೆಗಳಿಗೆ ನೈತಿಕ ಹೊಣೆ ಹೊತ್ತು ಸಚಿವರು ಹುದ್ದೆಯಿಂದ ಕೆಳಗಿಳಿದ ಅನೇಕ ಉದಾಹರಣೆ ಇಲ್ಲಿವೆ.

ಲಾಲ್ ಬಹದ್ದೂರ್ ಶಾಸ್ತ್ರಿ

ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಭಾರತದ ರೈಲ್ವೆ ಮತ್ತು ಸಾರಿಗೆ ಸಚಿವರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ, 1956ರ ನವೆಂಬರ್ 23ರಂದು ತಮಿಳುನಾಡಿನ ಅರಿಯಲೂರು ಬಳಿ ಸೇತುವೆ ಕುಸಿದು ಪ್ರಯಾಣಿಕರ ರೈಲು ನದಿಗೆ ಬಿದ್ದು ಸುಮಾರು 140 ರಿಂದ 150 ಜನರು ಸಾಗಿದ ಅರಿಯಲೂರು ರೈಲು ದುರಂತ ಸಂಭವಿಸಿತು. ಈ ದುರಂತದ ನಂತರ, ವೈಫಲ್ಯಕ್ಕೆ ತಾವು ವೈಯಕ್ತಿಕವಾಗಿ ಜವಾಬ್ದಾರರಲ್ಲದಿದ್ದರೂ, ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಶಾಸ್ತ್ರಿ ಹೇಳಿದರು. ಶಾಸ್ತ್ರಿ ಅವರು ಈ ಹಿಂದಿನ ರೈಲು ಅಪಘಾತದ ನಂತರವೂ ಇಂತಹ ಪ್ರಸ್ತಾಪವನ್ನು ಮಾಡಿದ್ದರು, ಆದರೆ ನೆಹರೂ ಅವರನ್ನು ಮುಂದುವರಿಯಲು ಒಪ್ಪಿಸಿದ್ದರು. ಎರಡನೇ ಬಾರಿ ಪ್ರಧಾನಿ ಅವರ ರಾಜೀನಾಮೆಯನ್ನು ಸ್ವೀಕರಿಸಿದರು.

ಟಿ.ಟಿ. ಕೃಷ್ಣಮಾಚಾರಿ

ಉದ್ಯಮಿ ಹರಿದಾಸ್ ಮುಂಧ್ರಾ ಒಡೆತನದ ಕಂಪನಿಗಳಲ್ಲಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಸುಮಾರು 1.26 ರೂ ಕೋಟಿ ಹೂಡಿಕೆ ಮಾಡಿದ ಮುಂಧ್ರಾ ಹಣಕಾಸು ಹಗರಣ ಸಂಭವಿಸಿದಾಗ ಟಿ.ಟಿ. ಕೃಷ್ಣಮಾಚಾರಿ ಅವರು ಭಾರತದ ಹಣಕಾಸು ಸಚಿವರಾಗಿದ್ದರು. ರಾಯ್‌ಬರೇಲಿಯ ಕಾಂಗ್ರೆಸ್ ಸಂಸದ ಹಾಗೂ ಅಂದಿನ ಪ್ರಧಾನಿ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರ ಪತಿ ಫಿರೋಜ್ ಗಾಂಧಿ ಅವರು ಈ ವಿಷಯವನ್ನು ಮುನ್ನೆಲೆಗೆ ತಂದ ನಂತರ, ಕೃಷ್ಣಮಾಚಾರಿ ರಾಜೀನಾಮೆ ನೀಡಲು ನಿರ್ಧರಿಸಿದರು.
ಅವರು ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದಕ್ಕಾಗಿ ಅಲ್ಲ, ಬದಲಾಗಿ ಸಚಿವರಾಗಿದ್ದಾಗ ಹಗರಣಕ್ಕೆ ಕಾರಣವಾದ ಆಡಳಿತಾತ್ಮಕ ಮೇಲ್ವಿಚಾರಣೆಯ ಕೊರತೆಯಿಂದಾಗಿ ರಾಜೀನಾಮೆ ನೀಡಿದರು.

ವಿ.ಕೆ. ಕೃಷ್ಣ ಮೆನನ್

ನೆಹರೂ ಸಂಪುಟದ ಮತ್ತೊಬ್ಬ ಸದಸ್ಯ ವಿ ಕೆ ಕೃಷ್ಣ ಮೆನನ್ 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಭಾರತದ ರಕ್ಷಣಾ ಸಚಿವರಾಗಿದ್ದರು, ಇದರಲ್ಲಿ ಭಾರತೀಯ ಪಡೆಗಳು ತೀವ್ರ ಹಿನ್ನಡೆ ಮತ್ತು ಸಾವುನೋವುಗಳನ್ನು ಎದುರಿಸಿದವು. ಭಾರತೀಯ ಸೇನೆಯ ಸಿದ್ಧತೆಯ ಕೊರತೆಗಾಗಿ ಮೆನನ್ ತೀವ್ರ ಟೀಕೆಗೆ ಗುರಿಯಾದರು, ಮತ್ತು ರಾಜಕೀಯ ಒತ್ತಡದ ಪರಿಣಾಮವಾಗಿ, ಅವರು ಅಕ್ಟೋಬರ್ 1962ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದರು.

ನಿತೀಶ್ ಕುಮಾರ್

ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ನಿತೀಶ್ ಕುಮಾರ್ ಭಾರತದ ರೈಲ್ವೆ ಸಚಿವರಾಗಿದ್ದರು. 1999ರ ಆಗಸ್ಟ್ 2ರಂದು ಪಶ್ಚಿಮ ಬಂಗಾಳದ ಗೈಸಲ್‌ನಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು 280 ಜನರು ಸಾವನ್ನಪ್ಪಿದರು. ಇದರ ನಂತರ, ಕುಮಾರ್ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಹುದ್ದೆಗೆ ರಾಜೀನಾಮೆ ನೀಡಿದರು. ಈ ಅಪಘಾತಕ್ಕೆ ಸಿಗ್ನಲಿಂಗ್​​ ಮತ್ತು ಕಾರ್ಯಾಚರಣೆಯ ವೈಫಲ್ಯಗಳೇ ಕಾರಣ ಎಂದು ಹೇಳಲಾಗಿತ್ತು.

ಶಿವರಾಜ್ ಪಾಟೀಲ್

ತಮ್ಮ ಸಚಿವಾಲಯದ ವೈಫಲ್ಯದ ಕಾರಣಕ್ಕೆ ಸಚಿವರೊಬ್ಬರು ರಾಜೀನಾಮೆ ನೀಡಿದ ಇತ್ತೀಚಿನ ಪ್ರಕರಣವೆಂದರೆ 26/11ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ್ ಅವರ ರಾಜೀನಾಮೆ.
ಈ ದಾಳಿಗಳು ಭಾರತದ ಗುಪ್ತಚರ ಮಾಹಿತಿ ವಿನಿಮಯ, ಕರಾವಳಿ ಭದ್ರತೆ ಮತ್ತು ಬಿಕ್ಕಟ್ಟಿನ ಪ್ರತಿಕ್ರಿಯೆಯಲ್ಲಿನ ಪ್ರಮುಖ ಲೋಪಗಳನ್ನು ಬಯಲುಗೊಳಿಸಿದವು. ಇದು ಪಾಟೀಲ್ ಅವರಿಗೆ ರಾಜಕೀಯ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವಂತೆ ಮಾಡಿತು. ಕೇಂದ್ರ ಸರ್ಕಾರದ ಭದ್ರತಾ ಸಿದ್ಧತೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.

ವಿಲಾಸ್‌ರಾವ್ ದೇಶ್‌ಮುಖ್

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಕೂಡ 26/11ರ ಮುಂಬೈ ದಾಳಿಯ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಭಯೋತ್ಪಾದಕ ದಾಳಿಯ ನಂತರ ಸಾರ್ವಜನಿಕ ಭಾವನೆಗಳು ಅವರ ವಿರುದ್ಧ ತಿರುಗಿದವು, ಮತ್ತು ದೇಶ್‌ಮುಖ್ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಯನ್ನು ತೊರೆಯಲು ನಿರ್ಧರಿಸಿದರು.

ಸುರೇಶ್ ಪ್ರಭು, ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರು 2001ರಲ್ಲಿ ರೈಲ್ವೆ ಸಚಿವೆಯಾಗಿದ್ದಾಗ, ಸಾಲು ಸಾಲು ರೈಲು ಅಪಘಾತಗಳ ನಂತರ ರಾಜೀನಾಮೆ ನೀಡಲು ಮುಂದಾದರು ಆದರೆ ಪ್ರಧಾನಿ ವಾಜಪೇಯಿ ಅವರ ರಾಜೀನಾಮೆಯನ್ನು ಸ್ವೀಕರಿಸಲಿಲ್ಲ.
ಮತ್ತೊಂದು ಇದೇ ರೀತಿಯ ಪ್ರಕರಣವೆಂದರೆ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಅವರದ್ದು. ಸರಣಿ ರೈಲು ಹಳಿ ತಪ್ಪಿದ ಘಟನೆಗಳ ನಂತರ ನೈತಿಕ ಹೊಣೆ ಹೊತ್ತು ಪ್ರಭು 2017ರಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಪ್ರಧಾನಿ ಮೋದಿ ಅವರ ರಾಜೀನಾಮೆಯನ್ನು ನಿರಾಕರಿಸಿದರು ಮತ್ತು ಸಂಪುಟ ಪುನಾರಚನೆಯಲ್ಲಿ ಆ ಹುದ್ದೆಗೆ ಪಿಯೂಷ್ ಗೋಯಲ್ ಅವರನ್ನು ನೇಮಕ ಮಾಡಿದರು(ಏಜೆನ್ಸೀಸ್​).