ಅರವಿಂದ್ ಕೇಜ್ರಿವಾಲ್, ಜಸ್ಟೀಸ್ ಸ್ವರ್ಣಕಾಂತ ಶರ್ಮಾ
- ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಹೊಸ ವಿವಾದ
- ಜಸ್ಟೀಸ್ ಸ್ವರ್ಣಕಾಂತ ಶರ್ಮಾ ಮುಂದೆ ಹಾಜರಾಗಲು ಒಪ್ಪದ ಅರವಿಂದ್ ಕೇಜ್ರಿವಾಲ್
- ಪತ್ರದ ಮೂಲಕ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ ಕೇಜ್ರಿವಾಲ್
ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಇದೀಗ ಹೊಸ ವಿವಾದವೊಂದು ಭುಗಿಲೆದ್ದಿದೆ. ಇಂದು (ಫೆ.27) ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಪೀಠದ ಮುಂದೆ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಜರಾಗಬೇಕಿತ್ತು. ಆದರೀಗ, ತನ್ನ ಪರ ನಮ್ಮ ವಕೀಲರಾಗಲಿ ಅಥವಾ ನಾನಾಗಲಿ ಜಸ್ಟೀಸ್ ಸ್ವರ್ಣಕಾಂತ ಎದುರು ಬರೋದಿಲ್ಲ ಎಂದು ಕೇಜ್ರಿವಾಲ್ ಪತ್ರದ ಮೂಲಕ ತಿಳಿಸಿದ್ದಾರೆ.
ಸ್ವರ್ಣಕಾಂತ ಶರ್ಮಾ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ನಾನು ಕೋರ್ಟ್ಗೆ ಹಾಜರಾಗುವುದಿಲ್ಲ. ನ್ಯಾಯಮೂರ್ತಿ ಸ್ವರ್ಣಕಾಂತ ಅವರಿಂದ ನನಗೆ ನ್ಯಾಯ ಸಿಗುವ ಭರವಸೆ, ನಂಬಿಕೆಗಳು ಹುಸಿಯಾಗಿವೆ. ಹೀಗಾಗಿ, ನಾನು ಗಾಂಧೀಜಿಯವರ ಸತ್ಯಾಗ್ರಹವನ್ನು ಅನುಸರಿಸಲು ನಿರ್ಧರಿಸಿದ್ದೇನೆ. ನನ್ನ ಆತ್ಮಸಾಕ್ಷಿಯ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ನೀಡುವ ತೀರ್ಪನ್ನು ನಾನು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ. ಆ ಹಕ್ಕು ನನಗಿದೆ" ಎಂದು ತಿಳಿಸಿದ್ದಾರೆ.
ಸ್ವರ್ಣಕಾಂತ ಶರ್ಮಾ ಅವರನ್ನು ಈ ಪ್ರಕರಣದಿಂದ ಕೈಬಿಡಲು ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅವರು ಆರ್‌ಎಸ್‌ಎಸ್ ಹಿನ್ನೆಲೆಯನ್ನು ಹೊಂದಿದ್ದಾರೆ ಮತ್ತು ಬಿಜೆಪಿ ಸಂಯೋಜಿತ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ, ಅವರಿಂದ ನನಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಕಡೆಗೂ ಅರ್ಜಿಯನ್ನು ವಜಾಗೊಳಿಸಿತು.
ಏನಿದು ಪ್ರಕರಣ?
2024ರಲ್ಲಿ ನಡೆದ ದೆಹಲಿ ಮದ್ಯ ಹಗರಣವು ರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತು. 2025ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೀನಾಯ ಸೋಲುಂಡಿತು. ಅನಿರೀಕ್ಷಿತವಾಗಿ, ಈ ವರ್ಷದ ಫೆ.27ರಂದು ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತು. ಪ್ರಕರಣದಲ್ಲಿದ್ದ ಕೇಜ್ರಿವಾಲ್ ಸೇರಿ ಎಲ್ಲರೂ ಖುಲಾಸೆಗೊಂಡರು. ಆದಾಗ್ಯೂ, ಸಿಬಿಐ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತು. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಪ್ರಕರಣದ ವಿಚಾರಣೆ ನಡೆಸಿದರು. ಇಲ್ಲಿಂದ ಶುರುವಾಗಿದ್ದೇ ಈ ಹೊಸ ವಿವಾದ.