ಮಮತಾಗೆ ಮತ್ತೊಂದು ಶಾಕ್: ಇಂದು ಟಿಎಂಸಿಯ ಇಬ್ಬರು ರಾಜ್ಯಸಭಾ ಸಂಸದರ ರಾಜೀನಾಮೆ ಸಾಧ್ಯತೆ! 
ದೇಶ

ಮಮತಾಗೆ ಮತ್ತೊಂದು ಶಾಕ್: ಇಂದು ಟಿಎಂಸಿಯ ಇಬ್ಬರು ರಾಜ್ಯಸಭಾ ಸಂಸದರ ರಾಜೀನಾಮೆ ಸಾಧ್ಯತೆ! Sukhendu - Koel Mallick Resignation

ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ದೀದಿಗೆ ಭಾರಿ ಹಿನ್ನಡೆಯಾಗುವ ಮುನ್ಸೂಚನೆ ಸಿಕ್ಕಿದೆ. ಟಿಎಂಸಿಯ ಇಬ್ಬರು ಪ್ರಮುಖ ರಾಜ್ಯಸಭಾ ಸಂಸದರಾದ ಸುಖೇಂದು ಶೇಖರ್ ರಾಯ್ ಮತ್ತು ಕೋಯಲ್ ಮಲ್ಲಿಕ್(Sukhendu - Koel Mallick Resignation) ಅವರು ಇಂದು (ಸೋಮವಾರ) ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಸ್ತುತ ರಾಜ್ಯಸಭೆಯಲ್ಲಿ ಟಿಎಂಸಿ 13 ಸಂಸದರ ಬಲವನ್ನು ಹೊಂದಿದೆ. ಒಂದು ವೇಳೆ ಇವರಿಬ್ಬರು ಅಧಿಕೃತವಾಗಿ ಹೊರನಡೆದರೆ ಪಕ್ಷದ ಸಂಖ್ಯಾಬಲ 11 ಕ್ಕೆ ಕುಸಿಯಲಿದ್ದು, ಸಂಸತ್ತಿನಲ್ಲಿ ಟಿಎಂಸಿ ಧ್ವನಿ ದುರ್ಬಲಗೊಳ್ಳುವ ಸಾಧ್ಯತೆ ಇದೆ.

ಅವಧಿಗೂ ಮುನ್ನವೇ ಹೊರನಡೆಯಲು ನಿರ್ಧಾರ!

ರಾಜೀನಾಮೆ ನೀಡಲು ಮುಂದಾಗಿರುವ ಸಂಸದ ಸುಖೇಂದು ಶೇಖರ್ ರಾಯ್ ಅವರ ಅಧಿಕಾರಾವಧಿ 2029 ರ ಆಗಸ್ಟ್‌ವರೆಗೆ ಇತ್ತು. ಇನ್ನು ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ಕೋಯಲ್ ಮಲ್ಲಿಕ್ ಅವರ ಅವಧಿ 2032 ರ ಏಪ್ರಿಲ್‌ವರೆಗೆ ಇತ್ತು. ಇವರಿಬ್ಬರ ಈ ದಿಢೀರ್ ನಡೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ಹೈಕಮಾಂಡ್ ವಿರುದ್ಧ ಸಂಸದರು ದಂಗೆ ಏಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿಗಳಿಗೆ ಈ ಬೆಳವಣಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ದೀದಿ ವಿರುದ್ಧ ತಿರುಗಿಬಿದ್ದ ಸಂಸದರು!

ಕಳೆದ ಕೆಲವು ದಿನಗಳಿಂದ ಟಿಎಂಸಿಯ ಹಲವು ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ಪಕ್ಷದ ಉನ್ನತ ನಾಯಕರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದರು. ಪಕ್ಷದ ಆಡಳಿತ ಶೈಲಿ ಮತ್ತು ನಿರ್ಧಾರಗಳ ಬಗ್ಗೆ ಸಂಸದರಲ್ಲಿ ತೀವ್ರ ಅಸಮಾಧಾನವಿತ್ತು ಎನ್ನಲಾಗಿದೆ.

ಕಾಕೋಲಿ ಘೋಷ್ ದಸ್ತಿದಾರ್ ಕೂಡ ಔಟ್!

ಮಮತಾ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಾಯಕಿ, ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಈಗಾಗಲೇ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿ ಬಂಡಾಯದ ಬಾವುಟ ಹಾರಿಸಿದ್ದಾರೆ.

ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಗಂಭೀರ ಆರೋಪ

ಪಕ್ಷದೊಳಗಿನ ಭಿನ್ನಮತ ಇಷ್ಟಕ್ಕೇ ನಿಂತಿಲ್ಲ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್, ತಮ್ಮದೇ ಪಕ್ಷದ ಸಹೋದ್ಯೋಗಿ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಗಂಭೀರ ದೂರು ನೀಡಿದ್ದಾರೆ. ಅಲ್ಲದೆ, ಅವರು ನನ್ನ ವಿರುದ್ಧ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಮಮತಾ ಲೋಕಸಭೆಗೆ? ಯೂಸುಫ್ ಪಠಾಣ್ ಸ್ಪಷ್ಟನೆ!

ಪಕ್ಷದ ಸಂಸದರಲ್ಲೇ ಅಸಮಾಧಾನ ಸ್ಫೋಟಗೊಂಡಿರುವ ಬೆನ್ನಲ್ಲೇ, ಮಮತಾ ಅವರು ಲೋಕಸಭೆಗೆ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಇದಕ್ಕಾಗಿ ಬಹರಂಪುರ ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ಸ್ಥಾನ ತ್ಯಾಗ ಮಾಡುವಂತೆ ಸೂಚಿಸಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಯೂಸುಫ್ ಪಠಾಣ್, ನನ್ನ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸಲು ನನಗೆ ರಾಜೀನಾಮೆ ನೀಡುವಂತೆ ಕೇಳಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಮಮತಾ ಅವರಾಗಲಿ ಅಥವಾ ಪಕ್ಷದ ಯಾವುದೇ ಹಿರಿಯ ನಾಯಕರಾಗಲಿ ನನ್ನೊಂದಿಗೆ ಈ ಬಗ್ಗೆ ಮಾತನಾಡಿಲ್ಲ. ನಾನು ರಾಜೀನಾಮೆ ನೀಡುತ್ತಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸದ್ಯ ಲೋಕಸಭೆಯಲ್ಲಿ 29 ಸದಸ್ಯರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್, ಒಳಗಿನ ಈ ಭಿನ್ನಮತದ ಬಿರುಗಾಳಿಯನ್ನು ಹೇಗೆ ನಿಭಾಯಿಸಲಿದೆ ಮತ್ತು ಮಮತಾ ಬ್ಯಾನರ್ಜಿ ಅವರು ಈ ಬಿಕ್ಕಟ್ಟಿನಿಂದ ಹೇಗೆ ಪಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).