Military Proposal (ಚಿತ್ರ Instagram) 
ದೇಶ

ಸೇನಾ ಯುನಿಫಾರ್ಮ್‌ನಲ್ಲಿ ಗೆಳತಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟ ಪೈಲಟ್: ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ ಈ ರೋಮ್ಯಾಂಟಿಕ್ ವೀಡಿಯೊ! Military Proposal

ಪ್ರಮುಖ ಮುಖ್ಯಾಂಶಗಳು

  • ಮಿಲಿಟರಿ ಶಿಸ್ತು, ಕಠಿಣ ತರಬೇತಿ ಮತ್ತು ದೇಶಭಕ್ತಿಯ ವಾತಾವರಣದ ನಡುವೆ ಹೃದಯೀಸ್ಪರ್ಶಿ ವಿಡಿಯೋವೊಂದು ವೈರಲ್
  • ಆರ್ಮಿ ತರಬೇತಿ ಪೂರ್ಣಗೊಳಿಸಿದ ಬೆನ್ನಲ್ಲೇ ತನ್ನ ಪ್ರೇಯಸಿಗೆ ಮಂಡಿಯೂರಿ ಪ್ರಪೋಸ್​ ಮಾಡಿದ ಕ್ಯಾಪ್ಟನ್ ಭರತ್
  • ನಾವೆಲ್ಲರೂ ಇಂದು ಅಧಿಕೃತವಾಗಿ ಪೈಲಟ್​ಗಳು ಮತ್ತು ಭೋಧಕರಾಗಿದ್ದೇವೆ, ಇದು ನಮ್ಮೆಲ್ಲರಿಗೂ ಅತ್ಯಂತ ದೊಡ್ಡ ದಿನವಾಗಿತ್ತು
  • ಇದು ಕೇವಲ ನನಗೆ ಮಾತ್ರವಲ್ಲ, ನನ್ನ ಇಡೀ ಕುಟುಂಬಕ್ಕೂ ಒಂದು ಅಪಾರ ಹೆಮ್ಮೆಯ ಮತ್ತು ದೊಡ್ಡ ದಿನವಾಗಿತ್ತು
ಮಹಾರಾಷ್ಟ್ರ: ಮಿಲಿಟರಿ ಶಿಸ್ತು, ಕಠಿಣ ತರಬೇತಿ ಮತ್ತು ದೇಶಭಕ್ತಿಯ ವಾತಾವರಣದ ನಡುವೆ ನಡೆದ ಅತ್ಯಂತ ರೋಮ್ಯಾಂಟಿಕ್ ಹಾಗೂ ಹೃದಯಸ್ಪರ್ಶಿ (Military Proposal) ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಾಂಬ್ಯಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್‌ನಲ್ಲಿ (CATS) ತಮ್ಮ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೆನ್ನಲ್ಲೇ, ಭಾರತೀಯ ಸೇನಾ ವಾಯುಯಾನದ ಕ್ಯಾಪ್ಟನ್ ಭರತ್ ಭಾರದ್ವಾಜ್ ಎಲ್ಲರ ಸಮ್ಮುಖದಲ್ಲೇ ತಮ್ಮ ಗೆಳತಿ ಆರುಷಿ ಎದುರು ಮಂಡಿಯೂರಿ ಪ್ರೇಮ ನಿವೇದನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪೈಲಟ್​ ಭಾರದ್ವಾಜ್​ ಹೇಳಿದ್ದೇನು?

ನಾವೆಲ್ಲರೂ ಇಂದು ಅಧಿಕೃತವಾಗಿ ಪೈಲಟ್​ಗಳು ಮತ್ತು ಭೋಧಕರಾಗಿದ್ದೇವೆ. ಇದು ನಮ್ಮೆಲ್ಲರಿಗೂ ಅತ್ಯಂತ ದೊಡ್ಡ ದಿನವಾಗಿತ್ತು. ನಮ್ಮ ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ನಾವಿಬ್ಬರೂ ಒಬ್ಬರಿಗೊಬ್ಬರು ಪರಿಚಿತರು. ಅವಳಿಗೆ ಮದುವೆಯ ಪ್ರಸ್ತಾಪ ಮಾಡಲು ಇದಕ್ಕಿಂತ ಉತ್ತಮವಾದ ದಿನ ಇನ್ನೊಂದಿಲ್ಲ ಎಂದು ಭಾವಿಸಿದ್ದೆ. 
ಇದು ಕೇವಲ ನನಗೆ ಮಾತ್ರವಲ್ಲ, ನನ್ನ ಇಡೀ ಕುಟುಂಬಕ್ಕೂ ಒಂದು ಅಪಾರ ಹೆಮ್ಮೆಯ ಮತ್ತು ದೊಡ್ಡ ದಿನವಾಗಿತ್ತು. ಹೀಗಾಗಿ, ನನ್ನ ಪ್ರೇಯಸಿಗೂ ಈ ದಿನವನ್ನು ಜೀವನದಲ್ಲೇ ಮರೆಯಲಾಗದ ಅತ್ಯಂತ ಸ್ಮರಣೀಯ ದಿನವನ್ನಾಗಿ ಮಾಡಬೇಕೆಂಬುದು ನನ್ನ ಆಲೋಚನೆಯಾಗಿತ್ತು ಎಂದು ಕ್ಯಾಪ್ಟನ್​ ಭಾರದ್ಬಾಜ್​ ಸುದ್ದಿ ಮೂಲಗಳಿಗೆ ತಿಳಿಸಿದರು. 
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು. ಅನೇಕ ಬಳಕೆದಾರರು ಸಾಧನೆ ಮತ್ತು ಅತ್ಯಂತ ಸುಂದರವಾದ ಪ್ರಣಯದ ಈ ವಿಶಿಷ್ಟ ಸಂಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಶಿಸ್ತಿನ ಸಿಪಾಯಿಯೊಬ್ಬನ ಹೃದಯದಲ್ಲಿ ಇಷ್ಟೊಂದು ಅದ್ಭುತ ಪ್ರೀತಿ ಅಡಗಿದೆ ಎಂಬುದನ್ನು ನೋಡುವುದೇ ಚಂದ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನೂ ಕೆಲವು ಬಳಕೆದಾರರು ಇದು ಅತ್ಯಂತ ಶಿಸ್ತಿನ ಸಂಸ್ಥೆಯಾಗಿದ್ದು, ಪಾಸಿಂಗ್ ಔಟ್ ಪೆರೇಡ್ ಮತ್ತು ಸಮವಸ್ತ್ರದಲ್ಲಿರುವ ಅಧಿಕಾರಿಗಳನ್ನು ಹೊಂದಿದೆ. ಆದರೆ, ಈ ಪ್ರಸ್ತಾವನೆಗಾಗಿ ಮೊಣಕಾಲೂರಿ ಕುಳಿತುಕೊಳ್ಳುವುದು ಅನುಚಿತವೆನಿಸಿತು ಎಂದು ಹೇಳಿದರೆ, ಮತ್ತೊಬ್ಬರು ಸೇನಾ ವಿಮಾನಯಾನ ಶಾಲೆಯು ಉತ್ತಮ ಮೌಲ್ಯ, ನೀತಿಶಾಸ್ತ್ರ ಮತ್ತು ಇತಿಹಾಸವನ್ನು ಹೊಂದಿದೆ ಮತ್ತು ಇದು ಆವರಣದ ಹೊರಗೆ ನಡೆಯಬೇಕಿತ್ತು ಎಂದು ಭಾವಿಸಿದರು.
ಪ್ರೀತಿ ಸುಂದರವಾಗಿರಬೇಕಾದರೆ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದಾಗ್ಯೂ, ಸಮವಸ್ತ್ರ ಎಂಬುದು ಕರ್ತವ್ಯ, ಶಿಸ್ತು ಮತ್ತು ಸಾರ್ವಜನಿಕ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಮತ್ತು ವೈಯಕ್ತಿಕ ಕ್ಷಣಗಳನ್ನು ಸಮವಸ್ತ್ರದ ಘನತೆಯನ್ನು ಗೌರವಿಸುವ ರೀತಿಯಲ್ಲಿ ನಿರ್ವಹಿಸಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).