ಮೊನ್ನೆಯಷ್ಟೇ ಆಂಧ್ರ ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದ ವಿದ್ಯಾರ್ಥಿನಿ ಸಾವಿಗೆ ಶರಣು: ಕಣ್ಣೀರು ತರಿಸುತ್ತೆ ಆಕೆಯ ಕೊನೇ ಮಾತು! Andhra Student  
ದೇಶ

ಮೊನ್ನೆಯಷ್ಟೇ ಆಂಧ್ರ ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದ ವಿದ್ಯಾರ್ಥಿನಿ ಸಾವಿಗೆ ಶರಣು: ಕಣ್ಣೀರು ತರಿಸುತ್ತೆ ಆಕೆಯ ಕೊನೇ ಮಾತು! Andhra Student

ಪ್ರಮುಖ ಮುಖ್ಯಾಂಶಗಳು

  • ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಮೆಚ್ಚಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿ ಶಿವಾನಿ ಹಠಾತ್ ಆತ್ಮಹತ್ಯೆ
  • ಸಿಎಂ ಪಕ್ಕ ಕುಳಿತು ಕನಸು ಹಂಚಿಕೊಂಡ ಮೂರೇ ದಿನಕ್ಕೆ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
  • ಶೈನಿಂಗ್ ಸ್ಟಾರ್ ಪ್ರಶಸ್ತಿ ಗೆಲ್ಲುವ ಆಸೆ ವ್ಯಕ್ತಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಶಿವಾನಿ ದುರಂತ ಅಂತ್ಯ
  • ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಸಿಎಂ ಚಂದ್ರಬಾಬು ನಾಯ್ಡು
ವಿಜಯವಾಡ: ಸಾಧನೆಯ ಆಸರೆ ಹಿಡಿದು ಬಾನಿನತ್ತ ಹಾರಬೇಕಿದ್ದ ಪ್ರತಿಭೆಯೊಂದು ಹಠಾತ್ತಾಗಿ ಉಸಿರು ನಿಲ್ಲಿಸಿದೆ. ಕೆಲ ದಿನಗಳ ಹಿಂದಷ್ಟೇ ರಾಜ್ಯದ ಮುಖ್ಯಮಂತ್ರಿಯವರ ಪಕ್ಕದಲ್ಲೇ ಕುಳಿತು, ತಮ್ಮ ಉಜ್ವಲ ಕನಸುಗಳ ಬಗ್ಗೆ ಕಣ್ಣುಗಳಲ್ಲಿ ನಕ್ಷತ್ರದಂತಹ ಆಸೆಗಳನ್ನು ಹೊತ್ತು ಮಾತನಾಡಿದ್ದ ಕಂದಮ್ಮ ಇಂದು ಜಗತ್ತಿಗೇ ವಿದಾಯ ಹೇಳಿದ್ದಾಳೆ. ಆಂಧ್ರಪ್ರದೇಶದ ರಂಪಚೋಡವರಂ ಮಂಡಲದ ಇರ್ಲಪಲ್ಲಿ ಗ್ರಾಮದಲ್ಲಿ ನಡೆದ ಈ ದುರಂತ ಘಟನೆ ( Andhra Student ) ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದ್ದು, ಇಡೀ ಆಂಧ್ರಪ್ರದೇಶವೇ ಕಂಬನಿ ಮಿಡಿಯುತ್ತಿದೆ.
ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಆಯೋಜಿಸಿದ್ದ ಬೃಹತ್​ ಪಾಲಕರು ಮತ್ತು ಶಿಕ್ಷಕರ ಸಭೆಯಲ್ಲಿ (Mega Parent-Teacher Meeting) ಭಾಗವಹಿಸಿದ್ದ ಮುರಂ ಶಿವಾನಿ ಎಂಬ 10ನೇ ತರಗತಿಯ ವಿದ್ಯಾರ್ಥಿನಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮತ್ತು ಶಿಕ್ಷಣ ಸಚಿವ ನಾರಾ ಲೋಕೇಶ್ ಅವರ ಸಮ್ಮುಖದಲ್ಲಿ ಅತ್ಯಂತ ಉತ್ಸಾಹದಿಂದ ಮಾತನಾಡಿದ್ದಳು.
ಸರ್ಕಾರಿ ಜಿಲ್ಲಾ ಪರಿಷತ್ ಪ್ರೌಢಶಾಲೆಯ ಈ ವಿದ್ಯಾರ್ಥಿನಿ, ತನ್ನ ಭವಿಷ್ಯದ ಗುರಿ ಹಾಗೂ 'ಶೈನಿಂಗ್ ಸ್ಟಾರ್' ಪ್ರಶಸ್ತಿ ಗೆಲ್ಲುವ ಕನಸನ್ನು ಆ ವೇದಿಕೆಯಲ್ಲಿ ಹಂಚಿಕೊಂಡಿದ್ದಳು. ಶಿವಾನಿಯ ಮಾತಿಗೆ ಮೆಚ್ಚಿದ ಮುಖ್ಯಮಂತ್ರಿಗಳು ಆಕೆಯನ್ನು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡು ಆತ್ಮೀಯವಾಗಿ ಮಾತನಾಡಿ, ಆಕೆಯೊಂದಿಗೆ ಉಪಹಾರವನ್ನೂ ಸೇವಿಸಿದ್ದರು.
ಆದರೆ, ಈ ಪ್ರೇರಣಾದಾಯಿಕ ಘಟನೆ ನಡೆದ ಕೇವಲ ಮೂರೇ ದಿನಗಳಲ್ಲಿ ಶಿವಾನಿ ತನ್ನ ಅಜ್ಜಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ತನಿಖೆ ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಬರೆದಿಟ್ಟ ಡೆತ್ ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ಶಿವಾನಿ ತಂದೆ-ತಾಯಿಯ ಕನಸುಗಳನ್ನು ನನಸು ಮಾಡಲು ಕಷ್ಟಪಟ್ಟು ಓದಲು ಬಯಸಿದ್ದಾಗಿ ಹಾಗೂ ಕುಟುಂಬಸ್ಥರು ಒಗ್ಗಟ್ಟಿನಿಂದ ಬಾಳಬೇಕೆಂದು ಮನವಿ ಮಾಡಿದ್ದಾಳೆ. ಅಲ್ಲದೆ, ತನಗೆ ಬದುಕುವ ಆಸೆಯಿದ್ದರೂ ಜೀವನ ಕಷ್ಟಕರವಾಗಿ ತೋರುತ್ತಿದೆ ಎಂದು ಭಾವನಾತ್ಮಕವಾಗಿ ಬರೆದಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಈ ದುರಂತ ಸುದ್ದಿ ಕೇಳಿ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶಿವಾನಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ ಆಕೆಯಲ್ಲಿದ್ದ ಅದಮ್ಯ ಉತ್ಸಾಹ ಮತ್ತು ಭವಿಷ್ಯದ ಕನಸುಗಳನ್ನು ನೆನಪಿಸಿಕೊಂಡ ಸಿಎಂ, ಈ ಸಾವು ಅತ್ಯಂತ ಹೃದಯ ವಿದ್ರಾವಕವಾದದ್ದು ಎಂದಿದ್ದಾರೆ. ಯಾವುದೇ ಮಾನಸಿಕ ಒತ್ತಡ ಅಥವಾ ಭಾವುಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ತಕ್ಷಣವೇ ತಮ್ಮ ಕುಟುಂಬದವರು ಅಥವಾ ಸ್ನೇಹಿತರ ಬಳಿ ಮನಸ್ಸು ಬಿಚ್ಚಿ ಮಾತನಾಡಬೇಕು ಹಾಗೂ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದ್ದೇ ಇರುತ್ತದೆ ಎಂದು ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ನೆಚ್ಚಿನ ವಿದ್ಯಾರ್ಥಿನಿಯ ಅಗಲಿಕೆಯಿಂದ ರಂಪಚೋಡವರಂನ ಗಿರಿಜನ ಪ್ರದೇಶದ ನಿವಾಸಿಗಳು, ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳು ಕಣ್ಣೀರಿಡುತ್ತಿದ್ದು, ಶೋಕಸಾಗರದಲ್ಲಿ ಮುಳುಗಿದ್ದಾರೆ. ಯಾವುದೇ ಸಮಸ್ಯೆಯಿದ್ದರೂ ಉದಯಿಸುವ ಮುನ್ನವೇ ಪ್ರತಿಭೆಯೊಂದು ಹೀಗೆ ಅಸ್ತಮಿಸಿದ್ದು ಪ್ರತಿಯೊಬ್ಬರ ಮನಸ್ಸನ್ನು ತೀವ್ರವಾಗಿ ಕಲುಕಿದೆ, (ಏಜೆನ್ಸೀಸ್​).