ನಕ್ಸಲ್ ನಾಯಕ ಮಿಸಿರ್ ಬೆಸ್ರಾ 
ದೇಶ

ನಕ್ಸಲಿಸಂಗೆ ಮತ್ತೊಂದು ಹೊಡೆತ; ಕೋಟಿ ರೂಪಾಯಿಗೂ ಹೆಚ್ಚು ಬಹುಮಾನವೊಂದಿದ್ದ ಮಿಸಿರ್ ಬೆಸ್ರಾ ಸೇರಿ ಮೂವರ ಬಂಧನ | Misir Besra

ರಾಂಚಿ: ನಕ್ಸಲಿಸಂಗೆ ಮತ್ತೊಂದು ಭಾರಿ ಹೊಡೆತ ಬಿದ್ದಿದ್ದು, ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಸಿಂಗ್‌ಭೂಮ್‌ನ ಸಾರಂಡಾ ಮತ್ತು ಕೊಲ್ಹಾನ್ ಕಾಡುಗಳಲ್ಲಿ ಸಕ್ರಿಯವಾಗಿದ್ದ ಸುಮಾರು 1 ಕೋಟಿ ರೂ. ಬಹುಮಾನ ಹೊಂದಿದ್ದ ಉನ್ನತ ನಕ್ಸಲ್ ನಾಯಕ ಮಿಸಿರ್ ಬೆಸ್ರಾ(Misir Besra) ಸೇರಿ ಮೂವರನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ ಎಂದು ಬುಧವಾರ(ಜು. 29) ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮಂಗಳವಾರ ತಡರಾತ್ರಿ ಗಿರಿದಿಹ್‌ನಲ್ಲಿ ಬೆಸ್ರಾ ಮತ್ತು ಅವರ ಇಬ್ಬರು ಆಪ್ತ ಸಹಚರರಾದ ಪ್ರಾದೇಶಿಕ ಸಮಿತಿ ಸದಸ್ಯ ಮೆಹ್ನತ್ ಅಲಿಯಾಸ್ ಮೊಚ್ಚು (5 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ) ಮತ್ತು ಗೌರವ್ ಅಲಿಯಾಸ್ ಸೌರವ್​ನನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕೋಬ್ರಾ, ಸಿಆರ್‌ಪಿಎಫ್ ಮತ್ತು ಜಾರ್ಖಂಡ್ ಪೊಲೀಸರ ಜಂಟಿ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ ಮೂವರನ್ನು ಬಂಧಿಸಲಾಗಿದೆ. ಜಾರ್ಖಂಡ್‌ನಲ್ಲಿ ಬೆಸ್ರಾನನ್ನು ಬಂಧಿಸಿದವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಿದ್ರೆ, ಒಡಿಶಾ ಆತನ ತಲೆಗೆ 1.20 ಕೋಟಿ ರೂ. ಬಹುಮಾನ ಘೋಷಿಸಿತ್ತು.
ಸಿಪಿಐ (ಮಾವೋವಾದಿ) ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರಾಗಿದ್ದ ಬೆಸ್ರಾ, ಸುಮಾರು ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದರಲ್ಲದೆ, ಭದ್ರತಾ ಪಡೆಗಳಿಗೆ ಬೇಕಾಗಿದ್ದ ಅತ್ಯಂತ ಪ್ರಮುಖ ಮಾವೋವಾದಿ ನಾಯಕರಲ್ಲಿ ಒಬ್ಬನಾಗಿದ್ದನು. ಇನ್ನೂ ಜಾರ್ಖಂಡ್‌ನಲ್ಲಿ ರೂ. 1 ಕೋಟಿ ಬಹುಮಾನವನ್ನು ಹೊಂದಿರುವ ಅಸಿಮ್ ಮಂಡಲ್ ಮಾತ್ರ ತಲೆಮರೆಸಿಕೊಂಡಿದ್ದಾರೆ.
ಇನ್ನೂ ಬೆಸ್ರಾ ಬಂಧನವನ್ನು ಸರಂಡಾ ಮತ್ತು ಕೊಲ್ಹಾನ್ ಪ್ರದೇಶಗಳಲ್ಲಿ ಮಾವೋವಾದಿ ಜಾಲಕ್ಕೆ ದೊಡ್ಡ ಹಿನ್ನಡೆ ಮತ್ತು ರಾಜ್ಯದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮಹತ್ವದ ಮೈಲಿಗಲ್ಲು ಪೊಲೀಸರು ಬಣ್ಣಿಸಿದ್ದು, ಬಂಧಿತ ಮೂವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಪೊಲೀಸರು, ಗುಪ್ತಚರ ಬ್ಯೂರೋ (ಐಬಿ) ಮತ್ತು ಇತರ ಕೇಂದ್ರ ಸಂಸ್ಥೆಗಳು ವಿಚಾರಣೆ ನಡೆಸುತ್ತವೆ ಎನ್ನಲಾಗಿದೆ (ಏಜೆನ್ಸೀಸ್).