ರಾಜ್ಯಸಭಾ ಸಂಸದ ಕಪಿಲ್ ಸಿಬಲ್ 
ದೇಶ

ಸಿಜೆಪಿ ಪ್ರತಿಭಟನಾಕಾರರ ಬಂಧನ; ನನಗೆ ಸುಪ್ರೀಂಕೋರ್ಟ್​​ನ ಮೇಲಿನ ನಂಬಿಕೆಯೇ ಹೊರಟು ಹೋಗಿದೆ: ಹಿರಿಯ ವಕೀಲ ಕಪಿಲ್ ಸಿಬಲ್ | Kapil Sibal

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಬಂಧನಗಳಿಂದ ಅಡ್ಡಿಪಡಿಸಿದ ಕ್ರಮದ ಕುರಿತು ಮಾತನಾಡುವ ವೇಳೆ ಹಿರಿಯ ವಕೀಲ ಮತ್ತು ಮಾಜಿ ಕೇಂದ್ರ ಸಚಿವ ಕಪಿಲ್, ನನಗೆ ಸುಪ್ರೀಂಕೋರ್ಟ್​ ಮೇಲೆ ನಂಬಿಕೆಯೇ ಹೊರಟು ಹೋಗಿದೆ ಎಂದಿದ್ದಾರೆ.

ನವದೆಹಲಿ: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಬಂಧನಗಳಿಂದ ಅಡ್ಡಿಪಡಿಸಿದ ಕ್ರಮದ ಕುರಿತು ಮಾತನಾಡುವ ವೇಳೆ ಹಿರಿಯ ವಕೀಲ ಮತ್ತು ಮಾಜಿ ಕೇಂದ್ರ ಸಚಿವ ಕಪಿಲ್, ನನಗೆ ಸುಪ್ರೀಂಕೋರ್ಟ್​ ಮೇಲೆ ನಂಬಿಕೆಯೇ ಹೊರಟು ಹೋಗಿದೆ ಎಂದಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ನ್ಯಾಯಾಲಯಗಳಿಂದ ಪರಿಹಾರ ಸಿಗುತ್ತದೆ ಎಂಬ ಯಾವುದೇ ಭರವಸೆ ತಮಗಿಲ್ಲ. ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಪದೇ ಪದೇ ಮೊರೆ ಹೋಗುವುದರಿಂದ ಬೇಸತ್ತಿದ್ದೇನೆ. ಅಲ್ಲಿಗೆ ಹೋಗುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ವೈಯಕ್ತಿಕವಾಗಿ ನನಗೆ ಅನ್ನಿಸಿದೆ ಎಂದು ಹೇಳಿದ್ದಾರೆ.

ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನಾಕಾರರನ್ನು ಬಂಧಿಸಿದ್ದನ್ನು ಪ್ರಶ್ನಿಸಿದ ಅವರು, ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಜನರನ್ನು ಬಂಧಿಸುವ ಕಾನೂನು ಬದ್ಧತೆಯನ್ನು ಪ್ರಶ್ನಿಸಿದರು. ಹಲವಾರು ಪ್ರತಿಭಟನಾಕಾರರನ್ನು ಅಜ್ಞಾತ ಸ್ಥಳಗಳಿಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.

ಮುಂದುವರೆದು, ಸಂವಿಧಾನವನ್ನು ಉಳಿಸಲು ಸಮರ್ಥವಾಗಿರುವ ಏಕೈಕ ಸಂಸ್ಥೆ ಸುಪ್ರೀಂ ಕೋರ್ಟ್ ಎಂದು ಬಣ್ಣಿಸಿದ ಅವರು, ಈ ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದು ನನಗೆ ತಿಳಿದಿಲ್ಲ. ನ್ಯಾಯಾಲಯದಿಂದ ನಮಗೆ ಎಂದಾದರೂ ಪರಿಹಾರ ಸಿಗುತ್ತದೆಯೇ ಎಂಬುದು ಕೂಡ ನನಗೆ ಗೊತ್ತಿಲ್ಲ. ಸಂವಿಧಾನವನ್ನು ಉಳಿಸಲು ಯಾರಾದರೂ ಸಾಧ್ಯವಿದ್ದರೆ, ಅದು ಸುಪ್ರೀಂ ಕೋರ್ಟ್ ಮಾತ್ರ. ಆದ್ರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದರಿಂದ ಪರಿಹಾರ ಸಿಗುತ್ತದೆ ಎಂಬ ಭರವಸೆ ಉಳಿದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನಿಮಗೆ ಅತೃಪ್ತಿ ಇದೆಯೇ ಸುದ್ದಿಗಾರರು ಪ್ರಶ್ನಿಸಿದಾಗ ಸಿಬಲ್, ಈ ವಿಷಯವು ವೈಯಕ್ತಿಕ ತೃಪ್ತಿಯ ಬಗ್ಗೆ ಅಲ್ಲ. ನಾವು ವಕೀಲರು. ನಾವು ಸಂತೋಷ ಅಥವಾ ಅತೃಪ್ತಿಯ ಬಗ್ಗೆ ಮಾತನಾಡುತ್ತಿಲ್ಲ. ನಾವು ಜನರಿಗಾಗಿ ಹೋರಾಡಬೇಕು. ಜನರು ಶಾಂತಿಯುತವಾಗಿ ಪ್ರತಿಭಟಿಸಿದರೆ ಯಾರಿಗೆ ಅಪಾಯ ಎಂದು ಪ್ರಶ್ನಿಸಿದ್ದಾರೆ.

ಬಿಎನ್​ಎಸ್ಎಸ್ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸುವುದನ್ನು ಟೀಕಿಸಿದ ಅವರು, ಈ ನಿಬಂಧನೆಯು ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆಗಳನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆಯೇ ಹೊರತು ಶಾಂತಿಯುತ ಪ್ರತಿಭಟನೆಗಳನ್ನು ನಿಲ್ಲಿಸುವುದಕ್ಕಲ್ಲ. ಒಬ್ಬ ವ್ಯಕ್ತಿ ಅಥವಾ ಸಮುದಾಯ ಶಾಂತಿಯುತವಾಗಿ ಪ್ರತಿಭಟಿಸಿದ್ರೆ ಯಾರಿಗೆ ಭಯ? ಸಮಾಜಕ್ಕೆ ಯಾವುದೇ ಭಯವಿಲಲ್ಲ. ಸರ್ಕಾರಕ್ಕೆ ಭಯವಿರಬಹುದು ಎಂದಿದ್ದಾರೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯಲ್ಲಿ(ಎಸ್ಐಆರ್) ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಶನಿವಾರ ಸಿಜೆಪಿ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಜಂತರ್ ಮಂತರ್ ಬಳಿ ನಡೆಯಬೇಕಿದ್ದ ಈ ಬೃಹತ್ ಪ್ರತಿಭಟನಾ ಸಭೆಯನ್ನು ತಡೆಯಲು ಪೊಲೀಸರು ಭಾರಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಮುಂಜಾಗೃತಾ ಕ್ರಮವಾಗಿ ನೂರಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದರು.

ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ರಾಜಕಾರಣಿಗಳು ಸೇರಿದಂತೆ 3,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು ಮತ್ತು ನಂತರ ಅವರೆಲ್ಲರನ್ನೂ ರಾತ್ರಿ ವೇಳೆ ಬಿಡುಗಡೆ ಮಾಡಲಾಗಿದೆ (ಏಜೆನ್ಸೀಸ್).