ಭಾರತದಲ್ಲಿ ಮಹಿಳೆಯರು ಇಂದಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆಯೇ? ಬೀದಿ ವ್ಯಾಪಾರಿ ಕೊಟ್ಟ ಉತ್ತರ ವೈರಲ್... Street Vendor ​  
ದೇಶ

ಭಾರತದಲ್ಲಿ ಮಹಿಳೆಯರು ಇಂದಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆಯೇ? ಬೀದಿ ವ್ಯಾಪಾರಿ ಕೊಟ್ಟ ಉತ್ತರ ವೈರಲ್... Street Vendor ​

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ಸೋನಾಲಿ ಸಿಂಗ್ ಇನ್‌ಸ್ಟಾಗ್ರಾಮ್ ಹಂಚಿಕೊಂಡಿರುವ ವಿಡಿಯೋ ವೈರಲ್​
  • ವಿಡಿಯೋದಲ್ಲಿ ಯುವ ಬೀದಿ ವ್ಯಾಪಾರಿಯ ಪ್ರಬುದ್ಧ ಮಾತುಗಳನ್ನು ಕೇಳಿ ಮನಸೋತ ನೆಟ್ಟಿಗರು
  • ಭಾರತದಲ್ಲಿ ಮಹಿಳೆಯರು ಇಂದಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಸೊಗಸಾದ ಉತ್ತರ ಕೊಟ್ಟ ಯುವಕ
  • ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಬಹುಪಾಲು ಪ್ರೀತಿ-ಗೌರವಗಳು ಜಾಲತಾಣಕ್ಕೆ ಸೀಮಿತ ಎಂದ ಬೀದಿ ವ್ಯಾಪಾರಿ
Street Vendor : ರಾಷ್ಟ್ರ ರಾಜಧಾನಿ ದೆಹಲಿಯ ಬೀದಿ ಬದಿಯ ವ್ಯಾಪಾರಿಯೊಬ್ಬ ಭಾರತದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಶೋಷಣೆಗಳ ಕುರಿತು ನೀಡಿರುವ ತೀಕ್ಷ್ಣ ಹಾಗೂ ಮಾರ್ಮಿಕ ಪ್ರತಿಕ್ರಿಯೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 
ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ಸೋನಾಲಿ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವ ಬೀದಿ ವ್ಯಾಪಾರಿಯ ಪ್ರಬುದ್ಧ ಮಾತುಗಳನ್ನು ಕೇಳಿ ಮನಸೋತಿರುವ ಲಕ್ಷಾಂತರ ನೆಟ್ಟಿಗರು, ಆತನ ಸಾಮಾಜಿಕ ಕಳಕಳಿ ಹಾಗೂ ಚಿಂತನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಭಾರತದಲ್ಲಿ ಮಹಿಳೆಯರು ಇಂದಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ರಸ್ತೆ ಬದಿಯಲ್ಲಿ ಕ್ರೋಚೆಟ್ ಹೂವುಗಳನ್ನು ಮಾರಾಟ ಮಾಡುವ ಯುವಕ "ಹೌದು" ಎಂದು ನೇರವಾಗಿಯೇ ಉತ್ತರಿಸಿದ್ದಾನೆ. ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದ ಅನೇಕ ಪುರುಷರು, ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೇವಲ ಮಾತನಾಡುತ್ತಾರೆಯೇ ಹೊರತು, ವಾಸ್ತವವನ್ನು ನೋಡಲು ಸಿದ್ಧರಿಲ್ಲ ಎಂದು ಆತ ಮುಕ್ತವಾಗಿ ಹೇಳಿದ್ದಾನೆ. 
ಮಾತು ಮುಂದುವರಿಸಿದ ಯುವಕ, ಪ್ರಸ್ತುತ ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಬಹುಪಾಲು ಪ್ರೀತಿ-ಗೌರವಗಳು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನಕ್ಕಷ್ಟೇ ಸೀಮಿತವಾಗಿವೆ ಹೊರತು ಅದರಲ್ಲಿ ಯಾವುದೇ ನಿಜವಾದ ಕಾಳಜಿ ಇಲ್ಲ ಎಂಬ ಕಹಿ ಸತ್ಯವನ್ನು ಆತ ಬಿಚ್ಚಿಟ್ಟಿದ್ದಾನೆ.
ಮಹಿಳೆಯರನ್ನು ಕೇವಲ ಮನೆಗೆಲಸಕ್ಕಷ್ಟೇ ಸೀಮಿತಗೊಳಿಸುವ ಪುರುಷರ ಮನಸ್ಥಿತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಯುವಕ, ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳ ಕಾರಣಕ್ಕೆ ಅವರನ್ನು ಕಡೆಗಣಿಸುವ ಅಥವಾ ದೂರ ಇಡುವ ಪತಿ ಹಾಗೂ ಪುರುಷರ ಧೋರಣೆಯನ್ನು ಬಲವಾಗಿ ಪ್ರಶ್ನಿಸಿದ್ದಾನೆ. 
"ಒಬ್ಬ ವ್ಯಕ್ತಿಯ ದೇಹ ಬದಲಾದ ತಕ್ಷಣ ಅವರ ಮೇಲಿನ ಪ್ರೀತಿ ಮಾಯವಾಗಿಬಿಡುತ್ತದೆಯೇ?" ಎಂದು ಆತ ಕೇಳಿರುವ ಮಾರ್ಮಿಕ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಪುರುಷ ಪ್ರಧಾನ ಚಿಂತನೆಗಳ ಕುರಿತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಸಂವಾದಕ್ಕೆ ಗ್ರಾಸವಾಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಯುವಕನಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜನಬೆಂಬಲ ಹಾಗೂ ಪ್ರಶಂಸೆಗಳು ಹರಿದುಬರುತ್ತಿವೆ. ವಿಡಿಯೋದ ಕಾಮೆಂಟ್ ಸೆಕ್ಷನ್‌ನಲ್ಲಿ ಬಹುತೇಕ ನೆಟ್ಟಿಗರು, "ಸಾಮಾನ್ಯ ಬೀದಿ ಬದಿಯ ವ್ಯಾಪಾರಿಯಾದ ಈತನಿಗೆ ಇರುವ ಪ್ರಬುದ್ಧತೆ ಮತ್ತು ಸೂಕ್ಷ್ಮ ಆಲೋಚನಾ ಶಕ್ತಿ, ದೊಡ್ಡ ದೊಡ್ಡ ಪದವಿಗಳನ್ನು ಪಡೆದ ಉನ್ನತ ಶಿಕ್ಷಣಾವಂತರಿಗೂ ಇಲ್ಲ" ಎಂದು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಸಮಾಜದ ನೈಜ ಚಿತ್ರಣವನ್ನು ಇಷ್ಟು ಸರಳವಾಗಿ ಬಿಚ್ಚಿಟ್ಟ ಯುವಕನ ಪ್ರಖರ ಜ್ಞಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್​).