ಸಾಂದರ್ಭಿಕ ಚಿತ್ರ 
ದೇಶ

ಪೂಂಚ್ ವಲಯದ ಎಲ್​ಒಸಿ ಬಳಿ ಮತ್ತೆ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟ: ಇಬ್ಬರು ಸೈನಿಕರಿಗೆ ಗಂಭೀರ ಗಾಯ | grenade explosion

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಮತ್ತೊಮ್ಮೆ ತರಬೇತಿ ವ್ಯಾಯಾಮದ ಸಮಯದಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡಿದ್ದು(grenade explosion), ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಎಲ್‌ಒಸಿಗೆ ಸಮೀಪವಿರುವ ಮಾಲ್ಟಿ ಸೆಕ್ಟರ್‌ನಲ್ಲಿರುವ ಆರ್ಮಿ ಫಾರ್ವರ್ಡ್ ಪೋಸ್ಟ್ ಬಳಿ ಶುಕ್ರವಾರ(ಜೂ. 12) ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಸೇನಾ ಸಿಬ್ಬಂದಿ ನಿಯಮಿತ ತರಬೇತಿ ಮತ್ತು ಶಸ್ತ್ರಾಸ್ತ್ರ ನಿರ್ವಹಣೆ ಕವಾಯತುಗಳನ್ನು ನಡೆಸುತ್ತಿದ್ದಾಗ ಅವಘಢ ನಡೆದಿದೆ.
ಗಾಯಗೊಂಡ ಇಬ್ಬರೂ ಸಿಬ್ಬಂದಿಯನ್ನು ತಕ್ಷಣ ಚಿಕಿತ್ಸೆಗಾಗಿ ಪೂಂಚ್‌ನ 425 ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಗಾಯಗಳ ತೀವ್ರತೆಯನ್ನು ಪರಿಗಣಿಸಿ, ಸೇನಾ ಹೆಲಿಕಾಪ್ಟರ್ ಮೂಲಕ ಉಧಂಪುರ್‌ನ ನಾರ್ದರ್ನ್ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಗಾಯಗೊಂಡ ಸೈನಿಕರನ್ನು ಬಿಹಾರ ಬೆಟಾಲಿಯನ್‌ನ ಲ್ಯಾನ್ಸ್ ನಾಯಕ್ ರವೀಂದರ್ ಭೇರಾ ಮತ್ತು ಅಗ್ನಿವೀರ್ ಶಕ್ತಿ ಪ್ರಸಾದ್ ಎಂದು ಗುರುತಿಸಲಾಗಿದೆ. ಇನ್ನೂ ಆಕಸ್ಮಿಕ ಸ್ಫೋಟದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎನ್ನಲಾಗಿದೆ (ಏಜೆನ್ಸೀಸ್).