ಪ್ರಧಾನಿ ಮೋದಿಗೆ ಉಜ್ಬೇಕಿಸ್ತಾನ್‌ನ ಅತ್ಯುನ್ನತ ಗೌರವ
- ಪ್ರಧಾನಿ ಮೋದಿಗೆ ಉಜ್ಬೇಕಿಸ್ತಾನ್‌ನ ಅತ್ಯುನ್ನತ ರಾಜ್ಯ ಗೌರವ
- ಪ್ರಶಸ್ತಿ ಪ್ರದಾನ ಮಾಡಿದ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್
- ಭಾರತ-ಉಜ್ಬೇಕಿಸ್ತಾನ್ ಬಾಂಧವ್ಯ ಬಲಪಡಿಸಿದ್ದಕ್ಕಾಗಿ ಗೌರವ
PM Modi Uzbekistan Award: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನ್‌ನ ಅತ್ಯುನ್ನತ ರಾಜ್ಯ ಗೌರವ ‘ಒಲಿಯ್ ದರಾಜಲಿ ದೋಸ್ತ್ಲಿಕ್’ (Oliy Darajali Do’stlik) ಆರ್ಡರ್ ಲಭಿಸಿದೆ. ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನೀಡಿದ ಕೊಡುಗೆಗಾಗಿ ಈ ಗೌರವ ಸಲ್ಲಿಸಲಾಗಿದೆ.
ತಾಷ್ಕೆಂಟ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರು ಪ್ರಧಾನಿ ಮೋದಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಗೌರವ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ಸಹಭಾಗಿತ್ವವನ್ನು ಈ ಗೌರವ ಮತ್ತಷ್ಟು ಪ್ರತಿಬಿಂಬಿಸುತ್ತದೆ ಎಂದರು.
ಭಾರತದ 140 ಕೋಟಿ ಜನರಿಗೆ ಸೇರಿದ ಪ್ರಶಸ್ತಿ
ಈ ಸಂದರ್ಭದಲ್ಲಿ ಉಜ್ಬೇಕಿಸ್ತಾನ್ ಸರ್ಕಾರ ಮತ್ತು ಅಲ್ಲಿನ ಜನರಿಗೆ ಧನ್ಯವಾದ ಸಲ್ಲಿಸಿದ ಮೋದಿ, ಈ ಪ್ರಶಸ್ತಿ ತಮ್ಮ ವೈಯಕ್ತಿಕ ಗೌರವವಲ್ಲ, ಭಾರತದ 140 ಕೋಟಿ ಜನರಿಗೆ ಸೇರಿದ್ದು ಎಂದು ಹೇಳಿದರು. ಈ ಗೌರವವನ್ನು ಭಾರತದ ಜನರಿಗೆ ಹಾಗೂ ಭಾರತ-ಉಜ್ಬೇಕಿಸ್ತಾನ್ ನಡುವಿನ ಸ್ನೇಹಕ್ಕೆ ಅರ್ಪಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದರು.
ಭಾರತ-ಉಜ್ಬೇಕಿಸ್ತಾನ್ ಸ್ನೇಹ ಮುಂದುವರಿಯಲಿ
ಭಾರತ ಮತ್ತು ಉಜ್ಬೇಕಿಸ್ತಾನ್ ಜನರ ನಡುವಿನ ಆತ್ಮೀಯತೆ, ಗೆಳೆತನಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು. ಉಭಯ ದೇಶಗಳ ಮುಂದಿನ ಪೀಳಿಗೆಯೂ ಈ ವಿಶೇಷ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಗೌರವ ಪ್ರೇರಣೆಯಾಗಲಿ ಎಂದು ಹೇಳಿದರು.
ಮೋದಿಗೆ ಭಾರತೀಯರಿಂದ ಭರ್ಜರಿ ಸ್ವಾಗತ
ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಉಜ್ಬೇಕಿಸ್ತಾನ್‌ಗೆ ತೆರಳಿದ ಪ್ರಧಾನಿ ಮೋದಿಗೆ ತಾಷ್ಕೆಂಟ್‌ನಲ್ಲಿರುವ ಭಾರತೀಯ ಸಮುದಾಯ ಆತ್ಮೀಯ ಸ್ವಾಗತ ನೀಡಿತು. ಭಾರತೀಯರ ಪ್ರೀತಿ, ಆತ್ಮೀಯತೆ ಕಂಡು ತಾವು ಭಾವುಕರಾಗಿರುವುದಾಗಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಉದೇ ಜಬ್ ಜಬ್’ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳು
ಸ್ವಾಗತ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದವರು ಅದ್ಧೂರಿ ಕಥಕ್ ಮತ್ತು ಅಂದಿಜಾನ್ ಪೋಲ್ಕಾ ನೃತ್ಯ ಪ್ರದರ್ಶನ ನೀಡಿದರು. ಇದರ ಜೊತೆಗೆ ಉಜ್ಬೇಕಿಸ್ತಾನ್‌ನ ಪುಟಾಣಿ ಮಕ್ಕಳು ಬಾಲಿವುಡ್‌ನ ಜನಪ್ರಿಯ ‘ಉದೇ ಜಬ್ ಜಬ್ ಜುಲ್ಫೇ ತೇರಿ’ ಹಾಡಿಗೆ ಚುರುಕಾಗಿ ನೃತ್ಯ ಮಾಡಿ ಗಮನ ಸೆಳೆದರು. ಭಾರತೀಯ ಸಂಸ್ಕೃತಿ ಮತ್ತು ಉಜ್ಬೇಕಿಸ್ತಾನ್‌ನ ಆತ್ಮೀಯತೆಯ ಸಮ್ಮಿಲನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು,(ಏಜೆನ್ಸೀಸ್).