Annamalai | ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ
Annamalai: ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ತಮಿಳುನಾಡು ರಾಜಕೀಯದ ಹೈಡ್ರಾಮಾಕ್ಕೆ ಕೊನೆಗೂ ಅಧಿಕೃತ ತೆರೆ ಬಿದ್ದಿದ್ದು, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜೀನಾಮೆಯನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಕಚೇರಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಅಮಿತ್ ಷಾ ಸಂಧಾನವೂ ಫೇಲ್!
ರಾಜೀನಾಮೆ ನೀಡುವ ಮುನ್ನ ಅಣ್ಣಾಮಲೈ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಈ ವೇಳೆ ವರಿಷ್ಠರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅಣ್ಣಾಮಲೈ ಅವರಿಗೆ ಮನವೊಲಿಸಲು ಯತ್ನಿಸಿದ್ದರು. ಆದರೆ, ತಮ್ಮ ನಿಲುವಿಗೆ ಬದ್ಧರಾಗಿದ್ದ ಸಿಂಗಂ, ಗೌರವಯುತವಾಗಿಯೇ ಪಕ್ಷದಿಂದ ಹೊರನಡೆಯುವ ಇಚ್ಛೆ ವ್ಯಕ್ತಪಡಿಸಿ ರಾಜೀನಾಮೆ ಅಂಗೀಕರಿಸುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಅಣ್ಣಾಮಲೈ ರಾಜೀನಾಮೆ ಬಿಜೆಪಿಗೆ ಹಿನ್ನಡೆ ಯಾಕೆ..?
2020ರಲ್ಲಿ ಐಪಿಎಸ್ ಹುದ್ದೆ ಬಿಟ್ಟು ಬಿಜೆಪಿ ಸೇರಿದ ಅಣ್ಣಾಮಲೈ, ತಮಿಳುನಾಡಿನ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಕಠಿಣ ಶ್ರಮ ವಹಿಸಿದ್ದರು. ಅವರ ಆಕ್ರಮಣಕಾರಿ ನಾಯಕತ್ವದ ಫಲವಾಗಿಯೇ 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಮತ ಹಂಚಿಕೆ ದಾಖಲೆಯ ಶೇ. 11 ಕ್ಕೆ (48 ಲಕ್ಷಕ್ಕೂ ಹೆಚ್ಚು ಮತ) ತಲುಪಿತ್ತು. ಅಲ್ಲದೆ 59 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದ್ವಿತೀಯ ಸ್ಥಾನಕ್ಕೆ ಬಂದು ನಿಂತಿತ್ತು. ಹಿಂದೂ ವಿರೋಧಿ ಎನ್ನಲಾಗುತ್ತಿದ್ದ ದ್ರಾವಿಡ ನಾಡಿನಲ್ಲಿ ಕಮಲ ಅರಳುವಂತೆ ಮಾಡಿದ್ದು ಇದೇ ಅಣ್ಣಾಮಲೈರ ಸಿಂಗಂ ಕ್ರೇಜ್.
ಎಐಎಡಿಎಂಕೆ ಮೈತ್ರಿ ಮತ್ತು ಅಣ್ಣಾಮಲೈ ಮೂಲೆಗುಂಪು
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲದಿದ್ದಾಗ, ಹೈಕಮಾಂಡ್ ಮತ್ತೆ ಎಐಎಡಿಎಂಕೆಯೊಂದಿಗೆ ಕೈಜೋಡಿಸಲು ಮುಂದಾಯಿತು. ಆದರೆ, ಮೈತ್ರಿಗೆ ಮರಳಲು ಎಐಎಡಿಎಂಕೆ ಒಂದು ಕಠಿಣ ಷರತ್ತು ವಿಧಿಸಿತ್ತು. ಅದು ಅಣ್ಣಾಮಲೈ ರಾಜೀನಾಮೆ. ದುರದೃಷ್ಟವಶಾತ್ ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪಿ, ಅಣ್ಣಾಮಲೈ ಬದಲಿಗೆ ನೈನಾರ್ ನಾಗೇಂದ್ರನ್ರನ್ನು ಅಧ್ಯಕ್ಷರನ್ನಾಗಿ ಮಾಡಿತು. ಇದರಿಂದ ತೀವ್ರ ನೊಂದ ಅಣ್ಣಾಮಲೈ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಿಂದ ದೂರ ಸರಿದಿದ್ದರು.
ಇತ್ತೀಚಿನ ಫಲಿತಾಂಶವೇ ಅಣ್ಣಾಮಲೈ ನಿರ್ಧಾರಕ್ಕೆ ಕಾರಣ!
ಅಣ್ಣಾಮಲೈ ಎಚ್ಚರಿಕೆಯನ್ನು ಮೀರಿ ಬಿಜೆಪಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿತಾದರೂ, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಶೇ. 11 ರಿಂದ ಕೇವಲ ಶೇ. 3 ಕ್ಕೆ ಕುಸಿಯಿತು. ಈ ತಪ್ಪು ಮೈತ್ರಿ ನೀತಿಯೇ ತಮ್ಮ ಸಿದ್ಧಾಂತಕ್ಕೆ ಧಕ್ಕೆ ತಂದಿದೆ ಎಂದು ಅಣ್ಣಾಮಲೈ ಪಕ್ಷ ತೊರೆಯಲು ನಿರ್ಧರಿಸಿದರು. ಇತ್ತೀಚೆಗೆ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರನ್ನು ತಲೈವರ್ (ನಾಯಕ) ಎಂದು ಬಿಂಬಿಸುವ ಪೋಸ್ಟರ್‌ಗಳು ಸೃಷ್ಟಿಸಿದ್ದ ಸಂಚಲನವೇ ಇದಕ್ಕೆ ಮುನ್ನುಡಿಯಾಗಿತ್ತು.
ಮುಂದಿನ ಪ್ಲಾನ್ ಏನು...?
ಭಾರತೀಯ ಜನತಾ ಪಾರ್ಟಿಗೆ (BJP) ಗುಡ್ ಬೈ ಹೇಳಿದ ಕೆಲವೇ ಗಂಟೆಗಳಲ್ಲಿ ಅಣ್ಣಾಮಲೈ ಹೊಸದಾಗಿ ಆರಂಭಿಸಿರುವ ರಾಜಕೀಯ ಚಳವಳಿ ಅಣ್ಣಾಮಲೈ ಮಕ್ಕಳ್ ಇಯಕ್ಕಂ (AMI) ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆಯ ಮೂಲಕ ಭರ್ಜರಿ ಆರಂಭ ಪಡೆದಿದೆ. 3,000ಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ (Volunteers) ನೋಂದಾಯಿಸಿಕೊಳ್ಳುವ ಮೂಲಕ ಅಣ್ಣಾಮಲೈ ಅವರ ಹೊಸ ಹಾದಿಗೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, ತಮಿಳುನಾಡು ಜನತೆಯ ಭಾರಿ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ(ಏಜೆನ್ಸೀಸ್).