- ಏಲಿಯನ್ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ
- ಏಲಿಯನ್ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ
- ಆದರೆ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ
- ನಿಗೂಢತೆಯ ಬೆನ್ನಟ್ಟಿ ಉತ್ತರ ಕಂಡುಕೊಳ್ಳಲು ಭಾರತ ಮತ್ತು ಜಪಾನ್ ಈಗ ಕೈಜೋಡಿಸಿದೆ
ನವದೆಹಲಿ: ಏಲಿಯನ್ ( Aliens ) ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ. ಏಲಿಯನ್ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್ಗಳ ಸಂಗತಿ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಅಂದಹಾಗೆ, ಏಲಿಯನ್ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಏಲಿಯನ್ಗಳ ಇರುವಿಕೆಯನ್ನೇ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್ಒ (ಯೂನಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್) ಎಂದು ಕರೆಯಲಾಗುತ್ತದೆ. ಈ ಯುಎಫ್ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳಿಕೊಳ್ಳುತ್ತಿರುತ್ತಾರೆ. ಈ ನಿಗೂಢತೆಯ ಬೆನ್ನಟ್ಟಿ ಉತ್ತರ ಕಂಡುಕೊಳ್ಳಲು ಭಾರತ ಮತ್ತು ಜಪಾನ್ ಇದೀಗ ಕೈಜೋಡಿಸಿದೆ.
ಬ್ರಹ್ಮಾಂಡದ ಬಗ್ಗೆ ಮನುಷ್ಯನಿಗಿರುವ ದೊಡ್ಡ ಪ್ರಶ್ನೆಗಳಿಗೆ ಉತ್ತರಿಸಲು ಭಾರತ ಮತ್ತು ಜಪಾನ್ ಕೈಜೋಡಿಸುತ್ತಿವೆ. ವಿಶ್ವದ ಅತಿದೊಡ್ಡ ಖಗೋಳ ಉಪಕರಣಗಳಲ್ಲಿ ಒಂದಾದ 'ಥರ್ಟಿ ಮೀಟರ್ ಟೆಲಿಸ್ಕೋಪ್' (ಟಿಎಂಟಿ) ನಿರ್ಮಾಣದಲ್ಲಿ ಎರಡೂ ದೇಶಗಳು ಭಾಗವಹಿಸುತ್ತಿವೆ. 30 ಮೀಟರ್ ವ್ಯಾಸದ ಈ ದೈತ್ಯ ದೂರದರ್ಶಕದ ಸಹಾಯದಿಂದ, ಕಪ್ಪು ಕುಳಿಗಳು, ಭೂಮಿಯಂತಹ ಗ್ರಹಗಳು ಮತ್ತು ಭೂಮಿಯ ಹೊರಗೆ ಜೀವದ ಅಸ್ತಿತ್ವದಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಸಂಶೋಧಕರು ತೊಡಗಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ವಿಶ್ವವಿದ್ಯಾಲಯಗಳು ಸಹ ಈ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಸೇರಿಕೊಂಡಿವೆ. ಟಿಎಂಟಿ ದೂರದರ್ಶಕಕ್ಕೆ ಭಾರತದ ತಾಂತ್ರಿಕ ಭಾಗವಹಿಸುವಿಕೆ ಕೂಡ ಬಹಳ ಮುಖ್ಯವಾಗಿದೆ.
ದೈತ್ಯ ದೂರದರ್ಶಕದ ಮುಖ್ಯ ಭಾಗವು 500 ಸಣ್ಣ ಕನ್ನಡಿಗಳಿಂದ ಮಾಡಲ್ಪಟ್ಟಿದೆ. ಎಲ್ಲ 500 ಕನ್ನಡಿಗಳನ್ನು ಯಾವುದೇ ತಪ್ಪುಗಳಿಲ್ಲದೆ ನಿಖರವಾದ ಸ್ಥಾನ ಮತ್ತು ಕೋನದಲ್ಲಿ ಇರಿಸಬೇಕಾಗುತ್ತದೆ. ಟಿಎಂಟಿ ಸ್ಥಾಪನೆಗೆ ಜಪಾನಿನ ಕೇಂದ್ರ ಸಚಿವ ಸಂಪುಟ 2014 ರಲ್ಲಿ ಅನುಮೋದನೆ ನೀಡಿತು. ಈ ದೂರದರ್ಶಕದ ಸ್ಥಾಪನೆಗೆ ಆಯ್ಕೆ ಮಾಡಲಾದ ಮುಖ್ಯ ಸ್ಥಳವೆಂದರೆ ಅದು ಹವಾಯಿಯ ಮೌನಾ ಕಿಯಾ. ಆದಾಗ್ಯೂ, ಆ ಪ್ರದೇಶದಲ್ಲಿ ಸ್ಥಳೀಯರ ಪ್ರತಿಭಟನೆಯಿಂದಾಗಿ, ಈ ವಿಷಯದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇವೆ. ಲಡಾಖ್‌ನಲ್ಲಿರುವ ಹ್ಯಾನ್ಲೆಯನ್ನು ಸಹ ಈ ದೂರದರ್ಶಕಕ್ಕೆ ಪರ್ಯಾಯ ತಾಣವಾಗಿ ಪರಿಗಣಿಸಲಾಗುತ್ತಿದೆ.
ಈ ದೂರದರ್ಶಕದ ಸಹಾಯದಿಂದ ನಮ್ಮ ಸೌರವ್ಯೂಹದ ಹೊರಗಿನ ಬಾಹ್ಯ ಗ್ರಹಗಳಲ್ಲಿ ನೀರಿನ ಆವಿ ಮತ್ತು ಸಾವಯವ ಅಣುಗಳಂತಹ ಜೀವದ ಕುರುಹುಗಳನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ. ದೂರದರ್ಶಕವು 2030ರ ದಶಕದ ಮಧ್ಯಭಾಗದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿರುವ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA), ಪುಣೆಯಲ್ಲಿರುವ ಅಂತರ ವಿಶ್ವವಿದ್ಯಾಲಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರ (IUCAA) ಮತ್ತು ನೈನಿತಾಲ್‌ನಲ್ಲಿರುವ ಆರ್ಯಭಟ ವೀಕ್ಷಣಾ ವಿಜ್ಞಾನ ಸಂಶೋಧನಾ ಸಂಸ್ಥೆ (ARIS) ಈ ಯೋಜನೆಯಲ್ಲಿ ಭಾಗವಹಿಸುತ್ತಿವೆ, (ಏಜೆನ್ಸೀಸ್).