Girish Mahajan (ಚಿತ್ರ Instagram)
- ಮುಂಬೈನ ವರ್ಲಿ ಪ್ರದೇಶದಲ್ಲಿ ರಾಜಕೀಯ ರ‍್ಯಾಲಿಯಿಂದಾಗಿ ತೀವ್ರ ಸಂಚಾರ ದಟ್ಟಣೆ
- ಮಹಾಯುತಿ ಮೈತ್ರಿಕೂಟದ ಅಡಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ
- ಕೇಂದ್ರ ಸರ್ಕಾರ ಮಂಡಿಸಿದ್ದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆ
- ಈ ಮಸೂದೆಯನ್ನು ತಿರಸ್ಕರಿಸಿದ ವಿರೋಧ ಪಕ್ಷಗಳ ನಿಲುವನ್ನು ಖಂಡಿಸಲು ಒತ್ತಾಯಿಸಿ ಬಿಜೆಪಿ ರ‍್ಯಾಲಿ
ಮುಂಬೈ: ಇಲ್ಲಿನ ವರ್ಲಿ ಪ್ರದೇಶದಲ್ಲಿ ರಾಜಕೀಯ ರ‍್ಯಾಲಿಯಿಂದಾಗಿ ತೀವ್ರ ಸಂಚಾರ ದಟ್ಟಣೆ ಉಂಟಾದ ನಂತರ ಪ್ರಯಾಣಿಕರೊಬ್ಬರು ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ (Girish Mahajan) ಮತ್ತು ಸ್ಥಳೀಯ ಪೊಲೀಸರೊಂದಿಗೆ ಮುಖಾಮುಖಿಯಾಗಿ ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ಹಿನ್ನಲೆ
ಮಹಾಯುತಿ ಮೈತ್ರಿಕೂಟದ ಅಡಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಈ ಅಡಚಣೆ ಸಂಭವಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಮಂಡಿಸಿದ್ದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆಯು ಸಂಸತ್ತಿನಲ್ಲಿ ಬಹುಮತದ ಕೊರತೆಯಿಂದಾಗಿ ಅಂಗೀಕಾರಗೊಳ್ಳಲು ವಿಫಲವಾಗಿತ್ತು. ಈ ಮಸೂದೆಯನ್ನು ತಿರಸ್ಕರಿಸಿದ ವಿರೋಧ ಪಕ್ಷಗಳ ನಿಲುವನ್ನು ಖಂಡಿಸಲು ಒತ್ತಾಯಿಸಿ ಬಿಜೆಪಿ ಈ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು.
ಸಂಜೆ 5 ಗಂಟೆಗೆ ಈ ಪ್ರತಿಭಟನೆ ಪ್ರಾರಂಭವಾಗಬೇಕಿತ್ತು. ಆದರೆ, ಪ್ರತಿಭಟನೆ ಆರಂಭ ವಿಳಂಬವಾದ ಕಾರಣ ನಗರದಾದ್ಯಂತ ಸಂಚಾರ ದಟ್ಟಣೆ ಉಂಟಾಯಿತು. ಈ ವೇಳೆ ಶಾಲೆಯಿಂದ ಮಗುವನ್ನು ಕರೆದುಕೊಂಡು ಬರಲು ಹೋಗುತ್ತಿದ್ದ ಮಹಿಳೆಯೊಬ್ಬಳು ಹಲವಾರು ಗಂಟೆಗಳ ಕಾಲ ಈ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರಿಂದ ಆಕ್ರೋಶಕ್ಕೆ ಒಳಗಾಗಿದ್ದಳು.
ತಕ್ಷಣವೇ ಮಹಿಳೆಯು ತನ್ನ ಕಾರಿನಿಂದ ಕೆಳಗಿಳಿದು ಸಚಿವ ಮಹಾಜನ್ ಜೊತೆ ತೀವ್ರ ವಾಗ್ವಾದಕ್ಕೆ ನಿಂತರು. ಈ ವೇಳೆ ರ‍್ಯಾಲಿಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪ್ರಶ್ನಿಸಿದ್ದು, ಅಲ್ಲಿ ಒಂದು ಖಾಲಿ ಮೈದಾನವಿದೆ. ನೂರಾರು ಜನರು ಕಾಯುತ್ತಿದ್ದಾರೆ ಅಲ್ಲೋಗಿ ಪ್ರತಿಭಟಿಸಿ ದಯವಿಟ್ಟು ಇಲ್ಲಿಂದ ಹೊರಡಿ ಎಂದು ಜೋರಾಗಿ ಕೂಗಲು ಆರಂಭಿಸಿದರು.
ಆದಾಗ್ಯೂ, ಪ್ರಯಾಣಿಕರ ಹತಾಶೆ ಮುಂಬೈ ಪೊಲೀಸರ ಮೇಲೂ ಇದ್ದಂತೆ ಕಾಣತೊಡಗಿತ್ತು. ಪರಿಸ್ಥಿತಿಯನ್ನು ಸುಧಾರಿಸಲು ಬಂದ ಪೊಲೀಸರ ಮೇಲೂ ಮಹಿಳೆ ವಾಗ್ವಾದ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲು ಒತ್ತಾಯಿಸಿದ್ದಾರೆ. ಇದಾದ ಬಳಿಕ ಅಧಿಕಾರಿಗಳು ಮಹಿಳೆಯನ್ನು ರಸ್ತೆಯ ಬದಿಗೆ ಕರೆದೊಯ್ದು ಅವರ ಸಮಸ್ಯೆಯನ್ನು ಆಲಿಸಲು ಪ್ರಯತ್ನಿಸಿದರು (ಏಜೆನ್ಸೀಸ್).