Amrit Mondal | ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಸರಣಿ ದಾಳಿಗಳು ಮುಂದುವರಿಯುತ್ತಿದ್ದು, ಇದೀಗ ರಾಜ್‌ಬರಿ ಜಿಲ್ಲೆಯಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಗುಂಪು ಸೇರಿ ಭೀಕರವಾಗಿ ಹೊಡೆದು ಕೊಂದಿರುವ ಘಟನೆ ನಡೆದಿದೆ. ಮೃತರನ್ನು ಅಮೃತ್ ಮೊಂಡಲ್(Amrit Mondal) ಎಂದು ಗುರುತಿಸಲಾಗಿದೆ. ಹಫ್ತಾ ಅಥವಾ ಹಣ ಸುಲಿಗೆಯ ಆರೋಪದ ಮೇಲೆ ಈ ಕೃತ್ಯ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯು ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ರಾಜ್‌ಬರಿ ಜಿಲ್ಲೆಯ ಪಾಂಗ್ಶಾ ಉಪಜಿಲೆಯ ಹೊಸೇನ್‌ದಂಗಾ ಗ್ರಾಮದಲ್ಲಿ ಸಂಭವಿಸಿದೆ. ಸ್ಥಳೀಯ ಮೂಲಗಳ ಪ್ರಕಾರ, ಅಮೃತ್ ಮೊಂಡಲ್ ಅವರು ಗ್ರಾಮಸ್ಥರೊಬ್ಬರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಕೆರಳಿದ ಗ್ರಾಮಸ್ಥರ ದೊಡ್ಡ ಗುಂಪೊಂದು ಅಮೃತ್ರನ್ನು ಸುತ್ತುವರಿದು ಮನಬಂದಂತೆ ಹಲ್ಲೆ ನಡೆಸಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೊಂಡಲ್ ಅವರನ್ನು ಗಂಭೀರ ಸ್ಥಿತಿಯಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೊಲೀಸ್ ತನಿಖೆ ಮತ್ತು ಬಂಧನ
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಮೃತ್ ಮೊಂಡಲ್ ಅವರ ಸಹಚರ ಎನ್ನಲಾದ ಮೊಹಮ್ಮದ್ ಸೆಲೀಂ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಬಂಧಿತನಿಂದ ಎರಡು ಅಕ್ರಮ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಂಗ್ಶಾ ಸರ್ಕಲ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೇಬ್ರತ ಸರ್ಕಾರ್ ತಿಳಿಸಿದ್ದಾರೆ. ಮೃತರ ಮೇಲೆ ಈ ಹಿಂದೆ ಕೊಲೆ ಸೇರಿದಂತೆ ಎರಡು ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ. ಅದರೆ, ಕಾನೂನನ್ನು ಕೈಗೆತ್ತಿಕೊಂಡು ಗುಂಪು ಹಿಂಸಾಚಾರ ನಡೆಸಿರುವುದನ್ನು ಅಧಿಕಾರಿಗಳು ಖಂಡಿಸಿದ್ದಾರೆ.
ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಆತಂಕ
ಕೆಲವೇ ದಿನಗಳ ಹಿಂದೆ ಮೈಮೆನ್‌ಸಿಂಗ್ ಜಿಲ್ಲೆಯಲ್ಲಿ ದೀಪು ಚಂದ್ರ ದಾಸ್ ಎಂಬ ಹಿಂದೂ ವ್ಯಕ್ತಿಯನ್ನು ಧರ್ಮನಿಂದನೆ ಆರೋಪದ ಮೇಲೆ ಗುಂಪು ಸೇರಿ ಕೊಂದ ಘಟನೆ ಹಸಿ ಇರುವಾಗಲೇ ಈ ಕೃತ್ಯ ನಡೆದಿದೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಬ್ ಲಿಂಚಿಂಗ್ (ಗುಂಪು ಹಿಂಸಾಚಾರ) ಪ್ರಕರಣಗಳು ಹೆಚ್ಚುತ್ತಿರುವುದು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದರೂ, ನೆಲಮಟ್ಟದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಾನವ ಹಕ್ಕುಗಳ ಸಂಘಟನೆಗಳು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುವಂತೆ ಆಗ್ರಹಿಸಿವೆ,(ಏಜೆನ್ಸೀಸ್).