Priyanka Gandhi | ಕಾಂಗ್ರೇಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
ದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕಾರ್ಯಾಚರಣೆಯನ್ನು ಖಂಡಿಸಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ದಾಳಿಯನ್ನು ತೀವ್ರಗೊಳಿಸಿವೆ. ಕಾಂಗ್ರೇಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಸರ್ಕಾರದಿಂದ ಹೊಣೆಗಾರಿಕೆಯನ್ನು ಆಗ್ರಹಿಸಿದ್ದರೆ, ರಾಜ್ಯಸಭಾ ಸದಸ್ಯ, ನಟ ಕಮಲ್ ಹಾಸನ್ ಪ್ರಸ್ತುತ ವ್ಯವಸ್ಥೆಯು ದೇಶದ ಯುವಜನತೆಯನ್ನು ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಈ ಇಬ್ಬರೂ ನಾಯಕರು ಈ ವಿವಾದವನ್ನು ಸರ್ಕಾರ ನಿರ್ವಹಿಸಿದ ರೀತಿ ಹಾಗೂ ಪ್ರತಿಕ್ರಿಯಿಸಿದ ಬಗ್ಗೆ ಪ್ರಶ್ನೆ ಎತ್ತಿದ್ದು, ಕಾಂಗ್ರೇಸ್ ಪಕ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಉತ್ತರಗಳನ್ನು ಒತ್ತಾಯಿಸಿದ್ದರೆ, ಕಮಲ್ ಹಾಸನ್ ವಿದ್ಯಾರ್ಥಿ ಪ್ರತಿಭಟನೆಗೆ ನೀಡಿದ ಪ್ರತಿಕ್ರಿಯೆಯನ್ನು ಟೀಕಿಸಿ, ಹೆಚ್ಚಿನ ಹೊಣೆಗಾರಿಕೆಗೆ ಮನವಿ ಮಾಡಿದ್ದಾರೆ.
ಪೇಪರ್ ಲೀಕ್ ಕುರಿತು ಕೇಂದ್ರವನ್ನು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ನೀಟ್ ಪೇಪರ್ ಲೀಕ್ ಪ್ರಕರಣ ಹಾಗೂ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ಈವರೆಗೆ ಏಕೆ ನಿಗದಿಪಡಿಸಿಲ್ಲ, ಲಾಠಿ ಪ್ರಹಾರ ನಡೆಸಿದ್ದೇಕೆ..? ಎಂದು ನೀವು ಅಮಿತ್ ಶಾ ಅವರನ್ನು ಕೇಳಿದಿರಾ? ಮಕ್ಕಳು ಆಸ್ಪತ್ರೆಯಲ್ಲಿ ಏಕೆ ಇದ್ದಾರೆ? ಈ ವಿದ್ಯಾರ್ಥಿಗಳೇನು ಭಯೋತ್ಪಾದಕರೇ..? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸಂಸತ್ತಿನ ಕಲಾಪಗಳ ಅಡಚಣೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದ ಕಾಂಗ್ರೇಸ್ ನಾಯಕಿ, ಸಂಬಂಧಪಟ್ಟ ಸಚಿವರು ಯಾವಾಗ ರಾಜೀನಾಮೆ ನೀಡುತ್ತಾರೆ ಮತ್ತು ಈ ವಿವಾದದ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಬೇಕಿರುವುದು ಉತ್ತರ, ಬ್ಯಾರಿಕೇಡ್‌ಗಳಲ್ಲ: ಕಮಲ್ ಹಾಸನ್
ರಾಜ್ಯಸಭಾ ಸದಸ್ಯ, ನಟ ಕಮಲ್ ಹಾಸನ್ ಕೂಡ ನೀಟ್ ವಿಷಯ ಮತ್ತು ವಿದ್ಯಾರ್ಥಿ ಪ್ರತಿಭಟನೆಯನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಮಲ್ ಹಾಸನ್, ಮಗುವೊಂದು ಅತ್ತಾಗ ನಾವು ಅವರ ಮಾತು ಆಲಿಸಬೇಕಿತ್ತು. ಆದರೆ ನಮ್ಮ ಅನೇಕ ಮಕ್ಕಳು ಪ್ರಾಣ ಕಳೆದುಕೊಳ್ಳುವವರೆಗೆ ನಾವು ಕಾದೆವು. ಕಲಿಕೆಯ ಜಾಗದಲ್ಲಿ ತರಬೇತಿಯನ್ನು, ಕುತೂಹಲದ ಜಾಗದಲ್ಲಿ ಆತಂಕವನ್ನು ಹಾಗೂ ಬುದ್ಧಿವಂತಿಕೆಯ ಜಾಗದಲ್ಲಿ ಅಪರಾಧವನ್ನು ತಂದಿಡುವ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಸೂಕ್ತ ಉತ್ತರಗಳನ್ನು ನೀಡುವ ಬದಲು ಬ್ಯಾರಿಕೇಡ್‌ಗಳು ಮತ್ತು ಲಾಠಿ ಏಟುಗಳನ್ನು ನೀಡಿದಾಗ ದೇಶವು ಸೋಲುತ್ತದೆ ಎಂದಿರುವ ಕಮಲ್, ನಡೆಯುತ್ತಿರುವ ಈ ಸುದೀರ್ಘ ಹೋರಾಟದಲ್ಲಿ ದೇಶಕ್ಕೆ ವಿವೇಕದ ಧ್ವನಿಯ ಅಗತ್ಯವಿದೆ ಎನ್ನುತ್ತಾ, ಸೋನಮ್ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದರು.
ಸರ್ಕಾರದ ಮೇಲೆ ಒತ್ತಡ ಮುಂದುವರಿಸಿದ ಪ್ರತಿಪಕ್ಷಗಳು
ದೇಶಾದ್ಯಂತದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬರೆದಿರುವ ಕಮಲ್ ಹಾಸನ್, ನೀವು ನಮ್ಮಲ್ಲಿ ಅತ್ಯುತ್ತಮರು. ನಿಮ್ಮ ಕರ್ತವ್ಯವನ್ನು ನೀವು ಮಾಡಿದ್ದೀರಿ, ಈಗ ನಿಮ್ಮ ಕಡೆಗೆ ತನ್ನ ಕರ್ತವ್ಯವನ್ನು ಮಾಡುವುದು ದೇಶದ ಸರದಿ. ನಿಮ್ಮ ಕನಸುಗಳು ಯಾವಾಗಲೂ ನಮ್ಮ ವೈಫಲ್ಯಗಳಿಗಿಂತ ದೊಡ್ಡದಾಗಿರಲಿ ಎಂದು ಆಶಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿಯ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಪ್ರತಿಪಕ್ಷಗಳು ನಿರಂತರ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಈ ಹೇಳಿಕೆಗಳು ಹೊರಬಿದ್ದಿವೆ.
ಈ ವಿವಾದವು ಸಂಸತ್ತಿನ ಒಳಗೂ ಮತ್ತು ಹೊರಗೂ ತೀವ್ರ ವಾಗ್ದಾಳಿಗಳಿಗೆ ಕಾರಣವಾಗಿದ್ದು, ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಪೇಪರ್ ಲೀಕ್‌ಗೆ ಜವಾಬ್ದಾರರಾದವರಿಂದ ಹೊಣೆಗಾರಿಕೆ ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮಕ್ಕೆ ಸೂಕ್ತ ವಿವರಣೆಯನ್ನು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ(ಏಜೆನ್ಸೀಸ್).