ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿದ್ದರೂ, ಇಲ್ಲಿ ವಿಮಾನಯಾನ ಸಂಸ್ಥೆಗಳನ್ನು ಲಾಭದಾಯಕವಾಗಿ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಕಿಂಗ್ಫಿಶರ್, ಜೆಟ್ ಏರ್ವೇಸ್, ಗೋ ಫಸ್ಟ್ ಬಳಿಕ ಈಗ ಸ್ಪೈಸ್ಜೆಟ್ ಕೂಡ ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ನಷ್ಟಕ್ಕೆ ಸಿಲುಕಿದ್ದು, ಕಾರ್ಯಾಚರಣೆ ಉಳಿಸಿಕೊಳ್ಳಲು -₹5,500 ಕೋಟಿ ಬಂಡವಾಳ ಸಂಗ್ರಹಿಸಲು ಹೆಣಗಾಡುತ್ತಿದೆ. ಏರ್ ಇಂಡಿಯಾ ಹಾಗೂ ಇಂಡಿಗೋ ಕೂಡ ಇತ್ತೀಚಿನ ತ್ರೖೆಮಾಸಿಕಗಳಲ್ಲಿ ನಷ್ಟ ದಾಖಲಿಸಿವೆ. ಪ್ರಸ್ತುತ ಸ್ಪೈಸ್ಜೆಟ್ನ ಬಿಕ್ಕಟ್ಟೇನು? ವಾಯುಯಾನ ಸಂಸ್ಥೆಗಳ ನಷ್ಟಕ್ಕೆ ಕಾರಣಗಳೇನು? ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ.
ದೇಶದ ವಾಯುಯಾನ ಕ್ಷೇತ್ರದ ಮಹತ್ವದ ಸಂಸ್ಥೆಯಾದ ಸ್ಪೈಸ್ಜೆಟ್ ಪ್ರಸ್ತುತ ಭಾರೀ ಸಾಲದ ಸುಳಿಯಲ್ಲಿ ಸಿಲುಕಿದೆ. ವಿಮಾನಗಳ ಹಾರಾಟ ಸ್ಥಗಿತ, ಬಾಕಿ ಪಾವತಿ ವಿವಾದಗಳು ಮತ್ತು ಮಾರುಕಟ್ಟೆ ಪಾಲಿನ ಕುಸಿತದಿಂದ ಸಂಸ್ಥೆ ಅಸ್ತಿತ್ವದ ಹೋರಾಟ ನಡೆಸುತ್ತಿದೆ. ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸ್ಪೈಸ್ಜೆಟ್ನ ಪ್ರತಿ ಐದು ವಿಮಾನಗಳಲ್ಲಿ ಒಂದು ವಿಮಾನ ರದ್ದಾಗಿದೆ. ಕಳೆದ 9 ತಿಂಗಳಲ್ಲಿ ಕಂಪನಿಯ ಮಾರುಕಟ್ಟೆ ಪಾಲು 3.9%ರಿಂದ 0.6%ಕ್ಕೆ ಕುಸಿದಿದೆ. ನಿರಂತರ ವಿಮಾನ ರದ್ದತಿ, ವಿಳಂಬ ಮತ್ತು ಕಾರ್ಯಾಚರಣೆಯ ಲೋಪದೋಷಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸ್ಪೈಸ್ಜೆಟ್ಗೆ ನೋಟಿಸ್ ಜಾರಿ ಮಾಡಿದೆ. ನವೆಂಬರ್ 17ರಂದು ಜಾರಿ ಮಾಡಲಾದ ಈ ನೋಟಿಸ್ಗೆ 7 ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. 2019ರಲ್ಲಿ ಶೇ.15ರಷ್ಟಿದ್ದ ಸ್ಪೈಸ್ ಜೆಟ್ನ ದೇಶೀಯ ಮಾರುಕಟ್ಟೆ ಪಾಲು, ವಿಮಾನಗಳ ಕೊರತೆಯಿಂದಾಗಿ 0.6%ಕ್ಕೆ ಕುಸಿದಿದೆ. ಬಿಎಸ್ಇಯಲ್ಲಿ ಕಂಪನಿಯ ಷೇರು ಶೇ.5ರಷ್ಟು ಕುಸಿದು 9.74 ರೂಪಾಯಿಗೆ ತಲುಪಿದೆ. ಡಿಜಿಸಿಎ ನೋಟಿಸ್ಗೆ ಸಂಬಂಧಿಸಿದಂತೆ ಬಿಎಸ್ಇ ಕೂಡ ಸ್ಪೈಸ್ಜೆಟ್ನಿಂದ ಸ್ಪಷ್ಟನೆ ಕೇಳಿದೆ. ಬಾಕಿ ಬಾಡಿಗೆ ಪಾವತಿಸದ ಕಾರಣ ಗುತ್ತಿಗೆದಾರರು ವಿಮಾನಗಳನ್ನು ಹಿಂಪಡೆದಿದ್ದಾರೆ. ಪರಿಣಾಮವಾಗಿ ಸಂಸ್ಥೆಯ ದೈನಂದಿನ ಅರ್ಧಕ್ಕಿಂತ ಹೆಚ್ಚು ವಿಮಾನಗಳು ರದ್ದಾಗುತ್ತಿವೆ.
2025ರ ಆರ್ಥಿಕ ವರ್ಷದಲ್ಲಿ ಗುತ್ತಿಗೆದಾರರೊಂದಿಗಿನ ಸಾಲ ಇತ್ಯರ್ಥದಿಂದ -₹58.07 ಕೋಟಿ ನಿವ್ವಳ ಲಾಭ ತೋರಿಸಿದ್ದರೂ, ಕಾರ್ಯಾಚರಣೆಯಲ್ಲಿ ಸಂಸ್ಥೆ -ಠಿ;465.57 ಕೋಟಿ ನಷ್ಟ ಅನುಭವಿಸಿದೆ. ಇದರ ಒಟ್ಟು ಸಂಚಿತ ನಷ್ಟ (Accumulated Losses) -₹7,764.81 ಕೋಟಿ ತಲುಪಿದ್ದು, 2026ರ ಮಾರ್ಚ್ ಮತ್ತು ಜೂನ್ ತ್ರೖೆಮಾಸಿಕದ ಆರ್ಥಿಕ ಫಲಿತಾಂಶಗಳನ್ನು ಇನ್ನೂ ಪ್ರಕಟಿಸಿಲ್ಲ. ಸಿಬ್ಬಂದಿ ವೇತನ ಪಾವತಿಯಲ್ಲೂ ವಿಳಂಬವಾಗುತ್ತಿದ್ದು, ಸಂಸ್ಥೆ ಮುಚ್ಚುವ ಭೀತಿ ಎದುರಾಗಿದೆ. ವಿಮಾನ ಗುತ್ತಿಗೆ ಪಾವತಿಗಳೂ ಸೇರಿದಂತೆ ಸ್ಪೆ ೖಸ್ಜೆಟ್ನ ಒಟ್ಟು ಸಾಲ -₹4,218.5 ಕೋಟಿ ಇದೆ. ಹಲವು ವಿಮಾನ ಗುತ್ತಿಗೆ ಕಂಪನಿಗಳು ಬಾಕಿ ವಸೂಲಿಗಾಗಿ ದಿವಾಳಿ ಪ್ರಕ್ರಿಯೆ ಹೂಡಿವೆ. ಇತ್ತೀಚೆಗೆ ಮೊಲ್ಡೊವಾ ಮೂಲದ ಊಔಣಘಉ ಸಂಸ್ಥೆ ಬಾಕಿ ಪಾವತಿಯಾಗದ ಕಾರಣ ಮೂರು ವಿಮಾನಗಳ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಿದೆ. ಈ ಹಿಂದೆ ಕಾರ್ಲೆಲ್ ಏವಿಯೇಷನ್ ಸಂಸ್ಥೆಯು -₹442.25 ಕೋಟಿ ಬಾಕಿಯನ್ನು ಷೇರುಗಳಾಗಿ ಪರಿವರ್ತಿಸಿಕೊಂಡು ಸ್ವಲ್ಪ ಮಟ್ಟಿಗೆ ಹೊರೆ ಇಳಿಸಿತ್ತು. ಸಂಸ್ಥೆಯನ್ನು ದಿವಾಳಿ ಯಾಗದಂತೆ ಉಳಿಸಲು ಸ್ಪೈಸ್ಜೆಟ್ ಆಡಳಿತ ಮಂಡಳಿಯು -₹5,500 ಕೋಟಿ ಬಂಡವಾಳ ಸಂಗ್ರಹಿಸುವ ಯೋಜನೆಗೆ ಅನುಮೋದನೆ ನೀಡಿದೆ. ಹೊಸ ಷೇರುಗಳನ್ನು ವಿತರಿಸಲು ಅನುಕೂಲವಾಗುವಂತೆ ಸಂಸ್ಥೆಯ ಅಧಿಕೃತ ಷೇರು ಬಂಡವಾಳವನ್ನು -₹2,000 ಕೋಟಿಯಿಂದ 3.75 ಪಟ್ಟು ಹೆಚ್ಚಿಸಿ -₹7,500 ಕೋಟಿಗೆ ಏರಿಸಲು ನಿರ್ಧರಿಸಲಾಗಿದೆ. ಈಕ್ವಿಟಿ ಷೇರುಗಳ ವಿತರಣೆ ಮತ್ತು ಇತರ ಅನುಮೋದಿತ ಹಣಕಾಸು ಸಾಧನಗಳ ಮೂಲಕ ಹೊಸ ಹೂಡಿಕೆದಾರರಿಂದ ಈ ಹಣವನ್ನು ಸಂಗ್ರಹಿಸಲು ಆಡಳಿತ ಮಂಡಳಿ ಚರ್ಚೆ ನಡೆಸುತ್ತಿದೆ. ಸಂಗ್ರಹವಾಗುವ ಬಂಡವಾಳವನ್ನು, ಗುತ್ತಿಗೆದಾರರು, ವಿಮಾನ ನಿಲ್ದಾಣಗಳು ಮತ್ತು ಇತರ ಸೇವಾದಾತರ ಬಾಕಿ ಸಾಲಗಳನ್ನು ತೀರಿಸಲು, ಬಿಡಿಭಾಗಗಳ ಕೊರತೆ ಮತ್ತು ಬಾಕಿ ಕಾರಣದಿಂದ ನೆಲಕಚ್ಚಿರುವ ವಿಮಾನಗಳನ್ನು ದುರಸ್ತಿಗೊಳಿಸಿ ಮರಳಿ ಹಾರಾಟಕ್ಕೆ ತರಲು ಮತ್ತು ದೈನಂದಿನ ಕಾರ್ಯಾಚರಣೆಗೆ ಅಗತ್ಯವಿರುವ ದ್ರವ್ಯತೆ ಒದಗಿಸಿ, ಸ್ಥಗಿತಗೊಂಡಿರುವ ವಿಮಾನ ಮಾರ್ಗಗಳ ಪುನರಾರಂಭಕ್ಕೆ ವೆಚ್ಚ ಮಾಡಲು ಯೋಜಿಸಿದೆ.
ಈ -₹5,500 ಕೋಟಿ ಯೋಜನೆಯು ಕೇವಲ ಆಡಳಿತ ಮಂಡಳಿಯ ಪ್ರಸ್ತಾವನೆಯಾಗಿದ್ದು, ಹಣ ಇನ್ನೂ ಸಂಸ್ಥೆಯ ಕೈಸೇರಿಲ್ಲ. ಈ ಹಿಂದೆ 2024ರಲ್ಲಿ ಕಿಐಕ ಮೂಲಕ ಸಂಗ್ರಹಿಸಿದ -₹3,000 ಕೋಟಿಗೂ ಹೆಚ್ಚಿನ ಬಂಡವಾಳ ಕೂಡ ಸಂಸ್ಥೆಯನ್ನು ಶಾಶ್ವತವಾಗಿ ಲಾಭದ ಹಳಿಗೆ ತರುವಲ್ಲಿ ವಿಫಲವಾಗಿತ್ತು. ಹೀಗಾಗಿ, ಷೇರುದಾರರು ಮತ್ತು ನಿಯಂತ್ರಕರ ಅನುಮೋದನೆ ಪಡೆದು ಶೀಘ್ರವಾಗಿ ಹೂಡಿಕೆದಾರರಿಂದ ಹಣ ತರುವುದು ಮತ್ತು ಪ್ರಯಾಣಿಕರ ವಿಶ್ವಾಸ ಮರಳಿ ಗಳಿಸುವುದು ಸಂಸ್ಥೆಯ ಅಳಿವು-ಉಳಿವಿಗೆ ನಿರ್ಣಾಯಕವಾಗಿದೆ.
ಏಕಸ್ವಾಮ್ಯದ ಭೀತಿ: ಸಣ್ಣ ಸಂಸ್ಥೆಗಳು ಮುಚ್ಚುತ್ತಿರುವುದರಿಂದ ಭಾರತದ ವಾಯುಯಾನ ಕ್ಷೇತ್ರದಲ್ಲಿ ಈಗ ಇಂಡಿಗೋ ಮತ್ತು ಏರ್ ಇಂಡಿಯಾ ಸಮೂಹಗಳೇ ಶೇಕಡ 90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿವೆ. ಸ್ಪರ್ಧೆ ಕಡಿಮೆಯಾದಂತೆ ಮುಂದಿನ ದಿನಗಳಲ್ಲಿ ಟಿಕೆಟ್ ದರಗಳು ಗಗನಕ್ಕೇರುವ ಅಪಾಯವಿದೆ.
ಪ್ರಯಾಣಿಕರಿಗೆ ತೊಂದರೆ: ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗಳು ಕೊನೆಯ ಕ್ಷಣದಲ್ಲಿ ವಿಮಾನಗಳನ್ನು ರದ್ದುಗೊಳಿಸುವುದು ಮತ್ತು ವಿಳಂಬ ಮಾಡುವುದು ಹೆಚ್ಚಾಗಿದೆ. ಇದರಿಂದ ಪ್ರಯಾಣಿಕರ ವಿಶ್ವಾಸ ಕುಸಿಯುತ್ತಿದೆ.
ಸಾಲದ ಹೊರೆ: ವಿಮಾನಯಾನ ಸಂಸ್ಥೆಗಳು ಬಾಗಿಲು ಮುಚ್ಚಿದಾಗ ಪೈಲಟ್ಗಳು, ಸಿಬ್ಬಂದಿ ಕೆಲಸ ಕಳೆದುಕೊಳ್ಳುವುದಲ್ಲದೆ, ಬ್ಯಾಂಕುಗಳು ಮತ್ತು ವಿಮಾನ ಗುತ್ತಿಗೆ ಕಂಪನಿಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತದೆ.
ವರ್ಚಸ್ಸಿಗೆ ಹಾನಿ: ಭಾರತೀಯ ವಿಮಾನಯಾನ ಸಂಸ್ಥೆಗಳು ಪದೇಪದೆ ದಿವಾಳಿಯಾಗುವುದರಿಂದ ವಿದೇಶಿ ವಿಮಾನ ಗುತ್ತಿಗೆ ಕಂಪನಿಗಳು ಭಾರತೀಯ ಸಂಸ್ಥೆಗಳಿಗೆ ವಿಮಾನ ನೀಡಲು ಹಿಂದೇಟು ಹಾಕುತ್ತವೆ ಅಥವಾ ಹೆಚ್ಚಿನ ಬಡ್ಡಿ/ಠೇವಣಿ ಕೇಳುತ್ತವೆ.
ಭಾರತದ ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಶೇಕಡ 35ರಿಂದ 40ರಷ್ಟು ಪಾಲು ಇಂಧನಕ್ಕೇ ಹೋಗುತ್ತದೆ. ಭಾರತದಲ್ಲಿ ಎಟಿಎಫ್ ಇನ್ನೂ ಜಿಎಸ್ಟಿ ವ್ಯಾಪ್ತಿಗೆ ಬಾರದ ಕಾರಣ, ಕೇಂದ್ರದ ಅಬಕಾರಿ ಸುಂಕ ಮತ್ತು ರಾಜ್ಯಗಳ ಹೆಚ್ಚಿನ ವ್ಯಾಟ್ ಸೇರಿ ಇಂಧನ ಬೆಲೆ ಜಾಗತಿಕ ದರಕ್ಕಿಂತ ದುಬಾರಿಯಾಗಿದೆ.
ವಿಮಾನಗಳ ಗುತ್ತಿಗೆ ಬಾಡಿಗೆ, ಬಿಡಿಭಾಗಗಳ ಖರೀದಿ, ನಿರ್ವಹಣೆ ಮತ್ತು ವಿಮೆ ಇವೆಲ್ಲವನ್ನೂ ಅಮೆರಿಕನ್ ಡಾಲರ್ನಲ್ಲಿ ಪಾವತಿಸಬೇಕು. ಆದರೆ ಟಿಕೆಟ್ ಮಾರಾಟದ ಆದಾಯ ರೂಪಾಯಿಯಲ್ಲಿ ಬರುತ್ತದೆ. ರೂಪಾಯಿ ಮೌಲ್ಯ ಕುಸಿದಾಗಲೆಲ್ಲ ಸಂಸ್ಥೆಗಳ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು ಸಂಸ್ಥೆಗಳು ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಟಿಕೆಟ್ ಮಾರಾಟ ಮಾಡುತ್ತವೆ. ಇದರಿಂದ ವಿಮಾನಗಳು ಭರ್ತಿಯಾದರೂ ಸಂಸ್ಥೆಗೆ ಲಾಭ ಉಳಿಯುವುದಿಲ್ಲ.
ಬಾಕಿ ಪಾವತಿಸದ ಕಾರಣ ಗುತ್ತಿಗೆದಾರರು ವಿಮಾನಗಳನ್ನು ಹಿಂಪಡೆಯುವುದು ಹಾಗೂ ಇಂಜಿನ್ ಬಿಡಿಭಾಗಗಳ ಪೂರೈಕೆ ಸರಪಳಿಯ ಸಮಸ್ಯೆಯಿಂದ ಅನೇಕ ವಿಮಾನಗಳು ಹಾರಾಟ ನಡೆಸದೆ ನಿಂತಿವೆ. ವಿಮಾನ ಹಾರಾಟ ನಡೆಸದಿದ್ದರೂ ಅದರ ಬಾಡಿಗೆ ಮತ್ತು ನಿಲುಗಡೆ ಶುಲ್ಕವನ್ನು ಸಂಸ್ಥೆಗಳು ಕಟ್ಟಲೇಬೇಕಾಗುತ್ತದೆ.
ಖಾಸಗೀಕರಣಗೊಂಡ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್, ರ್ಪಾಂಗ್ ಮತ್ತು ನ್ಯಾವಿಗೇಷನ್ ಶುಲ್ಕಗಳು ಬಹಳ ಹೆಚ್ಚಿವೆ.
ವಿಮಾನ ಇಂಧನ ಎಟಿಎಫ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳ ದುಬಾರಿ ತೆರಿಗೆ ಕಡಿಮೆಯಾಗಿ ಸಂಸ್ಥೆಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸಿಗುತ್ತದೆ. ಇದು ವಾಯುಯಾನ ಕ್ಷೇತ್ರಕ್ಕೆ ಅತಿದೊಡ್ಡ ಸಂಜೀವಿನಿಯಾಗಬಲ್ಲದು.
ಕೇವಲ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಅವೈಜ್ಞಾನಿಕವಾಗಿ ಸಾಲ ಮಾಡಿ ವಿಮಾನಗಳನ್ನು ಖರೀದಿಸುವ ಬದಲು, ಲಾಭದಾಯಕ ಮಾರ್ಗಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಸುವ ಶಿಸ್ತನ್ನು ಸಂಸ್ಥೆಗಳು ರೂಢಿಸಿಕೊಳ್ಳಬೇಕು.
ಜಾಗತಿಕ ತೈಲ ಬೆಲೆ ಏರಿಳಿತದಿಂದ ರಕ್ಷಣೆ ಪಡೆಯಲು ಭಾರತೀಯ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಫ್ಯೂಯಲ್ ಹೆಡ್ಜಿಂಗ್ ತಂತ್ರವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು.
ಸಣ್ಣ ನಗರಗಳ ನಡುವಿನ ಉಡಾನ್ ಯೋಜನೆಯಡಿ ಸರ್ಕಾರದ ಬೆಂಬಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಹಾಗೂ ಸರಕು ಸಾಗಣೆ ವಿಭಾಗವನ್ನು ಬಲಪಡಿಸುವುದರಿಂದ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು.
ಸಂಸ್ಥೆಗಳ ಆರ್ಥಿಕ ಆರೋಗ್ಯ ಹದಗೆಡುವ ಮೊದಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮತ್ತು ಸರ್ಕಾರ ಎಚ್ಚೆತ್ತುಕೊಂಡು, ಪ್ರಯಾಣಿಕರ ಹಿತರಕ್ಷಣೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು.
ವಾಯುಯಾನ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷೆಗಿಂತ ಸಮರ್ಪಕ ಕಾರ್ಯನಿರ್ವಹಣೆಯೇ ಹೆಚ್ಚು ಮುಖ್ಯ. ಬ್ರಾ್ಯಂಡ್ ಆಕರ್ಷಣೆಗಿಂತ ಹಣಕಾಸಿನ ಶಿಸ್ತು ಮೇಲುಗೈ ಸಾಧಿಸುತ್ತದೆ. ಮಾರುಕಟ್ಟೆ ಪಾಲಿನ ಸುದ್ದಿಗಳಿಗಿಂತ ವ್ಯಾಪಾರದ ವಿಸ್ತಾರ ಮತ್ತು ದಕ್ಷತೆಯೇ ಅನೇಕ ಬಾರಿ ನಿರ್ಣಾಯಕ ವಾಗುತ್ತದೆ ಎಂಬು ದನ್ನು ಅರ್ಥಮಾಡಿ ಕೊಳ್ಳಬೇಕಿದೆ.
2025-26ನೇ ಹಣಕಾಸು ವರ್ಷದಲ್ಲಿ -₹22,000 ಕೋಟಿಗೂ ಅಧಿಕ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ನಿಭಾಯಿಸಲು ಮುಂದಾಗಿದೆ. ಟಾಟಾ ಸನ್ಸ್ ಚೇರ್ಮನ್ ಎನ್.ಚಂದ್ರಶೇಖರನ್, ನೋಯೆಲ್ ಟಾಟಾ ಮತ್ತು ಬೋರ್ಡ್ನ ಸದಸ್ಯರಾದ ಹರೀಶ್ ಮನ್ವಾನಿ, ಅನಿತಾ ಜಾರ್ಜ್ ಮತ್ತು ಸೌರಭ್ ಅಗರ್ವಾಲ್ ಸೇರಿದಂತೆ ಉನ್ನತ ಅಧಿಕಾರಿಗಳು ಗುರುವಾರ ಗುರುಗ್ರಾಮದಲ್ಲಿರುವ ಏರ್ಲೈನ್ ಕಚೇರಿಗೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದ್ದಾರೆ. ಅನಗತ್ಯ ವೆಚ್ಚಗಳನ್ನು ತಡೆಯುವ ಮತ್ತು ನಷ್ಟವನ್ನು ಕಡಿಮೆ ಮಾಡುವ ಬಗ್ಗೆ ಶುಕ್ರವಾರ ನಡೆದ ಕಂಪನಿಯ ಬೋರ್ಡ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸದ್ಯ ಟಾಟಾ ಸನ್ಸ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಒಟ್ಟಾಗಿ ಏರ್ ಇಂಡಿಯಾ ಕಂಪನಿಯನ್ನು ಶಾಶ್ವತ ಲಾಭದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ.