Swati Maliwal | ಸಂಸದೆ ಸ್ವಾತಿ ಮಲಿವಾಲ್  
ದೇಶ

ಮೋದಿಯವರೇ ವಿಶ್ವದ ನಾಯಕ!... ಕೇಜ್ರಿವಾಲ್ ವಿರುದ್ಧ ಆರೋಪದ 'ಸ್ವಾತಿ' ಮಳೆ ಸುರಿಸಿದ ಮಲಿವಾಲ್​! | Swati Maliwal

ದೆಹಲಿ: ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಳ್ಳಲು ತಮಗೆ ಯಾವುದೇ ಒತ್ತಡವಿಲ್ಲ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಇಟ್ಟು ಬಿಜೆಪಿ ಸೇರಿರುವುದಾಗಿ ಸಂಸದೆ ಸ್ವಾತಿ ಮಲಿವಾಲ್ (Swati Maliwal)ಸ್ಪಷ್ಟಪಡಿಸಿದ್ದಾರೆ. ರಾಘವ್ ಛಡ್ಡಾ ಸೇರಿದಂತೆ ಆಪ್​​ನ ​​ಏಳು ರಾಜ್ಯಸಭಾ ಸಂಸದರು ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಈ ಹೇಳಿಕೆ ನೀಡಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಮಲಿವಾಲ್​, ​​ತಮ್ಮ ನಿರ್ಧಾರದ ಹಿಂದಿನ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. 2006 ರಿಂದ ಅರವಿಂದ್ ಕೇಜ್ರಿವಾಲ್​ರೊಂದಿಗೆ ಪ್ರತಿ ಆಂದೋಲನದಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತ ಬಂದಿರುವುದಾಗಿ ತಿಳಿಸಿರುವ ಅವರು, ಇಷ್ಟಾಗಿಯೂ ತಮ್ಮ ಸ್ವಂತ ಮನೆಯಲ್ಲೇ (ಕೇಜ್ರಿವಾಲ್ ನಿವಾಸ) ಒಬ್ಬ ಗೂಂಡಾ ತಮ್ಮನ್ನು ಥಳಿಸಿದ್ದಾನೆ, ಅದರ ವಿರುದ್ಧ ಧ್ವನಿ ಎತ್ತಿದಾಗ ಬೆದರಿಕೆ ಹಾಕಲಾಯಿತು. ಅಷ್ಟೇ ಅಲ್ಲದೆ, ಈ ಘಟನೆಯ ಬಗ್ಗೆ ನಾನು ದಾಖಲಿಸಿದ ಎಫ್‌ಐಆರ್ ಹಿಂಪಡೆಯಲು ತುಂಬಾ ಒತ್ತಡ ಹೇರಲಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ.

ಕೇಜ್ರಿವಾಲ್ ಮಹಿಳಾ ವಿರೋಧಿ

ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಲಿವಾಲ್, ಕೇಜ್ರಿವಾಲ್ ಒಬ್ಬ ಮಹಿಳಾ ವಿರೋಧಿ ಎಂದು ಕಿಡಿಕಾರಿದ್ದಾರೆ. ಸಂಸತ್ತಿನಲ್ಲಿ ಮಾತನಾಡಲು ಪಕ್ಷವು ನನಗೆ ಎರಡು ವರ್ಷಗಳ ಕಾಲ ಯಾವುದೇ ಅವಕಾಶವನ್ನೇ ನೀಡಲಿಲ್ಲ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು. ಪಂಜಾಬ್ ಸರ್ಕಾರವನ್ನು ಆಪ್​​ ಹೈಕಮಾಂಡ್ ದೂರದಿಂದಲೇ ನಿಯಂತ್ರಿಸುತ್ತಿದೆ ಮತ್ತು ಅದನ್ನು ವೈಯಕ್ತಿಕ ನಿಧಿಯ ಮೂಲದಂತೆ ಬಳಸಿಕೊಳ್ಳುತ್ತಿದೆ ಎಂದು ದೂರಿರುವ ಮಲಿವಾಲ್​, ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಮಾದಕ ದ್ರವ್ಯ ಸೇವನೆ ಹೆಚ್ಚಾಗಿದ್ದು, ಪಕ್ಷದ ವಿರುದ್ಧ ಮಾತನಾಡುವವರ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸಿ ಬಲಪ್ರಯೋಗ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಮೋದಿಯವರ ನಾಯಕತ್ವಕ್ಕೆ ಸರಿಸಾಟಿ ಇಲ್ಲ..
ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಬಣ್ಣಿಸಿದ ಮಲಿವಾಲ್, ನಕ್ಸಲಿಸಂ ವಿರುದ್ಧದ ಕಠಿಣ ಕ್ರಮ, ಭದ್ರತಾ ಕಾರ್ಯಾಚರಣೆಗಳು ಮತ್ತು ಮಹಿಳಾ ಮೀಸಲಾತಿ ಮಸೂದೆಯಂತಹ ಐತಿಹಾಸಿಕ ನಿರ್ಧಾರಗಳನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ ಗೃಹ ಸಚಿವ ಅಮಿತ್ ಷಾ ಪಾತ್ರವನ್ನು ವಿಶೇಷವಾಗಿ ಶ್ಲಾಘಿಸುತ್ತಾ, ಬಿಜೆಪಿಗೆ ಸೇರುವ ನಿರ್ಧಾರ ಸ್ವಯಂಪ್ರೇರಿತವಾಗಿದ್ದು, ರಚನಾತ್ಮಕ ರಾಜಕೀಯ ಮಾಡಲು ಬಯಸುವವರು ಬಿಜೆಪಿಗೆ ಬರಬೇಕು ಎಂದು ಮುಕ್ತ ಆಹ್ವಾನ ನೀಡಿದರು.

ಬಿಕ್ಕಟ್ಟಿನ ಮೂಲ

ಈ ಬಿಕ್ಕಟ್ಟಿನ ಮೂಲ 2024ರ ಮೇ ತಿಂಗಳಲ್ಲಿ ನಡೆದ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆಯ ಆರೋಪದಲ್ಲಿ ಅಡಗಿದೆ ಎನ್ನಲಾಗಿದ್ದು, ಅಂದು ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಈ ಘಟನೆಯು ಪಕ್ಷದೊಳಗೆ ಮೊದಲ ಬಿರುಕನ್ನು ಸೃಷ್ಟಿಸಿತು. ನಂತರದ ದಿನಗಳಲ್ಲಿ ರಾಘವ್ ಛಡ್ಡಾರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು.
ಆಮ್ ಆದ್ಮಿ ಪಕ್ಷದಲ್ಲಿ ಅತ್ಯಂತ ವೇಗವಾಗಿ ಬೆಳೆದ ನಾಯಕರಲ್ಲಿ ರಾಘವ್ ಛಡ್ಡಾ ಪ್ರಮುಖರು. ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್​​ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು, 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಪಕ್ಷದ ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮಿದರು. ಮುಖ್ಯಮಂತ್ರಿ ಭಗವಂತ್ ಮಾನ್ ನಂತರ ರಾಜ್ಯದ ಅತ್ಯಂತ ಶಕ್ತಿಶಾಲಿ ನಾಯಕನಾಗಿ ಚಡ್ಡಾ ಗುರುತಿಸಿಕೊಂಡಿದ್ದರು(ಏಜೆನ್ಸೀಸ್​).