ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅನಾಮಧೇಯ ಅನಿವಾಸಿ ಭಾರತೀಯ (ಎನ್‌ಆರ್‌ಐ) ಭಕ್ತರೊಬ್ಬರು ಬರೋಬ್ಬರಿ 121 ಕೆ.ಜಿ ಚಿನ್ನದ ಆಭರಣಗಳನ್ನು ದಾನವಾಗಿ ನೀಡಲು ಮುಂದಾಗಿದ್ದಾರೆ. ಈ ಆಭರಣಗಳ ಅಂದಾಜು ಮೌಲ್ಯ 160 ಕೋಟಿಯಿಂದ 206 ಕೋಟಿ ಎನ್ನಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ನೀಡಲಾಗುತ್ತಿರುವ ಈ ಅಪರೂಪದ ಕಾಣಿಕೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಇಂದು ಹಸ್ತಾಂತರಿಸುವ ಕಾರ್ಯಕ್ರಮ ನಿಗದಿಯಾಗಿದೆ.
ಈ ಬೃಹತ್ ಕಾಣಿಕೆಯಲ್ಲಿ ಒಟ್ಟು 45 ಚಿನ್ನದ ಆಭರಣಗಳಿದ್ದು, ಅವುಗಳನ್ನು ಒಂಬತ್ತು ಪ್ರತ್ಯೇಕ ಸೆಟ್‌ಗಳಾಗಿ ಸಿದ್ಧಪಡಿಸಲಾಗಿದೆ. ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ಅಲಂಕರಿಸಲು ಅನುಕೂಲವಾಗುವಂತೆ ವಿಶೇಷ ವಿನ್ಯಾಸದಲ್ಲಿ ಆಭರಣಗಳನ್ನು ತಯಾರಿಸಲಾಗಿದೆ. ಶ್ರೀವಾರಿ ಕಿರೀಟ, ಪದ್ಮಪಾದಗಳು ಸೇರಿದಂತೆ ಹಲವು ಸಾಂಪ್ರದಾಯಿಕ ಆಭರಣಗಳು ಈ ಸಂಗ್ರಹದಲ್ಲಿವೆ.
ಈ ಎಲ್ಲ ಆಭರಣಗಳನ್ನು ಚೆನ್ನೈ ಮೂಲದ ಜಿಆರ್‌ಟಿ ಜ್ಯುವೆಲ್ಲರ್ಸ್‌ನಲ್ಲಿ ವಿಶೇಷವಾಗಿ ತಯಾರಿಸಲಾಗಿದೆ ಎಂದು ವರದಿಯಾಗಿದೆ. ಬಳಿಕ ಬಿಗಿ ಭದ್ರತೆಯೊಂದಿಗೆ ಅವುಗಳನ್ನು ತಿರುಮಲಕ್ಕೆ ಸಾಗಿಸಲಾಗಿದೆ. ಆಭರಣಗಳ ಪ್ರದರ್ಶನಕ್ಕಾಗಿ ರಂಗನಾಯಕುಲ ಮಂಟಪದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಮರದ ಹಲಗೆಗಳಿಂದ ಪ್ರದರ್ಶನದ ಕಪಾಟುಗಳನ್ನು ನಿರ್ಮಿಸಲಾಗಿದೆ.
ನಿಗದಿತ ಕಾರ್ಯಕ್ರಮದ ಪ್ರಕಾರ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬೆಳಗ್ಗೆ ಸುಮಾರು 10 ಗಂಟೆಗೆ ತಿರುಪತಿಗೆ ಆಗಮಿಸಿ, ಬಳಿಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಶ್ರೀವಾರಿ ದರ್ಶನ ಪಡೆಯಲಿದ್ದಾರೆ. ನಂತರ ಬೆಳಗ್ಗೆ ಸುಮಾರು 11.30ಕ್ಕೆ ನಡೆಯುವ ದಾನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ದಾನಿಯು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೆ ಆಭರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ.
ಈ ಆಭರಣಗಳಲ್ಲಿ ಕಿರೀಟ, ವಡ್ಡಾಣ, ಭುಜಕೀರ್ತಿಗಳು, ಶಂಖ-ಚಕ್ರದ ಚಿಹ್ನೆಗಳು ಹಾಗೂ ಅಭಯ ಹಸ್ತದ ಆಭರಣಗಳು ಸೇರಿವೆ. ದೇವಸ್ಥಾನದ ಪೂಜಾ ವಿಧಿವಿಧಾನಗಳು ಮತ್ತು ಆಗಮ ಶಾಸ್ತ್ರದ ಸಂಪ್ರದಾಯಗಳಿಗೆ ಅನುಗುಣವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಹೊಸದಾಗಿ ಸಮರ್ಪಣೆಯಾಗಲಿರುವ ಆಭರಣಗಳನ್ನು ಶುಕ್ರವಾರ ದೇವರಿಗೆ ಅಲಂಕರಿಸುವ ನಿರೀಕ್ಷೆಯಿದೆ. ಒಬ್ಬ ಭಕ್ತರಿಂದ ದೇವಸ್ಥಾನಕ್ಕೆ ನೀಡಲಾಗುತ್ತಿರುವ ಅತಿ ದೊಡ್ಡ ವೈಯಕ್ತಿಕ ದೇಣಿಗೆಗಳಲ್ಲಿ ಇದೂ ಒಂದೆಂದು ವರದಿ ವಿವರಿಸಿದೆ. ಆದರೆ ದಾನಿಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ.