ಅನಿಲ್ ಅಂಬಾನಿ ನಿವಾಸ  
ದೇಶ

ಸ್ವಿಮಿಂಗ್ ಪೂಲ್​, ಜಿಮ್​, ಹೆಲಿಪ್ಯಾಡ್​... ಅನಿಲ್​ ಅಂಬಾನಿಯ 3,716 ಕೋಟಿ ರೂ. ಮೌಲ್ಯದ ನಿವಾಸ ಈಗ ಇಡಿ ವಶಕ್ಕೆ

ಮುಂಬೈ: ಬುಧವಾರ (ಫೆ.25) ಅನಿಲ್ ಅಂಬಾನಿಯವರ 3,716 ಕೋಟಿ ರೂ. ಮೌಲ್ಯದ 17 ಅಂತಸ್ತಿನ 'ಅಬೋಡ್' ಮನೆಯನ್ನು ಇದೀಗ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಹೆಲಿಪ್ಯಾಡ್, ಸ್ವಿಮಿಂಗ್​ ಪೂಲ್​, ಜಿಮ್ ಸೌಕರ್ಯಗಳನ್ನು ಒಳಗೊಂಡ ಐಷಾರಾಮಿ ನಿವಾಸ ಈಗ ಸಂಪೂರ್ಣವಾಗಿ ಇಡಿ ಅಧಿಕಾರಿಗಳು ವಶದಲ್ಲಿದೆ.
ಮನೆಯೂ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಡಿಯಲ್ಲಿದೆ ಎಂದು ಇಡಿಯು ಅಭಿಪ್ರಾಯಿಸಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಒಳಗೊಂಡ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಅನಿಲ್​ ಅವರನ್ನು ಫೆಡರಲ್ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದ್ದು, ಅವರ ಆಸ್ತಿಯ ಭಾಗವಾದ 473.17 ಕೋಟಿ ರೂ. ಮೌಲ್ಯದ ಒಂದು ಭಾಗವನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತು.
ಅನಿಲ್ ಅಂಬಾನಿ ಅವರ 'ಅಬೋಡ್' 17 ಮಹಡಿಗಳನ್ನು ಹೊಂದಿರುವ 66 ಮೀಟರ್ ಎತ್ತರದ ಭವ್ಯ ಕಟ್ಟಡ. ಇದು ಮುಂಬೈನ ಐಷಾರಾಮಿ ಪ್ರದೇಶಗಳಲ್ಲಿ ಒಂದಾದ ಪಾಲಿ ಹಿಲ್‌ನಲ್ಲಿದೆ. ಈ ನಿವಾಸವು ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಹೆಲಿಪ್ಯಾಡ್, ಸ್ವಿಮಿಂಗ್ ಪೂಲ್​, ಜಿಮ್ ಮತ್ತು ದೊಡ್ಡ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ದುಬಾರಿ ವಾಹನಗಳ ಪಾರ್ಕಿಂಗ್​ಗಾಗಿ ಒಂದು ವಿಶೇಷವಾದ ಲಾಂಜ್​ ವ್ಯವಸ್ಥೆ ಕೂಡ ಈ ಕಟ್ಟಡದಲ್ಲಿದೆ.

ಲಕ್ಸುರಿ ಕಾರುಗಳ ಕಲೆಕ್ಷನ್​

ಅನಿಲ್​ ಅಂಬಾನಿ ಅವರು ರೋಲ್ಸ್ ರಾಯ್ಸ್, ಲೆಕ್ಸಸ್, ಪೋರ್ಷೆ, ಆಡಿ ಮತ್ತು ಮರ್ಸಿಡಿಸ್ ಬೆನ್ಜ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ. ಇದರ ನಡುವೆ ಇವರು ಯುಕೆ ನ್ಯಾಯಾಲಯಕ್ಕೆ ನನ್ನ ಬಳಿ ಕೇವಲ ಒಂದೇ ಒಂದು ಕಾರು​ ಇರುವುದು ಎಂದು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.