ಭೋಪಾಲ್: ಪೆಟ್ರೋಲ್ ದರದ ಕುರಿತು ನಡೆದ ಸಣ್ಣ ವಾಗ್ವಾದವೊಂದು ಭೀಕರ ದುರಂತಕ್ಕೆ ಕಾರಣವಾಗಿದ್ದು, ಮೂವರು ಯುವಕರು 26 ವರ್ಷದ ಪೆಟ್ರೋಲ್ ಪಂಪ್ ನೌಕರನ (Petrol Pump Attack) ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬುಧವಾರ (ಜೂ 24) ನಡೆದಿದೆ.
ಘಟನೆ ಏನು?
ಪೊಲೀಸರ ಪ್ರಕಾರ, ತಡರಾತ್ರಿ ಮೂವರು ಯುವಕರು ಪೆಟ್ರೋಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಪಂಪ್ಗೆ ಬಂದಿದ್ದರು. ಈ ವೇಳೆ ಇಂಧನದ ಬೆಲೆಯ ಬಗ್ಗೆ ಸಿಬ್ಬಂದಿ ಆಕಾಶ್ ಜೊತೆ ವಾಗ್ವಾದ ನಡೆಸಿದ್ದಾರೆ. ನಂತರ ಇದು ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು ಆರೋಪಿಗಳಲ್ಲಿ ಒಬ್ಬ ಆಕಾಶ್ ಮೇಲೆ ಪೆಟ್ರೋಲ್ ಸುರಿದು ಲೈಟರ್ನಿಂದ ಬೆಂಕಿ ಹಚ್ಚಿದ್ದಾನೆ.
ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೇ ಸಹಾಯಕ್ಕಾಗಿ ಆಕಾಶ್ ಕೂಗಲು ಆರಂಭಿಸಿದ್ದಾರೆ. ಈ ವೇಳೆ ಅಲ್ಲಿಯೇ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ತಂದೆ ರಾಮಚಂದ್ರ ಸೆಂಗಾರ್ ತಮ್ಮ ಮಗನ ಪ್ರಾಣ ಉಳಿಸುವ ಸಲುವಾಗಿ ಪ್ರಯತ್ನ ಪಟ್ಟಿದ್ದು, ಈ ಸಮಯದಲ್ಲಿ ಅವರ ಕಾಲುಗಳು ಸುಟ್ಟುಹೋಗಿರುವುದಾಗಿ ತಿಳಿದುಬಂದಿದೆ.
ಜೋರಾದ ಕಿರುಚಾಟ ಕೇಳುತ್ತಿದ್ದಂತೆಯೇ ಸ್ಥಳೀಯರು ತಕ್ಷಣ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದು, ಗಾಯಗೊಂಡಿದ್ದ ತಂದೆ ಮತ್ತು ಮಗನನ್ನು ಹತ್ತಿರದಲ್ಲಿರುವ ಜಯರೋಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ, ಆಕಾಶ್‌ಗೆ ಸುಮಾರು ಶೇಕಡಾ 37 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಫ್‌ಐಆರ್ ದಾಖಲು
ಬಂಧಿತ ಆರೋಪಿಗಳನ್ನು ಡೋಲಿ ಅಲಿಯಾಸ್ ಅನುಜ್ ಗುರ್ಜರ್ ಮತ್ತು ಸಚಿನ್ ಗುರ್ಜರ್ ಎಂದು ಗುರುತಿಸಲಾಗಿದೆ. ಆದರೆ, ಈ ಅಮಾನುಷ ಕೃತ್ಯದಲ್ಲಿ ಭಾಗಿಯಾದ ಮೂರನೇ ಆರೋಪಿ ಅರವಿಂದ್ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಘಟನೆಯ ರಾತ್ರಿ ಪೆಟ್ರೋಲ್ ಬಂಕ್‌ನಲ್ಲಿ ನಿಖರವಾಗಿ ಏನಾಯಿತು ಮತ್ತು ವಾಗ್ವಾದ ಹೇಗೆ ವಿಕೋಪಕ್ಕೆ ತಿರುಗಿತು ಎಂಬ ಘಟನೆಗಳ ನಿಖರವಾದ ಅನುಕ್ರಮವನ್ನು ಸ್ಥಾಪಿಸಲು ಪೊಲೀಸರು ತಾಂತ್ರಿಕ ಮತ್ತು ಪ್ರತ್ಯಕ್ಷ ಸಾಕ್ಷ್ಯಗಳ ಮೊರೆ ಹೋಗಿದ್ದಾರೆ (ಏಜೆನ್ಸೀಸ್).