ಒಲಿಂಪಿಯನ್​ ಕುಸ್ತಿಪಟು ವಿನೇಶ್​ ಪೋಗಟ್​ 
ದೇಶ

ಬ್ರಿಜ್‌ಭೂಷಣ್​ ಊರಿನಲ್ಲಿ ಅಹಿತಕರ ಘಟನೆ ನಡೆದರೆ ಕೇಂದ್ರವೇ ಹೊಣೆ: ವಿನೇಶ್ ಫೋಗಟ್​ ಸಿಡಿನುಡಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಡಬ್ಲ್ಯೂಎಫ್​ಐ ಅಧ್ಯಕ್ಷನ ವಿರುದ್ಧ ಗುಡುಗಿದ ಒಲಿಂಪಿಯನ್​ ಕುಸ್ತಿಪಟು ವಿನೇಶ್​ ಫೋಗಟ್​
  • ಉತ್ತರ ಪ್ರದೇಶದ ಗೊಂಡಾದಲ್ಲಿ ತನಗೆ ಏನಾದರೂ ಆದ್ರೆ ಸರ್ಕಾರವೇ ಹೊಣೆ
  • ಬ್ರಿಜ್​ಭೂಷಣ್​ ಊರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ 100ಕ್ಕೆ 100 ಕೊಡುವುದು ಕಷ್ಟಸಾಧ್ಯ
ನವದೆಹಲಿ: ಮೇ10ರಿಂದ ಗೊಂಡಾದಲ್ಲಿ ನಡೆಯಲಿರುವ ಸೀನಿಯರ್ ಓಪನ್ ರ‍್ಯಾಂಕಿಂಗ್ ಕುಸ್ತಿ ಪಂದ್ಯಾವಳಿಯ ಭಾಗವಾಗಿ ಸ್ಪರ್ಧಿಸಲಿರುವ ಭಾರತೀಯ ಕುಸ್ತಿಪಟು ವಿನೇಶ್​ ಫೋಗಟ್, ಮಾಜಿ ಡಬ್ಲ್ಯೂಎಫ್​ಐ ಅಧ್ಯಕ್ಷನ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.   
​  
ಒಂದು ವರ್ಷದ ಬಳಿಕ ಮತ್ತೆ ಕುಸ್ತಿ ಅಖಾಡಕ್ಕೆ ಇಳಿಯುತ್ತಿರುವ ವಿನೇಶ್​, ಟೂರ್ನಮೆಂಟ್​ಗೂ ಮುನ್ನ ಒಂದು ವಿಡಿಯೋ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ. ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅವರು, ಭೂಷಣ್​ ಊರಿನಲ್ಲಿ ಸರ್ಧಿಸುವುದು ನಿಜಕ್ಕೂ ಕಷ್ಟಸಾಧ್ಯ ಎಂದಿದ್ದಾರೆ. 
"ಮೇ10ರಿಂದ 12ರವರೆಗೆ ಉತ್ತರ ಪ್ರದೇಶದ ಗೊಂಡಾದಲ್ಲಿ ಸೀನಿಯರ್ ಓಪನ್ ರ‍್ಯಾಂಕಿಂಗ್ ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ. ಈ ಸಮಯದಲ್ಲಿ ನಾನು ಬ್ರಿಜ್‌ಭೂಷಣ್ ಶರಣ್ ಬಗ್ಗೆ ಮಾತನಾಡಲೇಬೇಕು. ಆತನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು. ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ ಎಂದರು. 
ಈಗ ಆತನ ಊರಾದ ಗೊಂಡಾದಲ್ಲಿ ಸ್ಪರ್ಧಿಸುವುದು ತುಂಬ ಕಷ್ಟಕರವಾಗಿದೆ. ನನ್ನಿಂದ 100ಕ್ಕೆ 100 ಕೊಡಲು ಸಾಧ್ಯವಾಗುವುದಿಲ್ಲ. ಇದು ಒಬ್ಬ ಹುಡುಗಿಗೆ ಅತ್ಯಂತ ಕಠಿಣ. ನಾನು ಮತ್ತು ನನ್ನ ತಂಡ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತೇವೆ, ಈ ಸಮಯದಲ್ಲಿ, ಯಾರಿಗಾದರೂ ಏನಾದರೂ ತೊಂದರೆ ಆದರೆ ಅಥವಾ ತಪ್ಪು ನಡೆದರೆ ಅದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ವಿಡಿಯೋ ಮೂಲಕ ಹೇಳಿರುವುದು ಸದ್ಯ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 
ಸುಮಾರು 3 ವರ್ಷಗಳ ಹಿಂದೆ, ವಿನೇಶ್ ಅವರು ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಿಜ್​ಭೂಷಣ್​ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಇದಕ್ಕಾಗಿ ಅವರು, ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ಮಹಿಳಾ ಕುಸ್ತಿಪಟುಗಳ ಜೊತೆಗೂಡಿ ಬ್ರಿಜ್‌ಭೂಷಣ್ ವಿರುದ್ಧ ದೊಡ್ಡ ಪ್ರತಿಭಟನೆ ಕೂಡ ನಡೆಸಿದ್ದರು. ಈಗ ವಿಡಿಯೋ ಮೂಲಕ ಮತ್ತೊಮ್ಮೆ ಒಲಿಂಪಿಯನ್​ ಕುಸ್ತಿಪಟು ಭೂಷಣ್​ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ,(ಏಜೆನ್ಸೀಸ್).