ಸಚಿನ್ ಅಹಿರ್ ಪರಿಷತ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದು. 
ದೇಶ

6 ಸಂಸದರು ಕೈಕೊಟ್ಟ ಬೆನ್ನಲ್ಲೇ ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಹಿನ್ನಡೆ: ಶಿಂಧೆ ಶಿವಸೇನಾ ಸೇರ್ಪಡೆಯಾದ ಮತ್ತೊಬ್ಬ ಎಂಎಲ್​ಸಿ | Uddhav Thackeray

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಭಾರಿ ನಾಟಕೀಯ ಬೆಳವಣಿಗೆ ನಡೆದಿದ್ದು, ಆರು ಸಂಸದರು ಕೈಕೊಟ್ಟ ಬೆನ್ನಲ್ಲೇ ಉದ್ಧವ್ ಠಾಕ್ರೆ(Uddhav Thackeray) ಬಣಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಪಕ್ಷದ ಎಂಎಲ್​ಸಿಯಾದ ಸಚಿನ್ ಅಹಿರ್ ಅವರು ಏಕನಾಥ್ ಶಿಂಧೆ ಬಣ ಸೇರ್ಪಡೆಯಾಗಿ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಆದಿತ್ಯ ಠಾಕ್ರೆ ಅವರ ಆಪ್ತ ಎಂದೇ ಪರಿಗಣಿಸಲಾಗಿದ್ದ ಸಚಿನ್ ಅಹಿರ್ ಅವರು, ಇಂದು(ಜೂ. 29) ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಸೇರ್ಪಡೆಯಾಗಿದ್ದಾರೆ. ಮತ್ತು ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್ ಅವರ ಸಮ್ಮುಖದಲ್ಲಿ ಪರಿಷತ್ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಇತ್ತೀಚೆಗೆ ಠಾಕ್ರೆ ಬಣದ ಸಂಸದರಾದ ಸಂಜಯ್ ಜಾಧವ್, ಸಂಜಯ್ ದಿನ ಪಾಟೀಲ್, ಭೌಸಾಹೇಬ್ ರಾಜಾರಾಮ್ ವಾಕ್ಚೌರೆ, ಸಂಜಯ್ ಉತ್ತಮರಾವ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್ ಹಾಗೂ ಓಂರಾಜೆ ನಿಂಬಾಳ್ಕರ್ ಅವರು ಏಕನಾಥ್ ಶಿಂಧೆ ಅವರ ಶಿವಸೇನಾ ಸೇರ್ಪಡೆಯಾಗಿದ್ದರು. ಈದ ಅದರ ಸಾಲಿಗೆ ಎಂಎಲ್​ಸಿ ಸಚಿನ್ ಅಹಿರ್ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ಶಿವಸೇನಾ ನಾಯಕ ಉದಯ ಸಮಂತ್, ಸಚಿನ್ ಅಹಿರ್ ಒಬ್ಬ ಹಿರಿಯ ಎಂಎಲ್‌ಸಿ ಮತ್ತು ಅವರು ಮುಂಬೈ ಜನರ ಪರವಾಗಿ ಧ್ವನಿ ಎತ್ತಿದ್ದಾರೆ. ಅಂತಹ ಅನುಭವಿ ನಾಯಕ ಶಿವಸೇನೆಯೊಂದಿಗೆ ಬರುತ್ತಿರುವುದು ನನಗೆ ಸಂತೋಷ ತಂದಿದೆ. ನಾವು ಎಲ್ಲಾ ಕಾನೂನು ಅಂಶಗಳನ್ನು ಪರಿಶೀಲಿಸಿದ್ದೇವೆ ಮತ್ತು ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಸಚಿನ್ ಅಹಿರ್ ಪಕ್ಷಕ್ಕೆ ಕೈಕೊಟ್ಟ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ಯುಬಿಟಿ ಶಾಸಕ ಸುನಿಲ್ ರಾವತ್, ನಮಗೆ ಅನೇಕ ಆಘಾತಗಳು ಬಂದಿವೆ, ಆದರೆ ಪಕ್ಷವು ಎಂದಿಗೂ ಮುಗಿದಿಲ್ಲ. ಇದು ದೊಡ್ಡ ಅಘಾತವೇನಲ್ಲ ಎಂದಿದ್ದಾರೆ (ಏಜೆನ್ಸೀಸ್).