Anshu Malika  
ದೇಶ

ರೋಜಾ ಪುತ್ರಿ ಐತಿಹಾಸಿಕ ಸಾಧನೆ: ಪ್ರತಿಷ್ಠಿತ ‘ಹರ್ಮನ್ ಬಿ ವೆಲ್ಸ್’ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿದ್ಯಾರ್ಥಿನಿ! | Anshu Malika

ಚೆನ್ನೈ/ಹೈದರಾಬಾದ್: ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ್ದ ನಟಿ, ಪ್ರಸ್ತುತ ರಾಜಕಾರಣಿ ರೋಜಾ ಸೆಲ್ವಮಣಿ ಅವರ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ. ಇದಕ್ಕೆ ಕಾರಣ ಅವರ ಪುತ್ರಿ ಅಂಶು ಮಲಿಕಾ ಸೆಲ್ವಮಣಿ ( Anshu Malika ) ಅಮೆರಿಕದ ನೆಲದಲ್ಲಿ ಮಾಡಿರುವ ಅಭೂತಪೂರ್ವ ಶೈಕ್ಷಣಿಕ ಸಾಧನೆ. ಪ್ರತಿಷ್ಠಿತ ಹರ್ಮನ್ ಬಿ ವೆಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಅಂಶು ಮಲಿಕಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಯೂನಿವರ್ಸಿಟಿ ಇತಿಹಾಸದಲ್ಲೇ ಮೊದಲು!

ಅಂಶು ಮಲಿಕಾ ಅವರು ಅಮೆರಿಕದ ಬ್ಲೂಮಿಂಗ್ಟನ್‌ನಲ್ಲಿರುವ ಇಂಡಿಯಾನಾ ವಿಶ್ವವಿದ್ಯಾಲಯದ ‘ಲುಡ್ಡಿ ಸ್ಕೂಲ್ ಆಫ್ ಇನ್ಫರ್ಮ್ಯಾಟಿಕ್ಸ್, ಕಂಪ್ಯೂಟಿಂಗ್ ಮತ್ತು ಎಂಜಿನಿಯರಿಂಗ್’ನಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಶ್ವವಿದ್ಯಾಲಯವು ಇವರಿಗೆ ಅತ್ಯಂತ ಗೌರವಾನ್ವಿತ ‘ಹರ್ಮನ್ ಬಿ ವೆಲ್ಸ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿಶೇಷವೆಂದರೆ, ಈ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಅಂಶು ಪಾತ್ರರಾಗಿದ್ದಾರೆ. ಶೈಕ್ಷಣಿಕ ಶ್ರೇಷ್ಠತೆ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಅತ್ಯುನ್ನತ ಶ್ರೇಣಿಯಲ್ಲಿ ಪದವಿ ಪೂರ್ಣ

ಕೇವಲ ಪ್ರಶಸ್ತಿ ಮಾತ್ರವಲ್ಲದೆ, ಅಂಶು ಮಲಿಕಾ ಅವರು ತಮ್ಮ ಪದವಿ ಶಿಕ್ಷಣವನ್ನು ‘ಅತ್ಯುನ್ನತ ವಿಶಿಷ್ಟತೆ’ಯೊಂದಿಗೆ (Highest Distinction) ಪೂರ್ಣಗೊಳಿಸಿದ್ದಾರೆ. ಮಗಳ ಈ ಸತತ ಯಶಸ್ಸು ರೋಜಾ ಅವರ ಕುಟುಂಬಕ್ಕೆ ಅತೀವ ಹೆಮ್ಮೆ ತಂದಿದೆ. ಶೈಕ್ಷಣಿಕವಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ ಅಂಶು ಅವರಿಗೆ ಆನ್‌ಲೈನ್‌ನಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿಯುತ್ತಿದೆ.

ಮರೆಯಲಾಗದ ತಾಯಂದಿರ ದಿನದ ಉಡುಗೊರೆ

ತಮ್ಮ ಮಗಳ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೋಜಾ ಅವರು ಭಾವುಕ ಸಂದೇಶವೊಂದನ್ನು ಬರೆದಿದ್ದಾರೆ. "ಈ ತಾಯಂದಿರ ದಿನವು ನನ್ನ ಜೀವನದಲ್ಲಿ ಮರೆಯಲಾಗದಂತಾಗಿದೆ. ನನ್ನ ಮಗಳು ಅಂಶು ಮಲಿಕಾ ಅತ್ಯುನ್ನತ ಡಿಸ್ಟಿಂಕ್ಷನ್‌ನೊಂದಿಗೆ ಪದವಿ ಪಡೆದಿದ್ದಾಳೆ. ಒಬ್ಬ ತಾಯಿಯಾಗಿ ಇದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ ಮತ್ತು ಸಂತೋಷದ ಉಡುಗೊರೆ" ಎಂದು ಅವರು ಸಂಭ್ರಮಿಸಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ನಟನೆಯಿಂದ ರಾಜಕೀಯದವರೆಗೆ ರೋಜಾ ಪಯಣ

1992 ರಲ್ಲಿ ‘ಚೆಂಬರುತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರೋಜಾ, ರಜನಿಕಾಂತ್ ಸೇರಿದಂತೆ ದಕ್ಷಿಣದ ಬಹುತೇಕ ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದರು. ನಂತರ ರಾಜಕೀಯ ಪ್ರವೇಶಿಸಿದ ಅವರು ಆಂಧ್ರಪ್ರದೇಶದಲ್ಲಿ ಶಾಸಕಿಯಾಗಿ ಹಾಗೂ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ‘ಲೆನಿನ್ ಪಾಂಡಿಯನ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಮರಳಿರುವ ಅವರು, ಈಗ ಮಗಳ ಅಂತರಾಷ್ಟ್ರೀಯ ಮಟ್ಟದ ಸಾಧನೆಯಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ,(ಏಜೆನ್ಸೀಸ್​).