ಕಮಲಕ್ಕೆ ಅಣ್ಣಾಮಲೈ ಗುಡ್​ ಬೈ: ಬೆಂಬಲಿಗರಿಗೆ ಬ್ರೇನ್ ವಾಶ್ ಮಾಡಲಾಗುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನಾಗೇಂದ್ರನ್ ಆರೋಪ!  
ದೇಶ

ಕಮಲಕ್ಕೆ ಅಣ್ಣಾಮಲೈ ಗುಡ್​ ಬೈ: ಬೆಂಬಲಿಗರಿಗೆ ಬ್ರೇನ್ ವಾಶ್ ಮಾಡಲಾಗುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನಾಗೇಂದ್ರನ್ ಆರೋಪ! Nainar Nagendran

ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ರಾಜಕೀಯ ಚಳವಳಿ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಆತಂಕದ ನಡುವೆಯೇ ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿರುವ ತಮಿಳುನಾಡು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಯನಾರ್ ನಾಗೇಂದ್ರನ್(Nainar Nagendran), ಪಕ್ಷದ ಕೆಲವು ಸದಸ್ಯರ ತಲೆಗೆ ತಪ್ಪು ಕಲ್ಪನೆಗಳನ್ನು ತುಂಬಿ ಬ್ರೇನ್ ವಾಶ್ ಮಾಡಲಾಗುತ್ತಿದೆ. ಅಣ್ಣಾಮಲೈ ಹೋದ ತಕ್ಷಣ ಯಾರೂ ರಾಜೀನಾಮೆ ನೀಡುವ ಅಗತ್ಯವಿಲ್ಲ ಮತ್ತು ಯಾರೊಬ್ಬರಿಗೂ ರಾಜೀನಾಮೆ ನೀಡಲು ಪಕ್ಷ ಅನುಮತಿ ಕೊಟ್ಟಿಲ್ಲ ಎಂದು ಗುಡುಗಿದ್ದಾರೆ.

ಮೋದಿ-ಷಾ ಹೆಸರು ಬಳಸಿ ಸುಳ್ಳು ವದಂತಿ: ಕಾರ್ಯಕರ್ತರಿಗೆ ಕರೆ

ಸುದ್ದಿಗೋಷ್ಠಿಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದ ನಾಗೇಂದ್ರನ್, ಅಣ್ಣಾಮಲೈ ಅವರ ರಾಜೀನಾಮೆಯನ್ನು ಪಕ್ಷದ ಹೈಕಮಾಂಡ್ ಅಂಗೀಕರಿಸಿದೆ. ಆದರೆ, ಇದರ ಬೆನ್ನಲ್ಲೇ ಕೆಲವು ನಾಯಕರ ತಲೆ ಕೆಡಿಸುವ ಕೆಲಸ ನಡೆಯುತ್ತಿದೆ. ನಮಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಷಾ ಅವರ ಆಶೀರ್ವಾದವಿದೆ, ಹಾಗಾಗಿ ನಾವು ರಾಜೀನಾಮೆ ನೀಡುತ್ತಿದ್ದೇವೆ ಎಂದು ಕೆಲವರು ಸುಳ್ಳು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಯಾವುದೇ ವದಂತಿಗಳನ್ನು ಕಾರ್ಯಕರ್ತರು ನಂಬಬಾರದು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಅಣ್ಣಾಮಲೈ ಅವರ ಹೊಸ ಆಂದೋಲನಕ್ಕೆ ಸೇರಲು ಬಯಸುವವರಿಗೆ ಖಡಕ್ ವಾರ್ನಿಂಗ್ ನೀಡಿರುವ ನಾಗೇಂದ್ರನ್​, ಯಾರು ಬೇರೆ ಮೂವ್‌ಮೆಂಟ್ ಅಥವಾ ಹೊಸ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೋ, ಅವರು ಬಿಜೆಪಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಅಣ್ಣಾಮಲೈ ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಣ್ಣಾಮಲೈ ನಿರ್ಗಮನ ಪಕ್ಷಕ್ಕೇನು ನಷ್ಟವಲ್ಲ!

ಶುಕ್ರವಾರವಷ್ಟೇ ಅಣ್ಣಾಮಲೈ ಅವರ ನಿರ್ಗಮನದ ಕುರಿತು ಮಾತನಾಡಿದ್ದ ನಾಗೇಂದ್ರನ್, ಅಣ್ಣಾಮಲೈ ಹೋಗಿರುವುದರಿಂದ ಭಾರತೀಯ ಜನತಾ ಪಾರ್ಟಿಗೆ ಯಾವುದೇ ನಷ್ಟವಿಲ್ಲ. ಬಿಜೆಪಿ ನಿನ್ನೆ ಮೊನ್ನೆ ಹುಟ್ಟಿದ ಪಕ್ಷವಲ್ಲ. ಇದು ಸಿದ್ಧಾಂತದ ಆಧಾರದ ಮೇಲೆ ಬೆಳೆದಿರುವ ಬಲಿಷ್ಠ ಪಕ್ಷ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಹೊಸ ಪಕ್ಷ ಕಟ್ಟಬಹುದು, ಅದಕ್ಕೆ ಎಲ್ಲರಿಗೂ ಹಕ್ಕಿದೆ. ಆದರೆ, ರಾಷ್ಟ್ರೀಯ ನಾಯಕರು ತಮಿಳುನಾಡಿನ ಪ್ರಾದೇಶಿಕ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬ ಅಣ್ಣಾಮಲೈ ಅವರ ಆರೋಪ ತಪ್ಪು ಎಂದು ತಿರುಗೇಟು ನೀಡಿದ್ದರು.

ನಾನು ತಮಿಳನೋ ಅಥವಾ ಬಿಜೆಪಿಗನೋ? ಅಣ್ಣಾಮಲೈ ಬಿಚ್ಚಿಟ್ಟ ರಹಸ್ಯ!

ಅತ್ತ ಬಿಜೆಪಿಗೆ ಗುಡ್‌ಬೈ ಹೇಳಿರುವ ಅಣ್ಣಾಮಲೈ, ತಾವು ಪಕ್ಷ ತೊರೆದ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ. ನನ್ನ ಮನಸ್ಸಿನಲ್ಲಿ ದೀರ್ಘಕಾಲದಿಂದ ಒಂದು ದೊಡ್ಡ ಸಂಘರ್ಷವಿತ್ತು. ನಾನು ತಮಿಳುನಾಡಿನ ಮಣ್ಣಿನ ಮಗನೋ ಅಥವಾ ಕೇವಲ ಬಿಜೆಪಿಯ ವ್ಯಕ್ತಿಯೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ತಮಿಳುನಾಡಿನ ಹಿತದೃಷ್ಟಿಯಿಂದ ನನ್ನ ಆಲೋಚನೆಗಳೇ ಬೇರೆಯಾಗಿದ್ದವು. ಹೀಗಾಗಿ ಕಳೆದ ವರ್ಷ ಅಂದರೆ ೨೦೨೫ರ ಡಿಸೆಂಬರ್ ೪ ರಂದೇ ನಾನು ರಾಜೀನಾಮೆ ನೀಡುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದೆ. ಆದರೆ ಚುನಾವಣೆ ಮುಗಿಯುವವರೆಗೆ ಜವಾಬ್ದಾರಿಯಲ್ಲಿ ಇರುವಂತೆ ದೆಹಲಿ ನಾಯಕರು ಸೂಚಿಸಿದ್ದರು. ಅದರಂತೆ ಈಗ ಹೊರಬಂದಿದ್ದೇನೆ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಅಣ್ಣಾಮಲೈ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಆದರೆ, ಕೇವಲ ೧೦ ಗಂಟೆಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಯುವಕರನ್ನು ಸೆಳೆದಿರುವ ಅಣ್ಣಾಮಲೈ ಅವರ ಹೊಸ ಚಳವಳಿಯು ಮುಂಬರುವ ದಿನಗಳಲ್ಲಿ ತಮಿಳುನಾಡು ಬಿಜೆಪಿಯ ಅಸ್ತಿತ್ವಕ್ಕೆ ದೊಡ್ಡ ಪೆಟ್ಟು ನೀಡಲಿದೆಯೇ ಎಂಬ ಭೀತಿ ಈಗ ಕಮಲ ಪಾಳಯವನ್ನು ಕಾಡುತ್ತಿರುವುದಂತೂ ಸುಳ್ಳಲ್ಲ,(ಏಜೆನ್ಸೀಸ್​).