ಮತ್ತೆ 26/11 ಮಾದರಿಯ ದಾಳಿ..? ಪಹಲ್ಗಾಮ್ ಮಾಸ್ಟರ್‌ಮೈಂಡ್‌ನಿಂದ ಭಾರತಕ್ಕೆ ನೇರ ಸವಾಲು..! 
ದೇಶ

ಮತ್ತೆ 26/11 ಮಾದರಿಯ ದಾಳಿ..? ಪಹಲ್ಗಾಮ್ ಮಾಸ್ಟರ್‌ಮೈಂಡ್‌ನಿಂದ ಭಾರತಕ್ಕೆ ನೇರ ಸವಾಲು..! Saifullah Kasuri

ನವದೆಹಲಿ: 2008ರ ಮುಂಬೈ ಘೋರ ದಾಳಿಯ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡುವ ನಿಟ್ಟಿನಲ್ಲಿ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಉಗ್ರ ಸಂಘಟನೆಯು ಭಾರತದ ಮೇಲೆ ಸಮುದ್ರ ಮಾರ್ಗದ ಮೂಲಕ ಮತ್ತೊಂದು 26/11 ಮಾದರಿಯ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಲಷ್ಕರ್‌ನ ಉಪಾಧ್ಯಕ್ಷ ಹಾಗೂ ಪೆಹಲ್ಗಾಮ್ ಪ್ರವಾಸಿಗರ ಮೇಲಿನ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ(Saifullah Kasuri) ಬಿಡುಗಡೆ ಮಾಡಿರುವ ವಿಡಿಯೋ ಈಗ ತೀವ್ರ ಆತಂಕಕ್ಕೆ ಕಾರಣವಾಗಿದೆ.

2026ರಲ್ಲಿ ಸಮುದ್ರದ ಮೇಲೆ ನಮ್ಮ ಅಧಿಪತ್ಯ

ಬಿಡುಗಡೆಯಾಗಿರುವ ವಿಡಿಯೋದಲ್ಲಿ ಕಸೂರಿ ಅತ್ಯಂತ ಉದ್ಧಟತನದಿಂದ ಮಾತನಾಡಿದ್ದು, 2025ರಲ್ಲಿ ನಾವು ವಾಯುಮಾರ್ಗದಲ್ಲಿ ಪ್ರಾಬಲ್ಯ ಸಾಧಿಸಿದ್ದೆವು. ಅಲ್ಲದೆ, 2026ರಲ್ಲಿ ಸಮುದ್ರದ ಮೇಲೆ ನಮ್ಮ ಅಧಿಪತ್ಯವಿರಲಿದೆ ಎಂದು ಬಡಬಡಿಸಿದ್ದಾನೆ. ಶತ್ರುಗಳಿಗೆ ನೆಲ, ಜಲ ಅಥವಾ ವಾಯು ಮಾರ್ಗ ಯಾವುದರಲ್ಲೂ ಜಾಗ ಉಳಿಸುವುದಿಲ್ಲ ಎಂದು ಆತ ಸವಾಲು ಹಾಕಿದ್ದಾನೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಗುಪ್ತಚರ ಸಂಸ್ಥೆಗಳು, ಸಮುದ್ರ ಮಾರ್ಗದ ಮೂಲಕ ನುಸುಳುವಿಕೆ ಅಥವಾ ದಾಳಿಯ ಮುನ್ಸೂಚನೆ ಇದಾಗಿರಬಹುದು ಎಂದು ವಿಶ್ಲೇಷಿಸಿವೆ.

ಆಪರೇಷನ್ ಸಿಂಧೂರಗೆ ಪ್ರತೀಕಾರದ ಕಿಚ್ಚು..?

2025ರ ಮೇ ತಿಂಗಳಿನಲ್ಲಿ ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನ ಪ್ರೇರಿತ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಎಂಬ ಬೃಹತ್ ಕಾರ್ಯಾಚರಣೆ ನಡೆಸಿದ್ದವು. ಇದರಲ್ಲಿ ಮುರಿದ್ಕೆ ಮತ್ತು ಬಹವಲ್ಪುರದಲ್ಲಿರುವ ಲಷ್ಕರ್‌ನ ಪ್ರಮುಖ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಈ ದಾಳಿಯಿಂದ ಕಂಗೆಟ್ಟಿರುವ ಕಸೂರಿ, ಇದನ್ನು ಭಾರತದ ದುರಹಂಕಾರ ಎಂದು ಕರೆದಿದ್ದು, ಇದಕ್ಕೆ ತಕ್ಕ ಪ್ರಾಯಶ್ಚಿತ್ತ ನೀಡಲಾಗುವುದು ಎಂದು ಗುಡುಗಿದ್ದಾನೆ. ಭಾರತದ ಪವಿತ್ರ ಕ್ಷೇತ್ರಗಳು ಮತ್ತು ಅಯೋಧ್ಯೆಯಂತಹ ಸ್ಥಳಗಳನ್ನು ಗುರಿಯಾಗಿಸುವ ಸೂಚನೆಯನ್ನೂ ಈತ ನೀಡಿದ್ದಾನೆ.

ಭದ್ರತಾ ಪಡೆಗಳ ಹದ್ದಿನ ಕಣ್ಣು

ಸೈಫುಲ್ಲಾ ಕಸೂರಿಯ ಈ ವಿಡಿಯೋದಲ್ಲಿ ಪಾಕಿಸ್ತಾನ ಸೇನೆಯೊಂದಿಗೆ ತಾನು ಸಮನ್ವಯ ಸಾಧಿಸುತ್ತಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿರುವುದು ಪಾಕಿಸ್ತಾನದ ಕುಮ್ಮಕ್ಕನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಕರಾವಳಿ ತೀರಗಳಲ್ಲಿ, ಅದರಲ್ಲೂ ವಿಶೇಷವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದ ಕಡಲತೀರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯು ಪೆಟ್ರೋಲಿಂಗ್ ಅನ್ನು ತೀವ್ರಗೊಳಿಸಿವೆ.
ಈ ಉಗ್ರನ ಬೆದರಿಕೆಯು ಭಾರತದ ಆಂತರಿಕ ಭದ್ರತೆಗೆ ಸವಾಲಾಗಿದ್ದು, ಯಾವುದೇ ಸಂಭಾವ್ಯ ದಾಳಿಯನ್ನು ಹತ್ತಿಕ್ಕಲು ಭಾರತ ಸಜ್ಜಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ,(ಏಜೆನ್ಸೀಸ್).