ದೇಶ

ಶಾಲೆಯೊಳಗೆ ನುಗ್ಗಿ ಗರಗಸದಿಂದ ದಾಳಿ ನಡೆಸಿದ ಪ್ರಕರಣ: ಎಸ್ಕೇಪ್ ಆಗಲು ಯತ್ನಿಸಿದ ಪಾಪಿಗೆ ಪೊಲೀಸರಿಂದ ಗುಂಡೇಟು! | Chainsaw attack

Chainsaw attack: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ಟಾಡು ಸರ್ಕಾರಿ ಶಾಲೆಯ ತರಗತಿಯೊಂದರಲ್ಲಿ ಇಬ್ಬರು ಹತ್ತನೇ ತರಗತಿಯ ವಿದ್ಯಾರ್ಥಿನಿಯರ ಮೇಲೆ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿ ಹೇಮಂತ್ ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಭಯಾನಕ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ಹಲವು ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆ ಮುಂದುವರಿಸಿದ ಪೊಲೀಸರಿಗೆ, ಆತ್ಮಾಕೂರು ಅರಣ್ಯ ಪ್ರದೇಶದಲ್ಲಿ ಆರೋಪಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಭಾನುವಾರ ಅರಣ್ಯ ಪ್ರದೇಶಕ್ಕೆ ತೆರಳಿದ ಪೊಲೀಸರ ಮೇಲೆ ಹೇಮಂತ್ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಮತ್ತು ಆತ ಪರಾರಿಯಾಗುವುದನ್ನು ತಡೆಯಲು ಪೊಲೀಸರು ಆತನ ಮೇಲೆ ಆರು ಸುತ್ತು ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಹೇಮಂತ್‌ನನ್ನು ತಕ್ಷಣವೇ ಅನಂತಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಹಿನ್ನೆಲೆ!

ಅಕ್ಟೋಬರ್ 31 ರಂದು ರಾಪ್ಟಾಡು ಜಿಷಾಪರಿಷತ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಹೇಮಂತ್ ತಾನು ಪ್ರೀತಿಸುತ್ತಿದ್ದ ಯುವತಿಗೆ ಮದುವೆಯಾಗುವಂತೆ ಪ್ರಸ್ತಾಪಿಸಿದ್ದನು. ಆದರೆ ಆ ವಿದ್ಯಾರ್ಥಿನಿ ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಹೇಮಂತ್, ನೇರವಾಗಿ ಶಾಲೆಯ ತರಗತಿ ಕೊಠಡಿಗೆ ನುಗ್ಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ತನ್ನ ಸಹಪಾಠಿಯನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವಿದ್ಯಾರ್ಥಿನಿಯ ಮೇಲೆಯೂ ನಡೆಸಿದ್ದ.

ಈ ಘಟನೆಯಲ್ಲಿ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ದಾಳಿಯ ತೀವ್ರತೆಗೆ ಆಕೆಯ ಬಲಗೈ ಸಂಪೂರ್ಣವಾಗಿ ಕತ್ತರಿಸಿಹೋಗಿದೆ. ಇದರೊಂದಿಗೆ ಕುತ್ತಿಗೆ, ಮುಖ, ತಲೆಬುರುಡೆ ಮತ್ತು ಪಕ್ಕೆಲುಬುಗಳಿಗೆ ತೀವ್ರ ಸ್ವರೂಪದ ಮೂಳೆ ಮುರಿದಿದ್ದು, ರಕ್ತನಾಳಗಳಿಗೂ ಗಂಭೀರ ಹಾನಿಯಾಗಿದೆ.

ಆರಂಭದಲ್ಲಿ ಅನಂತಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಕಾರಣ ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ವೈದ್ಯರ ವಿಶೇಷ ತಂಡದೊಂದಿಗೆ ಗ್ರೀನ್ ಚಾನೆಲ್ ಮೂಲಕ ಆ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಅನಂತಪುರ ಜಿಜಿಎಹ್ ಅಧೀಕ್ಷಕಿ ಡಿ. ಮಲ್ಲೇಶ್ವರಿ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸಿರುವ ವರದಿಯ ಪ್ರಕಾರ, ಬಾಲಕಿಗೆ ಮುಖದ ಮೂಳೆ ಮುರಿದಿರುವುದು, ಎಡ ಮುಂದೋಳಿನಲ್ಲಿ ಸ್ನಾಯು ಹಾನಿ ಮತ್ತು ತಲೆ, ಕುತ್ತಿಗೆ ಭಾಗದಲ್ಲಿ ಹಲವಾರು ಗಾಯಗಳಾಗಿವೆ ಎಂದು ತಿಳಿಸಲಾಗಿದೆ. ವಿದ್ಯಾರ್ಥಿನಿಯರ ಮೇಲಿನ ಈ ಮೃಗೀಯ ದಾಳಿಯು ಇಡೀ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ(ಏಜೆನ್ಸೀಸ್​).