Amit Shah | ವಂದೇ ಮಾತರಂ ಗೀತೆ ತುಂಡರಿಸಿದ ಕಾಂಗ್ರೆಸ್‌ ವಿರುದ್ಧ ಅಮಿತ್​ ಷಾ ಗರಂ 
ದೇಶ

ವೋಟ್ ಬ್ಯಾಂಕ್‌ ರಾಜಕೀಯಕ್ಕಾಗಿ ದೇಶವಿರೋಧಿ ನಡೆ!...ವಂದೇ ಮಾತರಂ ಗೀತೆ ತುಂಡರಿಸಿದ ಕಾಂಗ್ರೆಸ್‌ ವಿರುದ್ಧ ಅಮಿತ್​ ಷಾ ಗರಂ | Amit Shah

ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡದಿರಲು ನಿರ್ಣಯ ಅಂಗೀಕರಿಸಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ (

Amit Shah)

ಖಂಡಿಸಿದ್ದು, ಕೈ ನಾಯಕರು ತಮ್ಮ ವೋಟ್ ಬ್ಯಾಂಕ್‌ ರಾಜಕೀಯಕ್ಕಾಗಿ ದೇಶವಿರೋಧಿ ಮತ್ತು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಷಾ ಆರೋಪಿಸಿದ್ದಾರೆ.

ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯ ಬಳಿಕ ಎಎನ್​ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಗೃಹ ಸಚಿವ ಷಾ, 1937ರಲ್ಲಿ ವಂದೇ ಮಾತರಂನ ಮೊದಲ ಎರಡು ನುಡಿಗಳನ್ನು ಮಾತ್ರ ಹಾಡಲು ನಿರ್ಣಯ ಅಂಗೀಕರಿಸಿದಾಗ ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತ್ತು. ಆದರೆ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಮೂಲಕ ಮೋದಿ ಸರ್ಕಾರವು ಈ ತಪ್ಪನ್ನು ತಿದ್ದಲು ಯತ್ನಿಸಿದೆ ಎಂದು ಹೇಳಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್​ ಷಾ, ರಾಷ್ಟ್ರೀಯ ಗೀತೆಯನ್ನು ರಚಿಸಿದ ಬಂಕಿಮಚಂದ್ರ ಚಟರ್ಜಿ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತ್ಯಾಗ ಮಾಡಿದವರನ್ನು ಕಾಂಗ್ರೆಸ್ ಪಕ್ಷವು ಅವಮಾನಿಸುತ್ತಿದೆ ಎಂದು ಆರೋಪಿಸಿದರು.

ಅಮಿತ್​ ಷಾ ಹೇಳಿದ್ದೇನು...?

ಇಂದು ಕಾಂಗ್ರೆಸ್ ಪಕ್ಷವು ಸಂಸತ್ತು ಮಾಡಿದ ಕಾನೂನನ್ನು ತಿರಸ್ಕರಿಸುವ ಮೂಲಕ ತನ್ನ 1937ರ ನಿರ್ಣಯವನ್ನು ಜಾರಿಗೆ ತರುತ್ತಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಓಲೈಕೆ ರಾಜಕೀಯವನ್ನು ಮುಂದುವರಿಸುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ದೇಶವು ಒಮ್ಮೆ ವಂದೇ ಮಾತರಂ ಅನ್ನು ಎರಡು ಭಾಗಗಳಾಗಿ ವಿಂಗಡಿಸಲು ಬಿಟ್ಟು ತಪ್ಪು ಮಾಡಿದೆ ಮತ್ತು ಅದರ ಪರಿಣಾಮಗಳನ್ನು ನಾವು ಎದುರಿಸಿದ್ದೇವೆ. ಈಗ, ದೇಶವು ಕಾಂಗ್ರೆಸ್ ಪಕ್ಷದ ಈ ನಿರ್ಧಾರದ ವಿರುದ್ಧ ಒಂದಾಗಬೇಕು ಮತ್ತು ಅವರ ಓಲೈಕೆಯ ರಾಜಕೀಯ ಇನ್ನು ಮುಂದೆ ನಡೆಯುವುದಿಲ್ಲ ಎಂದು ಹೇಳಬೇಕು ಎಂದು ಎಐಸಿಸಿ ನಿರ್ಣಯವನ್ನು ಅಮಿತ್​ ಷಾ ಖಂಡಿಸಿದ್ದಾರೆ.
ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ, ಈ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ತನ್ನ ಎಲ್ಲಾ ಪಕ್ಷದ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯ ಮೊದಲ ಎರಡು ನುಡಿಗಳನ್ನು ಮಾತ್ರ ಹಾಡುವ 1937ರ ನಿರ್ಣಯಕ್ಕೆ ಬದ್ಧವಾಗಿರುವುದಾಗಿ ಪಕ್ಷ ಹೇಳಿದೆ.
1937ರ ನಿರ್ಣಯವನ್ನು ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮೌಲಾನಾ ಆಜಾದ್ ಭಾಗವಹಿಸಿದ್ದ ಸಿಡಬ್ಲ್ಯೂಸಿ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ಬಿಜೆಪಿ ಈ ನಿರ್ಣಯವನ್ನು ಟೀಕಿಸುತ್ತಿದೆ ಮತ್ತು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇರಿದಂತೆ ಅದರ ಹಲವು ಹಿರಿಯ ನಾಯಕರು, ಕಾಂಗ್ರೆಸ್ ಪಕ್ಷವು ತನ್ನನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದರೂ, ಓಲೈಕೆ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಆಗಿದೆ ಎಂದು ಆರೋಪಿಸಿದ್ದಾರೆ(ಏಜೆನ್ಸೀಸ್​).