ಮೃತ ರಾಜ್ಯಲಕ್ಷ್ಮಿ ಅಲಿಯಾಸ್ ರಾಜಿ
- ಆಂಧ್ರ ಪ್ರದೇಶದ ಮೂಲದ ಯುವತಿಯೊಬ್ಬಳು ಅಮೆರಿಕದಲ್ಲಿ ದುರಂತ ಸಾವು
- ಎಂದಿನಂತೆ ಶುಕ್ರವಾರ ರಾತ್ರಿ ಮಲಗಿದ ಯುವತಿ ಮರುದಿನ ಬೆಳಗ್ಗೆ ಎಚ್ಚರಗೊಳ್ಳಲಿಲ್ಲ.
- ಆಕೆಯ ಸಾವಿನ ಬಗ್ಗೆ ಪಾಲಕರಲ್ಲಿ ಮೂಡಿದ ಹಲವು ಅನುಮಾನಗಳು
- ಅಮೆರಿಕದಿಂದ ಆಕೆಯ ಶವವನ್ನು ತರಲು ಕುಟುಂಬ ಸದಸ್ಯರು ಹೆಣಗಾಟ
ವಿಜಯವಾಡ/ ಟೆಕ್ಸಾಸ್: ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋಗಿದ್ದ ಆಂಧ್ರ ಪ್ರದೇಶದ ಮೂಲದ ಯುವತಿಯೊಬ್ಬಳು ( Young girl ) ಟೆಕ್ಸಾಸ್‌ನಲ್ಲಿ ದುರಂತ ಸಾವಿಗೀಡಾಗಿದ್ದಾಳೆ.
ಮೃತಳನ್ನು ರಾಜ್ಯಲಕ್ಷ್ಮಿ ಅಲಿಯಾಸ್ ರಾಜಿ ಎಂದು ಗುರುತಿಸಲಾಗಿದೆ. ರಾಜಿ ಅಮೆರಿಕದಲ್ಲಿ ಪದವಿ ಮುಗಿಸಿ, ಒಳ್ಳೆಯ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಆದರೆ, ಅವಳ ಬಾಳಲ್ಲಿ ವಿಧಿ ತನ್ನದೇಯಾದ ಪ್ಲಾನ್ ಹೊಂದಿತ್ತು. ಎದೆ ನೋವು ಮತ್ತು ಕೆಮ್ಮು ಇದ್ದರೂ ಅದನ್ನು ನಿರ್ಲಕ್ಷಿಸಿ ಶುಕ್ರವಾರ ರಾತ್ರಿ ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.
ಎಂದಿನಂತೆ ಶುಕ್ರವಾರ ರಾತ್ರಿ ಮಲಗಿದ ರಾಜಿ, ಮರುದಿನ ಎಚ್ಚರಗೊಳ್ಳಲಿಲ್ಲ. ಬಳಿಕ ಸ್ನೇಹಿತರಿಗೆ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಅವರೆಲ್ಲ ಆಕೆಯ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಆಕೆಯ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಈ ದುರಂತ ಘಟನೆ ನಡೆದಿದೆ.
ಬಾಪಟ್ಲ ಜಿಲ್ಲೆಯ ಕರಂಚೇಡು ಗ್ರಾಮದ ಸಣ್ಣ ಕೃಷಿಕ ಕುಟುಂಬದ ಯರ್ಲಗಡ್ಡ ರಾಮಕೃಷ್ಣ ಮತ್ತು ವೀಣಾ ಕುಮಾರಿ ದಂಪತಿಗೆ ಓರ್ವ ಮಗ ಮತ್ತು ಓರ್ವ ಪುತ್ರಿ. ಇಂಜಿನಿಯರಿಂಗ್ ಪದವಿ ಪಡೆದ ನಂತರ, ಅವರ ಮಗಳು ರಾಜ್ಯಲಕ್ಷ್ಮಿ (23) ತನ್ನ ಎಂಎಸ್ ಮಾಡಲು ಅಮೆರಿಕಕ್ಕೆ ತೆರಳಿದಳು. ಸಾಲ ಮಾಡಿ ಮಗಳನ್ನು ವಿದೇಶಕ್ಕೆ ಕಳುಹಿಸಿಕೊಟ್ಟರು. ಆಕೆ ಕೂಡ ತುಂಬಾ ಕಷ್ಟಪಟ್ಟು ಓದಿದಳು ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದಳು.
ಪದವಿ ಪಡೆದ ಬಳಿಕ ಕುಟುಂಬಕ್ಕೆ ಆಸರೆಯಾಗಲು ಆಕೆ ಕೆಲಸ ಹುಡುಕಲು ಪ್ರಯತ್ನಿಸುತ್ತಿದ್ದಳು. ಇದರ ನಡುವೆ ಎರಡು ಅಥವಾ ಮೂರು ದಿನಗಳಿಂದ ಆಕೆಗೆ ನಿರಂತರ ಕೆಮ್ಮು ಮತ್ತು ಎದೆನೋವು ಇತ್ತು. ಆದರೆ, ಆಕೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಿರುವಾಗ ಶುಕ್ರವಾರ ರಾತ್ರಿ ನಿದ್ರೆಗೆ ಜಾರಿದ ರಾಜಿ, ಶಾಶ್ವತವಾಗಿ ಕಣ್ಣು ಮುಚ್ಚಿದ್ದಾಳೆ.
ಇದೀಗ ರಾಜ್ಯಲಕ್ಷ್ಮಿಯ ಸಾವು ಆಕೆಯ ಹೆತ್ತವರನ್ನು ಮಾತ್ರವಲ್ಲದೆ ಸ್ಥಳೀಯರನ್ನು ಆಘಾತಕ್ಕೆ ದೂಡಿದೆ. ರಾಜಿಯ ಸಾವು ಹಳ್ಳಿಯಲ್ಲಿ ದುಃಖದ ಛಾಯೆಯನ್ನು ಮೂಡಿಸಿದೆ. ಆಕೆಯನ್ನು ಒಂದೊಳ್ಳೆ ಸ್ಥಾನದಲ್ಲಿ ನೋಡಲು ಹೆತ್ತವರು ಹಾಕಿದ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸದ್ಯ ಅಮೆರಿಕದಿಂದ ಆಕೆಯ ಶವವನ್ನು ತರಲು ಕುಟುಂಬ ಸದಸ್ಯರು ಹೆಣಗಾಡುತ್ತಿದ್ದಾರೆ, (ಏಜೆನ್ಸೀಸ್).