ಯುಪಿಯಲ್ಲಿ ಮತ್ತೊಂದು ಹೆಸರು ಬದಲಾವಣೆ: ಫಾಜಿಲ್ ನಗರ ಇನ್ಮುಂದೆ ಪಾವಗಢ್! ಸೊಳ್ಳೆ, ಮಾಫಿಯಾ ಎರಡನ್ನೂ ಮುಗಿಸಿದ್ದೇವೆ ಎಂದ ಸಿಎಂ ಯೋಗಿ!
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಮತ್ತೊಂದು ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರದ ಹೆಸರು ಬದಲಾವಣೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜಾಗತಿಕ ಪ್ರಸಿದ್ಧ ಬೌದ್ಧ ಪ್ರವಾಸೋದ್ಯಮ ವಲಯದ ಪ್ರಮುಖ ಭಾಗವಾಗಿರುವ ಕುಶಿನಗರ ಜಿಲ್ಲೆಯ ಫಾಜಿಲ್ ನಗರದ ಹೆಸರನ್ನು ಇನ್ಮುಂದೆ ಪಾವಗಢ್(Fazilnagar To Pavagadh) ಎಂದು ಮರುನಾಮಕರಣ ಮಾಡಲಾಗುವುದು ಎಂದು ಯೋಗಿ ಘೋಷಿಸಿದ್ದಾರೆ. ಈ ಮಹತ್ವದ ನಿರ್ಧಾರದ ಬೆನ್ನಲ್ಲೇ ವಿಪಕ್ಷಗಳ ವಿರುದ್ಧ ಭೀಕರ ವಾಗ್ದಾಳಿ ನಡೆಸಿರುವ ಯೋಗಿ, ಯುಪಿಯಿಂದ ಕ್ರಿಮಿನಲ್ ಮಾಫಿಯಾಗಳನ್ನು ಹಾಗೂ ರೋಗ ಹರಡುವ ಸೊಳ್ಳೆಗಳನ್ನು ಒಟ್ಟಿಗೇ ನಿರ್ಮೂಲನೆ ಮಾಡಲಾಗಿದೆ ಎಂದು ಸಿಂಹಘರ್ಜನೆ ಮಾಡಿದ್ದಾರೆ.
ನಾವು ಫಾಜಿಲ್ ಅಂತ ಯಾಕೆ ಕರೆಯಬೇಕು? -ಭಗವಾನ್ ಮಹಾವೀರರ ಹೆಸರು ನೆನಪಿಸಿದ ಯೋಗಿ!
ಕುಶಿನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಫಾಜಿಲ್ ನಗರದ ಶಾಸಕರ ಸುದೀರ್ಘ ಬೇಡಿಕೆಯನ್ನು ತಾವು ಮನ್ನಿಸಿರುವುದಾಗಿ ತಿಳಿಸಿದ್ದಾರೆ. ನಾವು ಈ ಪ್ರದೇಶದ ಹೆಸರನ್ನು ಬದಲಾಯಿಸಲು ಪ್ರಸ್ತಾಪಿಸಿದ್ದೇವೆ. ಇನ್ಮುಂದೆ ಇದನ್ನು ಯಾರೂ ಫಾಜಿಲ್ ನಗರ ಎಂದು ಕರೆಯುವ ಅಗತ್ಯವಿಲ್ಲ. ನಾವು ಇದಕ್ಕೆ ‘ಪಾವಗಢ್’ ಎಂಬ ಹೊಸ ಮತ್ತು ಭವ್ಯವಾದ ಐಡೆಂಟಿಟಿಯನ್ನು ನೀಡಲಿದ್ದೇವೆ. ಈ ಪುಣ್ಯಭೂಮಿ ಭಗವಾನ್ ಮಹಾವೀರರ ಪವಿತ್ರ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಹಾಗಿರುವಾಗ ನಾವು ಇದಕ್ಕೆ ಫಾಜಿಲ್ ಎಂದು ಏಕೆ ಕರೆಯಬೇಕು ಎಂದಿದ್ದಾರೆ. ಇಡೀ ದೇಶ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ಇನ್ಮುಂದೆ ಭಗವಾನ್ ಮಹಾವೀರರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಪಾವಗಢ್ ಹೆಸರನ್ನು ಕೇಳಿ ಇಲ್ಲಿಗೆ ಬರಲಿದ್ದಾರೆ ಎಂದು ಯೋಗಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪರಿಗಣಿಸಿ, ಅದನ್ನು ಅದರ ಮೂಲ ಅಸ್ಮಿತೆಯೊಂದಿಗೆ ಮರುಸಂಪರ್ಕಿಸುವುದು ಇಂದಿನ ತುರ್ತು ಅಗತ್ಯವಾಗಿತ್ತು ಎಂದು ಯೋಗಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಸೊಳ್ಳೆಗಳು ರೋಗ ತಂದರೆ, ಮಾಫಿಯಾಗಳು ನಿರುದ್ಯೋಗ ತಂದಿದ್ದರು!" - ಸಿಎಂ ಸ್ಫೋಟಕ ವಾಗ್ದಾಳಿ
ಹೆಸರು ಬದಲಾವಣೆಯ ಪ್ರಕಟಣೆಯ ಬೆನ್ನಲ್ಲೇ ಯುಪಿಯ ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿಯ ಕುರಿತು ಮಾತನಾಡಿದ ಸಿಎಂ ಯೋಗಿ, ತಮ್ಮ ಸರ್ಕಾರದ ಬುಲ್ಡೋಜರ್ ನೀತಿಯನ್ನು ಕೊಂಡಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಾವು ಮಾಫಿಯಾಗಳನ್ನು ಹೇಗೆ ಬೇರುಸಹಿತ ಕಿತ್ತೊಗೆದಿದ್ದೇವೆಯೋ, ಅದೇ ರೀತಿ ಮೆದುಳು ಜ್ವರದಂತಹ ಭೀಕರ ಸಾಂಕ್ರಾಮಿಕ ರೋಗವನ್ನೂ ಕಂಪ್ಲೀಟ್ ಆಗಿ ತೊಡೆದುಹಾಕಿದ್ದೇವೆ. ನಾವು ರಾಜ್ಯದಿಂದ ಸೊಳ್ಳೆ ಮತ್ತು ಮಾಫಿಯಾ ಎರಡನ್ನೂ ಒಟ್ಟಿಗೇ ಮುಗಿಸಿದ್ದೇವೆ ಎಂದಿದ್ದಾರೆ. ಈ ಹಿಂದೆ ಸೊಳ್ಳೆಗಳು ತಲೆಮಾರುಗಳಿಗೆ ಭೀಕರ ರೋಗಗಳನ್ನು ತರುತ್ತಿದ್ದವು, ಇತ್ತ ರಾಜಕೀಯ ಪ್ರಾಯೋಜಿತ ಮಾಫಿಯಾಗಳು ರಾಜ್ಯದ ಯುವಕರಿಗೆ ನಿರುದ್ಯೋಗದ ಶಾಪ ತರುತ್ತಿದ್ದರು. ನಾವು ಈ ಎರಡೂ ಮಾರಕ ಕಾಯಿಲೆಗಳಿಗೆ ಶಾಶ್ವತ ಚಿಕಿತ್ಸೆ ನೀಡಿದ್ದೇವೆ ಎಂದು ಗುಡುಗಿದ್ದಾರೆ.
ಕಾನೂನು ಪ್ರಕ್ರಿಯೆ ಆರಂಭ; ಯೋಗಿ ಆಡಳಿತದಲ್ಲಿ ಬದಲಾದ ಪ್ರಮುಖ ನಗರಗಳ ಪಟ್ಟಿ!
ಫಾಜಿಲ್ ನಗರವನ್ನು ಪಾವಗಢ್ ಎಂದು ಬದಲಾಯಿಸುವ ಯೋಗಿ ಅವರ ಹೇಳಿಕೆಯ ನಂತರ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಬೌದ್ಧ ಪ್ರವಾಸೋದ್ಯಮ ಸರ್ಕ್ಯೂಟ್‌ನಲ್ಲಿ ಮಹತ್ವದ ಸ್ಥಾನ ಪಡೆದಿರುವ ಈ ಪಟ್ಟಣದ ಹೆಸರು ಬದಲಾವಣೆಗೆ ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ಮತ್ತು ಕಾನೂನುಬಾಹಿರ ಪ್ರಕ್ರಿಯೆಗಳನ್ನು ಶಿಘ್ರದಲ್ಲೇ ಪೂರ್ಣಗೊಳಿಸಲಾಗುವುದು ಮತ್ತು ಅದಾದ ನಂತರ ಅಧಿಕೃತ ಗಜೆಟ್ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶದ ಪ್ರಮುಖ ನಗರಗಳ ಹೆಸರು ಬದಲಾಯಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಲಹಾಬಾದ್ ಹೆಸರನ್ನು ‘ಪ್ರಯಾಗ್‌ರಾಜ್’ ಎಂದು, ಫೈಜಾಬಾದ್ ಅನ್ನು ‘ಅಯೋಧ್ಯಾ’ ಎಂದು ಮತ್ತು ಮೊಘಲ್‌ಸರಾಯ್ ರೈಲ್ವೆ ನಿಲ್ದಾಣವನ್ನು ‘ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ’ ಎಂದು ಯೋಗಿ ಸರ್ಕಾರ ಮರುನಾಮಕರಣ ಮಾಡಿ ಇತಿಹಾಸ ಸೃಷ್ಟಿಸಿತ್ತು. ಈಗ ಫಾಜಿಲ್ ನಗರವನ್ನು ಪಾವಗಢ್ ಎಂದು ಬದಲಾಯಿಸುತ್ತಿರುವುದು ಈ ಸರಣಿಯ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಈ ಹೆಸರು ಬದಲಾವಣೆಯು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಭಾರಿ ರಾಜಕೀಯ ಪರಿಣಾಮ ಬೀರಲಿದ್ದು, ಯುಪಿಯಲ್ಲಿ ಕೇಸರಿ ಅಲೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).