D K Shivakumar | ಒಡಿಸ್ಸಾ ಶಾಸಕರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ | ಶಾಸಕರನ್ನು ಖರೀದಿ ಮಾಡಲು ಬಂದಿದ್ದ ಇಬ್ಬರು ವ್ಯಕ್ತಿಗಳು
ಬೆಂಗಳೂರು: ಒಡಿಸ್ಸಾದಿಂದ ಬಂದ ನಾಲ್ವರು, ಬಿಡದಿಯಲ್ಲಿ ವಾಸ್ತವ್ಯ ಹೂಡಿರುವ ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ, ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡುವಂತೆ ತಲಾ 5 ಕೋಟಿ ರೂ. ಹಣದ ಆಮಿಷ ಒಡ್ಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar) ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ, ಆಮೀಷಕ್ಕೆ ಬಲಿಯಾಗದೆ ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಸಿದ್ಧರಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎಂದರು.
ಒಡಿಸ್ಸಾದಿಂದ ಬಂದಿರುವ ನಾಲ್ಕು ಜನರು ಸ್ಥಳೀಯ ಬ್ಯಾಟರಾಯನಪುರ ನಿವಾಸಿ ಸುರೇಶ್ ಎಂಬಾತನ ಸಹಾಯ ಪಡೆದು ರೂಮ್ ಬುಕ್ ಮಾಡಿಸಿದ್ದಾರೆ. ಇದಾದ ಬಳಿಕ ಶಾಸಕರಿಗೆ ಆಮಿಷ ಒಡ್ಡಿದಾಗ ನಮ್ಮ ಪಕ್ಷದ ಎಂಎಲ್ಎಗಳು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು. ಆಮಿಷ ಒಡ್ಡಿದ ನಾಲ್ವರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದು ಮತ್ತಿಬ್ಬರನ್ನು ಹಿಡಿಯಲಾಗಿದೆ. ಅವರು ಇದೇ ಕೆಲಸಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದು, ಖಾಲಿ ಚೆಕ್ ತಂದಿದ್ದಾರೆ. ಈ ಮೂಲಕ ಆಪರೇಷನ್ ಕಮಲ ಮಾಡಲಾಗುತ್ತಿದೆ. ಎಐಸಿಸಿ ಕಾರ್ಯದರ್ಶಿಯವರು ಹಾಗೂ ಉಳಿದ ನಾಯಕರು ಇತರೇ ವಿಚಾರ ತಿಳಿಸಲಿದ್ದು, ಆಮಿಷ ಒಡ್ಡಿದವರ ವಿರುದ್ಧ ದೂರು ನೀಡಲಾಗುತ್ತದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಭೇಟಿ ಬಗ್ಗೆ ಹೇಳಿದ್ದೇನು..?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆಶಿ, ಪಕ್ಷದ ಶಾಸಕರು, ಅಧ್ಯಕ್ಷರನ್ನು ಭೇಟಿ ಮಾಡದೆ ಬಿಜೆಪಿ ಅಧ್ಯಕ್ಷರನ್ನು ಭೇಟಿ ಮಾಡಲು ಆಗುತ್ತದೆಯೇ? ಎಂದು ಮರುಪ್ರಶ್ನಿಸಿದರು.
ಕೇಂದ್ರ ಚುನಾವಣಾ ಆಯೋಗದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯದ ಉಪಚುನಾವಣೆಯ ಬಗ್ಗೆ ಘೋಷಣೆ ಮಾಡಲಾಗುವುದೇ ಎಂದು ಕೇಳಿದಾಗ, ಮಾಡಲಿ ಬಿಡಿ, ನಾವು ತಯಾರಾಗಿದ್ದೇವೆ. ನಮಗೆ ಯಾವುದೇ ಅನುಮಾನವಿಲ್ಲ, ಎಲ್ಲಾ ವರದಿ ತರಿಸಿಕೊಂಡಿದ್ದೇವೆ. ಎಲ್ಲಾ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ. ನಾವು ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ ಎಂದರು.
ದಾವಣಗೆರೆ ಟಿಕೆಟ್ ಹಂಚಿಕೆ ಕುರಿತಾಗಿ ಯಾವ ಗೊಂದಲವೂ ಇಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಒಪ್ಪಿಕೊಳ್ಳುವುದಾಗಿ ಎಲ್ಲಾ ನಾಯಕರು ಹೇಳಿದ್ದಾರೆ ಎಂದು ತಿಳಿಸಿದರು.