ತೀರದ AI ದಾಹ! ಬೇಕಿದೆ 9.3 ಟ್ರಿಲಿಯನ್ ಲೀಟರ್ ನೀರು, ಈಗಲೇ ಎಚ್ಚೆತ್ತುಕೊಳ್ಳದಿದ್ರೆ ಜಗತ್ತಿಗೆ ಮಹಾಕಂಟಕ ಫಿಕ್ಸ್! Artificial intelligence
- ಒಂದಡೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕ ಆರ್ಥಿಕತೆ ಮತ್ತು ದೈನಂದಿನ ಜೀವನದ ಚಿತ್ರಣವನ್ನೇ ಬದಲಾಯಿಸುತ್ತಿದೆ
- ಮತ್ತೊಂದೆಡೆ ಇಡೀ ಜಗತ್ತನ್ನೇ ನಡುಗಿಸುವಂತಹ ಪರಿಸರ ಮಾಲಿನ್ಯದ ಭೀತಿಯನ್ನು ಇದೇ ಎಐ ಹೊತ್ತು ತರುತ್ತಿದೆ
- ವಿಶ್ವಸಂಸ್ಥೆಯ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಫಾರ್ ವಾಟರ್, ಎನ್ವಿರಾನ್‌ಮೆಂಟ್ ಅಂಡ್ ಹೆಲ್ತ್ ನೀಡಿರುವ ವರದಿ ಆತಂಕಕಾರಿಯಾಗಿದೆ
- AI ಡೇಟಾ ಸೆಂಟರ್‌ಗಳು ವಾರ್ಷಿಕವಾಗಿ ಭಾರಿ ಪ್ರಮಾಣದ ವಿದ್ಯುತ್ ಹಾಗೂ ನೀರನ್ನು ಹೀರಿಕೊಳ್ಳಲಿವೆ
Artificial intelligence : ಇಂದು ಎಲ್ಲರನ್ನು ಆವರಿಸಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕ ಆರ್ಥಿಕತೆ ಮತ್ತು ದೈನಂದಿನ ಜೀವನದ ಚಿತ್ರಣವನ್ನೇ ಬದಲಾಯಿಸುತ್ತಾ ಮುನ್ನುಗ್ಗುತ್ತಿದ್ದರೆ, ಮತ್ತೊಂದೆಡೆ ಇಡೀ ಜಗತ್ತನ್ನೇ ನಡುಗಿಸುವಂತಹ ಪರಿಸರ ಮಾಲಿನ್ಯದ ಭೀತಿಯನ್ನು ಎಐ ಹೊತ್ತು ತರುತ್ತಿದೆ. ಎಷ್ಟರಮಟ್ಟಿಗೆ ಅಂದರೆ, ಇಡೀ ಜಗತ್ತಿನ ನಾಶ ಇದೇ ಎಐನಿಂದ ಆಗಿಬಿಡುತ್ತೇನೋ ಎಂಬ ಆತಂಕವನ್ನು ಸೃಷ್ಟಿ ಮಾಡುತ್ತಿದೆ.
ಹೌದು, ವಿಶ್ವಸಂಸ್ಥೆಯ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಫಾರ್ ವಾಟರ್, ಎನ್ವಿರಾನ್‌ಮೆಂಟ್ ಅಂಡ್ ಹೆಲ್ತ್ (UNU-INWEH) ನೀಡಿರುವ ಆಘಾತಕಾರಿ ವರದಿಯ ಪ್ರಕಾರ, 2030ರ ವೇಳೆಗೆ AI ಡೇಟಾ ಸೆಂಟರ್‌ಗಳು ವಾರ್ಷಿಕವಾಗಿ ಬರೋಬ್ಬರಿ 945 ಟೆರಾಕ್ಯಾಟ್-ಅವರ್ಸ್ (TWh) ವಿದ್ಯುತ್ ಹಾಗೂ 9.3 ಟ್ರಿಲಿಯನ್ ಲೀಟರ್ ನೀರನ್ನು ಹೀರಿಕೊಳ್ಳಲಿವೆ. ಅಷ್ಟೇ ಅಲ್ಲದೆ, 14,500 ಚದರ ಕಿಲೋಮೀಟರ್‌ಗೂ ಅಧಿಕ ಭೂಮಿಯನ್ನು ನುಂಗಿ ಹಾಕಲಿರುವ ಈ ಕೇಂದ್ರಗಳು, ವರ್ಷಕ್ಕೆ 2.5 ಮಿಲಿಯನ್ ಟನ್‌ಗಳಷ್ಟು ಇ-ತ್ಯಾಜ್ಯವನ್ನು ಸೃಷ್ಟಿಸಿ ಇಡೀ ಭೂಮಿಯನ್ನೇ ಇಂಧನ ಮತ್ತು ಕಸದ ಮಯವಾಗಿಸಲಿವೆ ಎಂಬ ಆತಂಕಕಾರಿ ಮುನ್ಸೂಚನೆ ಸಿಕ್ಕಿದೆ.
ವಿದ್ಯುತ್ ಆಕ್ರಮಣ
ವರದಿಯ ಪ್ರಕಾರ, 2030ರ ವೇಳೆಗೆ AI ಡೇಟಾ ಸೆಂಟರ್‌ಗಳಿಗೆ ಅಗತ್ಯವಿರುವ ಇಂಧನದ ಬೇಡಿಕೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೈಜೀರಿಯಾ ದೇಶಗಳ ಒಟ್ಟು ವಾರ್ಷಿಕ ವಿದ್ಯುತ್ ಬಳಕೆಗಿಂತ ಮೂರು ಪಟ್ಟು ಹೆಚ್ಚಾಗಲಿದೆ. 650 ಮಿಲಿಯನ್‌ಗಿಂತಲೂ ಅಧಿಕ ಒಟ್ಟು ಜನಸಂಖ್ಯೆಯನ್ನು ಹೊಂದಿರುವ ಈ ಮೂರು ದೇಶಗಳ ಒಟ್ಟಾರೆ ವಿದ್ಯುತ್ ಬಳಕೆಯನ್ನು ಮೀರಲಿರುವ ಈ ಬೇಡಿಕೆಯು, ಈ ದಶಕದ ಅಂತ್ಯದ ವೇಳೆಗೆ ಇಡೀ ಜಗತ್ತಿನ ಒಟ್ಟು ವಿದ್ಯುತ್ ಬಳಕೆಯ ಶೇ. 3 ರಷ್ಟನ್ನು ಆಕ್ರಮಿಸಿಕೊಳ್ಳಲಿದೆ.
ತೀರದ ಎಐ ದಾಹ
ವಿದ್ಯುತ್ ಮಾತ್ರವಲ್ಲದೆ ಇವುಗಳು ಹೀರಿಕೊಳ್ಳುವ ನೀರಿನ ಪ್ರಮಾಣವೂ ಅಷ್ಟೇ ಆಘಾತಕಾರಿಯಾಗಿದೆ. ಸಬ್-ಸಹರನ್ ಆಫ್ರಿಕಾದಲ್ಲಿರುವ ಸುಮಾರು 1.3 ಬಿಲಿಯನ್ (130 ಕೋಟಿ) ಜನರ ವಾರ್ಷಿಕ ಗೃಹಬಳಕೆಯ ಮೂಲಭೂತ ಅಗತ್ಯಗಳನ್ನು ಪೂರೈಸಲು ಎಷ್ಟು ನೀರು ಬೇಕಾಗುತ್ತದೆಯೋ, ಅಷ್ಟು ಬೃಹತ್ ಪ್ರಮಾಣದ ನೀರನ್ನು ಈ AI ಡೇಟಾ ಸೆಂಟರ್‌ಗಳು ಕುಡಿಯಲಿವೆ ಎಂದು ಅಂದಾಜಿಸಲಾಗಿದೆ. ಇನ್ನು ಇವುಗಳು ಆಕ್ರಮಿಸಿಕೊಳ್ಳಲಿರುವ ಭೂಮಿಯ ವಿಸ್ತೀರ್ಣವು 32 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಕಾರ್ತಾ ಮಹಾನಗರದ ಗಾತ್ರಕ್ಕಿಂತ ಸುಮಾರು ಎರಡು ಪಟ್ಟು ದೊಡ್ಡದಾಗಿರಲಿದೆ.
ಜನರೇಟಿವ್ ಎಐ (Generative AI) ಅಪ್ಲಿಕೇಶನ್‌ಗಳ ಬಳಕೆಯು ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಕಂಪ್ಯೂಟಿಂಗ್ ಸಾಮರ್ಥ್ಯದ ಬೇಡಿಕೆಯೂ ಗಗನಕ್ಕೇರುತ್ತಿದೆ. ಇದೇ ಕಾರಣಕ್ಕಾಗಿ ವಿಶ್ವದಾದ್ಯಂತ ಇರುವ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸರ್ಕಾರಗಳು ಭಾರಿ ಪೈಪೋಟಿಗೆ ಬಿದ್ದು ಎಐ ಮೂಲಸೌಕರ್ಯ ಹಾಗೂ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಮುನ್ನುಗ್ಗುತ್ತಿರುವ ಬೆನ್ನಲ್ಲೇ, ವಿಶ್ವಸಂಸ್ಥೆಯ ಈ ಕಣ್ಣು ತೆರೆಸುವಂತಹ ಆತಂಕಕಾರಿ ಸಂಶೋಧನಾ ವರದಿ ಹೊರಬಿದ್ದಿದೆ.
ವರದಿಯ ಪ್ರಕಾರ, 2025ರಲ್ಲಿ ಜಾಗತಿಕ ಡೇಟಾ ಸೆಂಟರ್‌ಗಳು ಅಂದಾಜು 448 TWh ವಿದ್ಯುತ್ ಅನ್ನು ಬಳಸಿಕೊಂಡಿವೆ. ಈ ಡೇಟಾ ಸೆಂಟರ್‌ಗಳನ್ನೇ ಒಂದು ದೇಶ ಎಂದು ಪರಿಗಣಿಸಿದರೆ, ಇವು ಈಗಾಗಲೇ ವಿಶ್ವದಲ್ಲೇ ಅತಿ ಹೆಚ್ಚು ವಿದ್ಯುತ್ ಬಳಸುವ 11ನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಲಿವೆ! ಈ ಬಳಕೆಯು ಫ್ರಾನ್ಸ್ ದೇಶಕ್ಕಿಂತ ಸ್ವಲ್ಪ ಹಿಂದಿದ್ದರೂ, ಸೌದಿ ಅರೇಬಿಯಾ ದೇಶದ ಒಟ್ಟು ವಿದ್ಯುತ್ ಬಳಕೆಗಿಂತ ಹೆಚ್ಚಾಗಿದೆ. ಇನ್ನು ಕೇವಲ ಐದು ವರ್ಷಗಳ ಅವಧಿಯಲ್ಲಿ, ಅಂದರೆ 2030ರ ವೇಳೆಗೆ ಈ ವಿದ್ಯುತ್ ಬಳಕೆಯ ಪ್ರಮಾಣವು ಈಗಿರುವುದಕ್ಕಿಂತ ದುಪ್ಪಟ್ಟಾಗಲಿದೆ ಎಂದು ವರದಿ ತಿಳಿಸಿದೆ.
ಈ ವರದಿಯ ಅತ್ಯಂತ ಪ್ರಮುಖ ಮತ್ತು ಗಮನಾರ್ಹ ಆಂಶವೆಂದರೆ, AI ತಂತ್ರಜ್ಞಾನದಿಂದ ಪರಿಸರದ ಮೇಲಾಗುತ್ತಿರುವ ಈ ಭಾರಿ ಒತ್ತಡಕ್ಕೆ ದೊಡ್ಡ ದೊಡ್ಡ ಕೃತಕ ಬುದ್ಧಿಮತ್ತೆ ಮಾಡೆಲ್‌ಗಳಿಗೆ ನೀಡಲಾಗುವ ತರಬೇತಿ ಕಾರಣವಲ್ಲ, ಬದಲಿಗೆ ಅವುಗಳ ದೈನಂದಿನ ಬಳಕೆಯೇ ಪ್ರಮುಖ ಕಾರಣವಾಗಿದೆ. ಸಂಶೋಧಕರ ಅಂದಾಜಿನ ಪ್ರಕಾರ, ಪ್ರಸ್ತುತ AI ಇಂಧನ ಬಳಕೆಯ ಶೇ. 80 ರಿಂದ 90 ರಷ್ಟು ಭಾಗವು 'ಇನ್ಫರೆನ್ಸ್' ಮೂಲದಿಂದಲೇ ಆಗುತ್ತಿದೆ. ಅಂದರೆ, ಬಳಕೆದಾರರು ಪ್ರತಿದಿನ ಕೇಳುವ ಪ್ರಶ್ನೆಗಳು ಮತ್ತು ವಿನಂತಿಗಳಿಗೆ ಈ ಮಾಡೆಲ್‌ಗಳು ಸತತವಾಗಿ ಸ್ಪಂದಿಸುವ ಹಾಗೂ ಕಾರ್ಯನಿರ್ವಹಿಸುವ ಕೆಲಸದಿಂದಲೇ ಅತಿ ಹೆಚ್ಚು ವಿದ್ಯುತ್ ವ್ಯಯವಾಗುತ್ತಿದೆ.
ವರದಿಯ ಅಂದಾಜಿನ ಪ್ರಕಾರ, ಕೇವಲ ಚಾಟ್‌ಜಿಪಿಟಿ (ChatGPT) ಒಂದೇ ಪ್ರತಿದಿನ ಸುಮಾರು 2.5 ಬಿಲಿಯನ್ (250 ಕೋಟಿ) ಪ್ರಾಂಪ್ಟ್‌ಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಕೇವಲ ಚಾಟ್ಜಿಪಿಟಿಗಾಗಿಯೇ ವಾರ್ಷಿಕವಾಗಿ ಅಂದಾಜು 383 GWh ನಷ್ಟು ಬೃಹತ್ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತಿದೆ. ಇನ್ನು ಈ ಬಳಕೆಯಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಹೊರಸೂಸುವಿಕೆಯನ್ನು ಸರಿದೂಗಿಸಬೇಕಾದರೆ, ಸುಮಾರು 2.6 ಮಿಲಿಯನ್ (26 ಲಕ್ಷ) ಸಸಿಗಳನ್ನು ನೆಟ್ಟು 10 ವರ್ಷಗಳ ಕಾಲ ಪೋಷಿಸಬೇಕಾಗುತ್ತದೆ, ಅಂದರೆ ಇಷ್ಟು ಮರಗಳನ್ನು ಬೆಳೆಸಲು ಅಮೆರಿಕದ ಪ್ರಸಿದ್ಧ ಮ್ಯಾನ್‌ಹ್ಯಾಟನ್ ನಗರದ ಗಾತ್ರಕ್ಕೆ ಸಮನಾದ ಭೂಪ್ರದೇಶದ ಅಗತ್ಯವಿದೆ ಎಂದು ವರದಿ ಬೆರಳು ಮಾಡಿ ತೋರಿಸಿದೆ.
ಇದರೊಂದಿಗೆ, AI ಮೂಲಕ ಸೃಷ್ಟಿಯಾಗುವ ಕಂಟೆಂಟ್‌ಗಳಿಗಾಗಿ ವ್ಯಯವಾಗುವ ಇಂಧನದ ತೀವ್ರತೆಯು ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂಬುದನ್ನು ಈ ಅಧ್ಯಯನವು ಎತ್ತಿ ತೋರಿಸಿದೆ. ಕೃತಕ ಬುದ್ಧಿಮತ್ತೆಯ ನೆರವಿನಿಂದ ಸೃಷ್ಟಿಯಾಗುವ ಒಂದು ಸಾಧಾರಣ ಚಿತ್ರವು, ಒಂದು ಸಾಮಾನ್ಯ ಪಠ್ಯ ವರ್ಗೀಕರಣದ ಕೆಲಸಕ್ಕೆ ಹೋಲಿಸಿದರೆ ಸುಮಾರು 1,450 ಪಟ್ಟು ಹೆಚ್ಚು ಇಂಧನವನ್ನು ಹೀರಿಕೊಳ್ಳುತ್ತದೆ. ಇನ್ನು AI ಮೂಲಕ ಸೃಷ್ಟಿಯಾಗುವ ಒಂದು ಸಣ್ಣ ವಿಡಿಯೋ ಕೇವಲ 20 ಸೆಕೆಂಡುಗಳಲ್ಲಿ ಬಳಸಿಕೊಳ್ಳುವ ವಿದ್ಯುತ್, ಸುಮಾರು 2,00,000 ಇ-ಮೇಲ್ ಸ್ಪ್ಯಾಮ್‌ಗಳನ್ನು ವರ್ಗೀಕರಿಸಲು ಬೇಕಾಗುವ ವಿದ್ಯುತ್‌ಗೆ ಸಮನಾಗಿರುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.
ವರದಿಯ ಪ್ರಮುಖ ಲೇಖಕಿ ಡಾ. ಮಿರಿಯಮ್ ಅಕ್ಜೆಲ್ ಈ ಬಗ್ಗೆ ಮಾತನಾಡುತ್ತಾ, "ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ (Carbon perspective) ದೃಷ್ಟಿಯಿಂದ ಅತ್ಯಂತ ಪರಿಸರಸ್ನೇಹಿ ಅಥವಾ ಹಸಿರಾಗಿ ಕಾಣಿಸುವ ತಂತ್ರಜ್ಞಾನದ ಆಯ್ಕೆಗಳು, ಅಂತಿಮವಾಗಿ ನೀರು ಅಥವಾ ಭೂಮಿಯ ಬಳಕೆಯ ವಿಷಯಕ್ಕೆ ಬಂದಾಗ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತವೆ ಎಂಬ ಅಂಶ ನಮಗೆ ಎಲ್ಲಕ್ಕಿಂತ ಹೆಚ್ಚಾಗಿ ಆಶ್ಚರ್ಯ ಮೂಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇವಲ ತಂತ್ರಜ್ಞಾನದ ದಕ್ಷತೆಯನ್ನು ಹೆಚ್ಚಿಸುವುದರಿಂದಲೇ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಿಲ್ಲ ಎಂದು ವರದಿ ಎಚ್ಚರಿಸಿದೆ. ಏಕೆಂದರೆ, AI ವ್ಯವಸ್ಥೆಗಳು ಹೆಚ್ಚು ದಕ್ಷ ಹಾಗೂ ಅಗ್ಗವಾಗುತ್ತಿದ್ದಂತೆ, ಅವುಗಳ ಒಟ್ಟಾರೆ ಬಳಕೆ ಮತ್ತಷ್ಟು ವೇಗವಾಗಿ ಹೆಚ್ಚಾಗುತ್ತದೆ. ತಂತ್ರಜ್ಞಾನ ಲೋಕದಲ್ಲಿ ಇದನ್ನು 'ಜೆವನ್ಸ್ ಪ್ಯಾರಾಡಾಕ್ಸ್' ಎಂದು ಕರೆಯಲಾಗುತ್ತದೆ. ವಿದ್ಯುತ್ ಮತ್ತು ನೀರಿನ ಬಳಕೆಯನ್ನು ಹೊರತುಪಡಿಸಿ, ಜಾಗತಿಕ ಮಟ್ಟದಲ್ಲಿ AI ಮೂಲಸೌಕರ್ಯ ಹಂಚಿಕೆಯಲ್ಲಿ ದೊಡ್ಡ ತಾರತಮ್ಯ ಇರುವುದನ್ನು ವರದಿ ಗುರುತಿಸಿದೆ. ಪ್ರಸ್ತುತ ವಿಶ್ವದ ಶೇ. 90 ಕ್ಕಿಂತ ಹೆಚ್ಚು AI-ವಿಶೇಷ ಕಂಪ್ಯೂಟಿಂಗ್ ಸಾಮರ್ಥ್ಯವು ಕೇವಲ ಅಮೆರಿಕ ಮತ್ತು ಚೀನಾ ದೇಶಗಳಲ್ಲೇ ಕೇಂದ್ರೀಕೃತವಾಗಿದೆ. ಜಗತ್ತಿನ ಕೇವಲ 32 ದೇಶಗಳು ಮಾತ್ರ ಇಂತಹ ಡೇಟಾ ಸೆಂಟರ್‌ಗಳನ್ನು ಹೊಂದಿದ್ದು, 150 ಕ್ಕೂ ಹೆಚ್ಚು ದೇಶಗಳು ಪ್ರಸ್ತುತ ಯಾವುದೇ ಸ್ವತಂತ್ರ AI ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಹೊಂದಿಲ್ಲ.
ಈ ವರದಿಯು ಕೃತಕ ಬುದ್ಧಿಮತ್ತೆಯ (AI) ವಿರುದ್ಧವಾಗಿ ಇಲ್ಲ ಎಂದು UNU-INWEH ಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ಕಾವೇಹ್ ಮದನಿ ಸ್ಪಷ್ಟಪಡಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು, "ಇದು ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಲು ಮತ್ತು ಅದರ ಅನಿರೀಕ್ಷಿತ ದುಷ್ಪರಿಣಾಮಗಳನ್ನು ಮುಂಚಿತವಾಗಿಯೇ ಎದುರಿಸಲು ಜಗತ್ತಿಗೆ ನೀಡುತ್ತಿರುವ ಕರೆ ಅಷ್ಟೇ ಎಂದಿದ್ದಾರೆ.
ಜಾಗತಿಕವಾಗಿ AI ಸೇವೆಗಳ ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಗಳು ತಮ್ಮ ಇಂಧನ ಯೋಜನೆ, ನೀರಿನ ನಿರ್ವಹಣೆ ಮತ್ತು ಭೂ-ಬಳಕೆಯ ನೀತಿಗಳಲ್ಲಿ AI ಮೂಲಸೌಕರ್ಯಗಳನ್ನು ಸೇರ್ಪಡಿಸಿ ಸೂಕ್ತ ನಿಯಮಗಳನ್ನು ರೂಪಿಸದಿದ್ದರೆ, ಈ ತಂತ್ರಜ್ಞಾನದ ಪರಿಸರ ಮಾಲಿನ್ಯದ ಪ್ರಮಾಣವು ಶೀಘ್ರದಲ್ಲೇ ವಿಶ್ವದ ಅತಿ ದೊಡ್ಡ ಕೈಗಾರಿಕಾ ವಲಯಗಳ ಮಾಲಿನ್ಯದ ಮಟ್ಟಕ್ಕೆ ತಲುಪಲಿದೆ ಎಂದು ವರದಿ ಎಚ್ಚರಿಸಿದೆ, (ಏಜೆನ್ಸೀಸ್).