ನವದೆಹಲಿ: ಆಪಲ್ ಕಂಪನಿಯು ಭಾರತವನ್ನು ತನ್ನ ಉತ್ಪನ್ನಗಳ ತಯಾರಿಕೆಗೆ, ವಿಶೇಷವಾಗಿ ಐಫೋನ್ (I Phone) ತಯಾರಿಕೆಗೆ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಇದರ ಪರಿಣಾಮ 2025 ರಲ್ಲಿ ಕ್ಯುಪರ್ಟಿನೊ ಕಂಪನಿಯು ಸುಮಾರು 50 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ದೃಢಪಡಿಸಿದ್ದಾರೆ.
ಭಾರತದಿಂದ ಆಪಲ್ ಎಷ್ಟು ಐಫೋನ್‌ಗಳನ್ನು ರಫ್ತು ಮಾಡಿದೆ?
ಎಕ್ಸ್‌ನಲ್ಲಿ, ಅಶ್ವಿನಿ ವೈಷ್ಣವ್,ಭಾರತದಿಂದ ಐಫೋನ್ ರಫ್ತಿನಲ್ಲಿ ಆಪಲ್ 50 ಬಿಲಿಯನ್ ಡಾಲರ್ ಮೈಲಿಗಲ್ಲನ್ನು ದಾಟಿದೆ ಎಂದು ದೃಢಕರಿಸಿದ್ದಾರೆ. ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದಾಗ ಸರಿಸುಮಾರು 4.51 ಲಕ್ಷ ಕೋಟಿ ಆಗುತ್ತದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಮತ್ತು ಪ್ರಮುಖ ಉತ್ಪಾದಕ ಆರ್ಥಿಕತೆಯಾಗಬೇಕೆಂಬ ಯೋಜನೆಗೆ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಬರೆದಿದ್ದಾರೆ.
ವರದಿಗಳ ಪ್ರಕಾರ, ಆಪಲ್ 2026 ರ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಭಾರತದಿಂದ ಸುಮಾರು 16 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ರವಾನಿಸಿದೆ. ಆಪಲ್ 2022 ರಲ್ಲಿ ಭಾರತ ಸರ್ಕಾರದ ಸ್ಮಾರ್ಟ್‌ಫೋನ್ ಉತ್ಪಾದನಾ ಲಿಂಕ್ಡ್ ಇನಿಶಿಯೇಟಿವ್ (PLI) ಯೋಜನೆಗೆ ಸೇರಿತು. ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ದೈತ್ಯ ಕಂಪನಿ ಕ್ಯುಪರ್ಟಿನೊ ಸುಮಾರು 3,50,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ.
ಭಾರತೀಯ ಎಲೆಕ್ಟ್ರಾನಿಕ್ಸ್ ರಫ್ತು 8 ಪಟ್ಟು ಹೆಚ್ಚಳ
ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮವು ಕಳೆದ 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ 6 ಪಟ್ಟು ಹೆಚ್ಚಾಗಿದೆ ಮತ್ತು ಪ್ರಧಾನಿ ಮೋದಿ ಜಿ ಅವರ ಕೇಂದ್ರೀಕೃತ ನಾಯಕತ್ವದಲ್ಲಿ ಎಲೆಕ್ಟ್ರಾನಿಕ್ಸ್ ರಫ್ತು 8 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರ ಪ್ರಕಾರ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಈಗ ದೇಶಕ್ಕೆ ರಫ್ತು ಮಾಡಲಾದ ಟಾಪ್ 3 ವಸ್ತುಗಳಲ್ಲಿ ಸೇರಿವೆ. ಇದು ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಾಗಿರದೇ 46 ಘಟಕ ಉತ್ಪಾದನಾ ಯೋಜನೆಗಳು, ಲ್ಯಾಪ್‌ಟಾಪ್, ಸರ್ವರ್ ಮೊದಲಾದವುಗಳನ್ನು ಯಶಸ್ವಿಯಾಗಿ ರಫ್ತು ಮಾಡುತ್ತಿದೆ ಎಂದು ಹೇಳಿದರು,(ಏಜನ್ಸೀಸ್).