ಸಾಂದರ್ಭಿಕ ಚಿತ್ರ 
ದೇಶ

ದೇಶದಲ್ಲಿ ಮತ್ತೊಮ್ಮೆ ನೋಟು ಬದಲಾವಣೆ?; ಪ್ಲಾಸ್ಟಿಕ್ ನೋಟು ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ | currency change

ನವದೆಹಲಿ: ದೇಶದಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ನೋಟುಗಳ ಬದಲಾವಣೆಗಳಿಗೆ (currency change) ಮುಂದಾಗಿದ್ದು, 10 ಮತ್ತು 20 ರೂ.ಗಳ ಪ್ಲಾಸ್ಟಿಕ್ ಅಥವಾ ಪಾಲಿಮರ್ ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರುವ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾವನೆಯನ್ನು ಅನುಮೋದಿಸಿದೆ.
ಈ ಕುರಿತು ಸೋಮವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಪ್ರಯೋಗಗಳ ಭಾಗವಾಗಿ ಆರ್‌ಬಿಐ 10 ಮತ್ತು 20 ರೂ. ಮುಖಬೆಲೆಯ ನೂರು ಕೋಟಿ ಪಾಲಿಮರ್ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.
ನೋಟುಗಳ ಬದಲಾವಣೆಯ ಮುಖ್ಯ ಉದ್ದೇಶವೆಂದರೆ, ಭಾರತೀಯ ಹವಾಮಾನ ಪರಿಸ್ಥಿತಿಗಳಲ್ಲಿ ನೋಟುಗಳ ಬಾಳಿಕೆ ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸುವುದಾಗಿದೆ. ಈ ಪ್ರಯೋಗಗಳು ಯಶಸ್ವಿಯಾದರೆ ಮಾತ್ರ, ದೇಶಾದ್ಯಂತ ಅವುಗಳ ವ್ಯಾಪಕ ಲಭ್ಯತೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಪ್ಲಾಸ್ಟಿಕ್ ಅಥವಾ ಪಾಲಿಮರ್ ನೋಟುಗಳನ್ನು ಪರಿಚಯಿಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಪ್ರಸ್ತುತ ಚಲಾವಣೆಯಲ್ಲಿರುವ ಕಾಗದದ ನೋಟುಗಳನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮತ್ತು ಕಾಗದದ ನೋಟುಗಳ ಜೊತೆಗೆ ಪಾಲಿಮರ್ ನೋಟುಗಳು ಸಹ ಚಲಾವಣೆಯಲ್ಲಿರುತ್ತವೆ ಎಂದಿದ್ದಾರೆ.

ಯಾಕೆ ನೋಟು ಬದಲಾವಣೆ?

ಇನ್ನೂ ನೋಟುಗಳ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಆರ್​ಬಿಐ, ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ. ಮತ್ತು ಕಡಿಮೆ ಹಾನಿಗೊಳಗಾಗುತ್ತವೆ ಎಂದು ಹೇಳಿದೆ.
ವಿಶೇಷವಾಗಿ ಕಡಿಮೆ ಮೌಲ್ಯದ ನೋಟುಗಳು ಸುಲಭವಾಗಿ ಹರಿದು ಹೋಗುತ್ತವೆ. ಮತ್ತು ಆಗಾಗ್ಗೆ ಬದಲಾಯಿಸಬೇಕಾಗುತ್ತದೆ. ಪಾಲಿಮರ್ ನೋಟುಗಳ ಬಳಕೆಯು ಮುದ್ರಣ ಮತ್ತು ನಿರ್ವಹಣಾ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ (ಏಜೆನ್ಸೀಸ್).