ಡೆಹ್ರಾಡೂನ್: ಉತ್ತರಾಖಂಡ್ನಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಅಂಕಿತಾ ಭಂಡಾರಿ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಶುಕ್ರವಾರ(ಜ. 09) ಸಂಜೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ, ದಿವಂಗತ ಅಂಕಿತಾ ಭಂಡಾರಿ ಅವರ ಪೋಷಕರ ಕೋರಿಕೆ ಮತ್ತು ಆಳವಾದ ಭಾವನೆಗಳನ್ನು ಗೌರವಿಸಿ ಸಿಬಿಐ ತನಿಖೆಗೆ ಶಿಫಾರಸನ್ನು ನಾವು ಅನುಮೋದಿಸಿದ್ದೇವೆ. ನ್ಯಾಯಯುತ, ಪಾರದರ್ಶಕ ಹಾಗೂ ಸೂಕ್ಷ್ಮ ರೀತಿಯಲ್ಲಿ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬದ್ದವಾಗಿದೆ. ಘಟನೆ ಬಳಿಕ ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಎಸ್ಐಟಿ ರಚಿಸಿ ತ್ವರಿತ ಕ್ರಮಕೈಗೊಳ್ಳಲಾಗಿದೆ.
ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ಬಲವಾದ ಕಾನೂನಿನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲಾಗಿದೆ. ಪರಿಣಾಮವಾಗಿ ವಿಚಾರಣೆಯ ಸಮಯದಲ್ಲಿ ಆರೋಪಿಗಳಿಗೆ ಯಾವುದೇ ಜಾಮೀನು ನೀಡಲಾಗಿಲ್ಲ. ಬಳಿಕ ಕೆಳ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ಆಡಿಯೊ ತುಣುಕುಗಳ ಕುರಿತು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಅವುಗಳು ಪ್ರಸ್ತುತ ತನಿಖೆಯಲ್ಲಿವೆ ಎಂದು ತಿಳಿಸಿದ್ದಾರೆ.
2022ರಲ್ಲಿ ಪೌರಿಯಾ ವನಂತ್ರ ರೆಸಾರ್ಟ್ನಲ್ಲಿ ಸ್ವಾಗತಿಕರಣಿಯಾಗಿ ಕೆಲಸ ಮಾಡ್ತಿದ್ದ ವೇಳೆ ಕೊಲೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಅವರ ಇಬ್ಬರ ಸಹೋದ್ಯೋಗಿಗಳನ್ನು ಬಂಧಿಸಲಾಗಿತ್ತು. ಮೂವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಇತ್ತೀಚೆಗೆ ನಟಿ ಉರ್ಮಿಳಾ ಸನಾವರ್ ಅವರು ಶಾಸಕರೊಬ್ಬರ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅಂಕಿತಾ ಕೊಲೆಯಲ್ಲಿ ವಿಐಪಿಯೊಬ್ಬರು ಭಾಗಿಯಾಗಿದ್ದಾರೆ ಎಂಬ ಬಯಲಿಗೆ ಬಂದಿದ್ದು, ಮತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವಂತೆ ರಾಜ್ಯದಲ್ಲಿ ಪ್ರತಿಭಟನೆಗಳು ಬುಗಿಲೆದ್ದಿದ್ದವು. ಇತ್ತೀಚಿಗೆ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದ್ದ ಸಿಎಂ ಧಾಮಿಗೆ, ಕುಟುಂಬಸ್ಥರು ತನಿಖೆಗೆ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು (ಏಜೆನ್ಸೀಸ್).