ಭಾರತದ ಕ್ರೀಡಾಪಟು ಅನಿಮೇಶ್ ಕುಜುರ್
- ವಿದೇಶಿ ಮಣ್ಣಿನಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತೀಯ ಅನಿಮೇಶ್ ಕುಜುರ್
- 10.14 ಸೆಕೆಂಡುಗಳಲ್ಲಿ ಗುರಿ ತಲುಪಿದ ಎರಡನೇ ಭಾರತೀಯ ಓಟಗಾರ
ಜರ್ಮನಿ: 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಕ್ರೀಡಾಪಟು ಅನಿಮೇಶ್ ಕುಜುರ್, ಶನಿವಾರ (ಜು.11) ವಿದೇಶಿ ಮಣ್ಣಿನಲ್ಲಿ ಮತ್ತೊಂದು ಐತಿಹಾಸಿಕ ರೆಕಾರ್ಡ್ ನಿರ್ಮಿಸುವ ಮೂಲಕ ಇಡೀ ಭಾರತೀಯರನ್ನು ಹೆಮ್ಮೆ ಪಡಿಸಿದ್ದಾರೆ.
ಜರ್ಮನಿಯ ವೆಟ್ಜ್ಲರ್‌ನ ಎನ್‌ವಾಗ್ ಸ್ಟೇಡಿಯಂನಲ್ಲಿ ನಡೆದ ಪೂಮಾ ಫಾಸ್ಟ್ ಆರ್ಮ್ಸ್ ಫಾಸ್ಟ್ ಲೆಗ್ಸ್ 2026 ಕೂಟದ ಪುರುಷರ 100 ಮೀಟರ್ ಫೈನಲ್‌ನಲ್ಲಿ ಅನಿಮೇಶ್ ಈ ಹೊಸ ಮೈಲಿಗಲ್ಲು ತಲುಪಿದ್ದಾರೆ. ಕೇವಲ 10.14 ಸೆಕೆಂಡುಗಳಲ್ಲಿ ಗುರಿ ತಲುಪಿದ ಎರಡನೇ ಭಾರತೀಯ ಓಟಗಾರನಾಗಿ ಹೊರಮ್ಮಿದ್ದಾರೆ. ಇದು ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ಎಂಬುದು ಗಮನಾರ್ಹ.
ವಿದೇಶಿ ನೆಲದಲ್ಲಿ ಭಾರತೀಯನ ಅತಿವೇಗದ ದಾಖಲೆ
ಅನಿಮೇಶ್ ದಾಖಲಿಸಿದ 10.14 ಸೆಕೆಂಡುಗಳ ಈ ಸಮಯವು, ವಿದೇಶಿ ನೆಲದಲ್ಲಿ ಭಾರತೀಯ ಓಟಗಾರನೊಬ್ಬ ದಾಖಲಿಸಿದ ಸಾರ್ವಕಾಲಿಕ ಅತಿವೇಗದ 100 ಮೀಟರ್ ರನ್ನಿಂಗ್ ಆಗಿದೆ. ಒಟ್ಟಾರೆಯಾಗಿ ಭಾರತದ ಇತಿಹಾಸದಲ್ಲೇ ಇದು ಎರಡನೇ ಅತಿವೇಗದ ಟೈಮಿಂಗ್ ಆಗಿದ್ದು, ಗುರಿಂದರ್ ವೀರ್ ಸಿಂಗ್ ಅವರ 10.09 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯ ಮುರಿಯಲು ಸಾಧ್ಯವಾಗಿಲ್ಲ.
ಅಗ್ರ 5 ರೇಸ್‌ಗಳಲ್ಲಿ ಅನಿಮೇಶ್ ಗುರುತು
ಈಗಾಗಲೇ 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಒಡಿಶಾದ ಈ ರನ್ನರ್, ಈಗ 100 ಮೀಟರ್‌ನಲ್ಲೂ ಭಾರತದ ಅತ್ಯಂತ ವೇಗದ ರನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ಸಾರ್ವಕಾಲಿಕ ಅಗ್ರ 5 ಅತಿವೇಗದ 100 ಮೀಟರ್ ಓಟದ ದಾಖಲೆಗಳಲ್ಲಿ ಮೂರು ರೆಕಾರ್ಡ್ಗಳು ಅನಿಮೇಶ್ ಹೆಸರಲ್ಲೇ ಇವೆ.
ಭಾರತದ ಅಗ್ರ 5 ಅತಿವೇಗದ 100 ಮೀಟರ್ ದಾಖಲೆಗಳು
ಗುರಿಂದರ್ ವೀರ್ ಸಿಂಗ್ - 10.09 ಸೆಕೆಂಡ್
ಅನಿಮೇಶ್ ಕುಜುರ್ - 10.14 ಸೆಕೆಂಡ್
ಅನಿಮೇಶ್ ಕುಜುರ್ - 10.15 ಸೆಕೆಂಡ್
ಗುರಿಂದರ್ ವೀರ್ ಸಿಂಗ್ - 10.17 ಸೆಕೆಂಡ್
ಅನಿಮೇಶ್ ಕುಜುರ್ - 10.18 ಸೆಕೆಂಡ್