ಮಮತಾ ಬ್ಯಾನರ್ಜಿ ಮತ್ತು ಜ್ಯೋತಿಪ್ರಿಯ ಮಲ್ಲಿಕ್ 
ದೇಶ

ಟಿಎಂಸಿಗೆ ಮತ್ತೊಂದು ಹಿನ್ನಡೆ: ಅನಾರೋಗ್ಯದ ನೆಪ ಹೇಳಿ ಪಕ್ಷ ಬಿಟ್ಟ ಮಮತಾ ಬ್ಯಾನರ್ಜಿಯ ನಿಷ್ಠಾವಂತ ಒಡನಾಡಿ ಜ್ಯೋತಿಪ್ರಿಯ | Jyotipriya

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ್ತೊಂದು ಹಿನ್ನಡೆಯಾಗಿದ್ದು, 1998ರಲ್ಲಿ ಮಮತಾ ಬ್ಯಾನರ್ಜಿ ಅವರು ಪಕ್ಷ ಸ್ಥಾಪಿಸುವ ಮೊದಲಿನಿಂದಲೂ ಅವರ ಜೊತೆಯಿದ್ದ, ಮತ್ತು ನಿಷ್ಠವಂತರೆನಿಸಿಕೊಂಡಿದ್ದ ಮಾಜಿ ಸಚಿವ ಜ್ಯೋತಿಪ್ರಿಯ ಮಲ್ಲಿಕ್(Jyotipriya Mallick) ಅವರು ಅನಾರೋಗ್ಯದ ನೆಪ ಹೇಳಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಶನಿವಾರ(ಜೂ. 20) ವರದಿಯಾಗಿದೆ.
ಶುಕ್ರವಾರ(ಜೂ. 19) ಮಮತಾ ಬ್ಯಾನರ್ಜಿ ಅವರಿಗೆ ಬಂಗಾಳಿಯಲ್ಲಿ ಕೈ ಬರಹದ ಮೂಲಕ ಪತ್ರ ಬರೆದಿರುವ ಅವರು, ಚ್ಚಿನ ಸಕ್ಕರೆ ಅಂಶ ಮತ್ತು ಚಿಕಿತ್ಸೆಯಲ್ಲಿರುವ ಕಾರಣ ಸ್ವಲ್ಪ ವಿಶ್ರಾಂತಿ ಪಡೆಯಲು ವೈದ್ಯರ ಸಲಹೆಯನ್ನು ಉಲ್ಲೇಖಿಸಿ ತೃಣಮೂಲ ಕಾಂಗ್ರೆಸ್ ತೊರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಮತಾ ಅವರ ನಿಷ್ಠಾವಂತ ಅಭಿಮಾನಿಯಾಗಿದ್ದ ಮಲ್ಲಿಕ್, ಕೋಲ್ಕತ್ತಾ-ಪಕ್ಕದ ಉತ್ತರ 24 ಪರಗಣ ಜಿಲ್ಲೆಯ ರಾಜಕೀಯದ ಮೇಲೆ ಪ್ರಭಾವ ಹೊಂದಿದ್ದರು. ಜಿಲ್ಲೆಯ ಪ್ರಮುಖ ಸಂಘಟನಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು. ಬಂಗಾಳದ ದೀರ್ಘಕಾಲ ಸಚಿವರಾಗಿದ್ದ ಮಲ್ಲಿಕ್ ಅವರು ನಿರಂತರವಾಗಿ 10 ವರ್ಷಗಳ ಕಾಲ ಆಹಾರ ಇಲಾಖೆಯ ಮುಖ್ಯಸ್ಥರಾಗಿದ್ದರು. ಪಡಿತರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅವರನ್ನು ಬಂಧಿಸಿತ್ತು. ಸುಮಾರು ತಿಂಗಳು ಕಾಲ ಜೈಲಿನಲ್ಲಿದ್ದರು.
2001ರಲ್ಲಿ, ಮಲ್ಲಿಕ್ ಗೈಘಾಟಾದಿಂದ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. 2006 ರಲ್ಲಿ ಅವರು ಅದೇ ಕ್ಷೇತ್ರದಿಂದ ಮತ್ತೆ ಗೆದ್ದರು. 2011ರಲ್ಲಿ ಹಬ್ರಾ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು ಮತ್ತು ಆಹಾರ ಸಚಿವರಾಗಿ ನೇಮಕಗೊಂಡರು. 2021ರಲ್ಲಿ ಮತ್ತೊಮ್ಮೆ ಹಬ್ರಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದರು. ಬಳಿಕ ಅವರನ್ನು ಪಡಿತರ ಇಲಾಖೆಯನ್ನು ಬಿಟ್ಟು ಅರಣ್ಯ ಇಲಾಖೆ ನೀಡಲಾಗಿತ್ತು. ಬಳಿಕ ಪಡಿತರ ಭ್ರಷ್ಟಾಚಾರ ಆರೋಪದ ಮೇಲೆ ಇಡಿ ಅವರನ್ನು ಬಂಧಿಸಿತು.
15 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಬಳಿಕ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು. ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದರು. 2026ರ ಚುನಾವಣೆಯಲ್ಲಿ ಹಬ್ರಾದಿಂದ ಮತ್ತೆ ಸ್ಪರ್ಧಿಸಲು ಟಿಕೆಟ್ ನೀಡಲಾಯಿತು. ಆದರೆ ಈ ಚುನಾವಣೆಯಲ್ಲಿ ಅವರು ಸೋಲನ್ನು ಅನುಭವಿಸಿದ್ದಾರೆ (ಏಜೆನ್ಸೀಸ್).