Thirumavalavan | ವಿಸಿಕೆ ಪಕ್ಷದ ಮುಖ್ಯಸ್ಥ ತೋಳ್ ತಿರುಮಾವಳವನ್
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿರುವ ಬೆನ್ನಲ್ಲೇ, ತಮಿಳುನಾಡು ರಾಜಕೀಯದಲ್ಲಿ ಭಾರಿ ರಾಜಕೀಯ ಬದಲಾವಣೆಗಳು ಕಂಡುಬರುತ್ತಿವೆ. ಈ ಬೆಳವಣಿಗೆಗಳ ನಡುವೆ, ಭವಿಷ್ಯದಲ್ಲಿ ಬಿಜೆಪಿ ಮತ್ತು ಎಂ ಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷಗಳು ಮೈತ್ರಿ ಮಾಡಿಕೊಳ್ಳಬಹುದು ಎಂದು ವಿಸಿಕೆ ಪಕ್ಷದ ಮುಖ್ಯಸ್ಥ ತೋಳ್ ತಿರುಮಾವಳವನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಿರುಚಿರಾಪಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಕೆಸಿ ಅಧ್ಯಕ್ಷ ತಿರುಮಾವಳವನ್, ನಮ್ಮ ಪಕ್ಷವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಒಂದೇ ಒಂದು ಪ್ರಮುಖ ಕಾರಣವೆಂದರೆ ಅದು ಬಿಜೆಪಿ ಪಕ್ಷವನ್ನು ವಿರೋಧಿಸುವುದು ಎಂದು ಸ್ಪಷ್ಟಪಡಿಸಿದರು.
ಭವಿಷ್ಯದಲ್ಲಿ ಡಿಎಂಕೆ ಮತ್ತು ಬಿಜೆಪಿ ಒಂದಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದ ತಿರುಮಾವಳವನ್, ಈ ಹಿಂದೆ ಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟದ ಪಾಲುದಾರರಾಗಿದ್ದನ್ನು ನೆನಪಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ, ಎನ್‌ಡಿಎ ಭಾಗವಾಗಿ ಡಿಎಂಕೆ ಕಾರ್ಯನಿರ್ವಹಿಸಿದ್ದನ್ನು ಅವರು ಉಲ್ಲೇಖಿಸಿದರು.
ರಾಜಕೀಯ ಅನಿವಾರ್ಯತೆಯಿಂದ ಡಿಎಂಕೆ ಬಿಜೆಪಿಯನ್ನು ವಿರೋಧಿಸುತ್ತಿರಬಹುದು, ಆದರೆ ಅದು ಬಿಜೆಪಿಯ ವಿರುದ್ಧವಾಗಿ ನಿಲ್ಲುವವರೆಗೂ ನಾವು ಡಿಎಂಕೆ ಜೊತೆಗೆ ಇರುತ್ತೇವೆ, ಬಿಜೆಪಿಯನ್ನು ವಿರೋಧಿಸಲೆಂದೇ ನಾವು ಡಿಎಂಕೆ ಜೊತೆ ಕೈಜೋಡಿಸಿದೆವು. ಆ ಉದ್ದೇಶಕ್ಕಾಗಿ ನಮಗೆ ಅದರ ಬಲ ಬೇಕಾಗಿದೆ ಮತ್ತು ನಮ್ಮ ನಿರ್ಧಾರಗಳು ಆ ತತ್ವವನ್ನು ಆಧರಿಸಿವೆ. ಜನರು ಏನೇ ಹೇಳಿದರೂ ನಮಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಅವರು ತಿಳಿಸಿದರು.
ತಮಿಳುನಾಡಿನಲ್ಲಿ ಮೈತ್ರಿಕೂಟಗಳ ಅದಲು ಬದಲು
ಡಿಎಂಕೆ ಮತ್ತು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿದ್ದವು, ಆದರೆ ಇತ್ತೀಚಿನ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದು ಡಿಎಂಕೆ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಂದಿನಿಂದ ಡಿಎಂಕೆ ಮತ್ತು ಬಿಜೆಪಿ ಮತ್ತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳು ಸೃಷ್ಟಿಯಾಗಿವೆ.
ಇನ್ನೊಂದೆಡೆ, ವಿಸಿಕೆ ವಿಷಯಕ್ಕೆ ಬಂದರೆ, ತಿರುಮಾವಳವನ್ ಪಕ್ಷವು ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ, ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಭಾಗವಾಗಿಯೇ ಉಳಿದುಕೊಂಡಿದೆ. ಆದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಎಸ್‌ಪಿಎ ಮೈತ್ರಿಕೂಟವನ್ನು ತೊರೆದು ಈಗ ಟಿವಿಕೆ ಮೈತ್ರಿಕೂಟದ ಭಾಗವಾಗಿದೆ. ಅದೇ ರೀತಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಿಪಿಐ(ಎಮ್) ಸಹ ತಾವು ಇನ್ಮುಂದೆ ಎಸ್‌ಪಿಎ ಮೈತ್ರಿಕೂಟದ ಸದಸ್ಯರಾಗಿ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದೆ(ಏಜೆನ್ಸೀಸ್).