ಅಮರಾವತಿ: ಪ್ರೀತಿಸಿದ ಯುವಕನನ್ನು ಮದುವೆಯಾದಕ್ಕೆ 22 ವರ್ಷದ ಮಗಳನ್ನು ಉಸಿರುಗಟ್ಟಿಸಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಈ ಮರ್ಯಾದ ಹತ್ಯೆ ಪ್ರಕರಣ ಕಳೆದ ತಿಂಗಳು ಮಾರ್ಚ್ನಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹುಟ್ಟಿದಾಗಿನಿಂದ ಸಾಯುವವರೆಗೂ ಹೆತ್ತು, ಹೊತ್ತು ಬೆಳೆಸಿದ ಮಕ್ಕಳು ತಮ್ಮ ಇಚ್ಛೆಯಂತೆ ನಡೆದುಕೊಳ್ಳದೆ, ತಮ್ಮದೇ ಜಾತಿಯ ಯುವಕನನ್ನು ಮದುವೆ ಮಾಡಿಕೊಳ್ಳದೇ ಇರುವಾಗ ಸಿಟ್ಟಾಗುವ ಪೋಷಕರು ಮಕ್ಕಳನ್ನು ಕೊಲೆ ಮಾಡುವ ಪ್ರಕರಣ ಕೇಳಿ ಬಂದಿರೋದು ಇದೇ ಮೊದಲೇನಲ್ಲ. ಮಗಳನ್ನು ಅಥವಾ ಆಕೆಯ ಪ್ರಿಯರಕನನ್ನು ಕೊಲೆ ಮಾಡುವ ಘಟನೆಗಳ ಸಾಕಷ್ಟು ಇವೆ. ಸದ್ಯ ಇಂತದ್ದೇ ಪ್ರಕರಣದಲ್ಲಿ ತಂದೆಯನ್ನು ಬಂಧಿಸಲಾಗಿದ್ದು, ಕೊಲೆಯನ್ನು ಆತ್ಮಹತ್ಯೆ ಬಿಂಬಿಸಲು ಮುಂದಾದ ಪೊಲೀಸ್ನ್ನು ಅಮಾನತುಗೊಳಿಸಲಾಗಿದೆ.
ಏನಿದು ಘಟನೆ?
ಮಾಚೆರ್ಲ ಪಟ್ಟಣದ ಯಾದವ ಬಜಾರ್ ನಿವಾಸಿಯಾದ 22 ವರ್ಷದ ಚೌಡೇಶ್ವರಿ ಹತ್ಯೆಯಾದ ಯುವತಿ. ಇದೇ ಜಿಲ್ಲೆಯ ಜಮ್ಮಲಮಡಕ ಗ್ರಾಮದ ನಾಗರಾಜು ಎಂಬ ಯುವಕನನ್ನು ಪ್ರೇಮಿಸುತ್ತಿದ್ದಳು. ಇವರ ಪ್ರೇಮಕ್ಕೆ ಚೌಡೇಶ್ವರಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇಷ್ಟೇ ಇಲ್ಲದೆ ಆಕೆಗೆ ತಿಳಿಯದಂತೆ ಬೇರೊಬ್ಬ ವ್ಯಕ್ತಿ ಜೊತೆಗೆ ಮದುವೆ ಮಾಡಿಸಲು ಮುಂದಾಗಿದ್ದರು.
ಮಾರ್ಚ್4ರಂದು ಚೌಡೇಶ್ವರಿ ಮನೆಬಿಟ್ಟು ಬಂದಿದ್ದಳು. ಆ ನಂತರ ಕೆಲವೇ ದಿನಕ್ಕೆ ನಾಗರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ಇತ್ತ ಆಕೆಯ ತಂದೆ ತಂದೆ ಚಂದ್ರ ಶ್ರೀನು ಮಾಚೆರ್ಲ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು ಎನ್ನಲಾಗಿದೆ. ದೂರು ಕೊಟ್ಟು ಹಲವು ದಿನಗಳಾಗಿದೆ. ಆದರೆ, ಪೊಲೀಸರು ತನ್ನ ಮಗಳನ್ನು ಹುಡುಕುವ ಯತ್ನಕ್ಕೆ ಕೈ ಹಾಕುತ್ತಲೇ ಇಲ್ಲ ಎಂದು ಚೌಡೇಶ್ವರಿಯವರ ತಂದೆ ಶ್ರೀನು ಮಾಚೆರ್ಲ ತನ್ನ ಸಹಚರರೊಂದಿಗೆ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಮಾ.18ರಂದು ಆಕೆ ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚಿ, ವಿಚಾರಣೆ ನಡೆಸಿದರು. ಪೋಷಕರ ಮನೆಗೆ ವಾಪಸ್ ಹಿಂತಿರುಗುವಂತೆ ಒತ್ತಾಯ ಮಾಡಿದ್ದರು. ನನಗೆ ಈಗ 22 ವರ್ಷ ನಾನು ಯಾರನ್ನು ಮದುವೆ ಮಾಡಿಕೊಳ್ಳಬೇಕು. ಎಲ್ಲಿರಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ನಾನು ನಾಗರಾಜು ಎಂಬ ಯುವಕನನ್ನು ಪ್ರೇಮಿಸಿ ಮದುವೆಯಾಗಿದ್ದೇನೆ. ಆತನೊಂದಿಗೆ ಜೀವನ ಕಳೆಯುವ ಆಸೆಯನ್ನು ಇಟ್ಟುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಚೌಡೇಶ್ವರಿ ತಂದೆ ಎಷ್ಟೇ ಕೇಳಿಕೊಂಡರು ಆಕೆ ಒಪ್ಪದೆ ನಾಗರಾಜು ಜೊತೆಗೆ ಇರುವುದಾಗಿ ತಿಳಿಸಿದಳು.ಆದರೆ, ಆಕೆ ಎಷ್ಟೇ ಬೇಡಿಕೊಂಡರು ಬಿಡದೇ ಒತ್ತಾಯ ಮಾಡಿ ಪೊಲೀಸರು ಪೋಷಕರ ಜೊತೆ ಕಳುಹಿಸಿದ್ದರು.
ಕತ್ತು ಹಿಸುಕಿ ಕೊಲೆ
ಅದೇ ದಿನ ರಾತ್ರಿ, ಮಗಳು ನಿದ್ರಿಸುತ್ತಿದ್ದಾಗ ತಂದೆ ಚಂದ್ರ ಶ್ರೀನು ಮತ್ತೊಬ್ಬ ವ್ಯಕ್ತಿಯ ಸಹಾಯದೊಂದಿಗೆ ಆಕೆಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾರೆ. ಬಳಿಕ ಇದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ ಏಪ್ರಿಲ್ 4 ರಂದು ಬಂದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅದು ಹತ್ಯೆ ಎಂದು ದೃಢಪಟ್ಟಿದೆ. ಹೆಚ್ಚಿನ ವಿಚಾರಣೆಯಲ್ಲಿ ಚಂದ್ರ ಶೀನು ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ಪೋಷಕರಿಂದ ಲಂಚ ಪಡೆದಿರುವ ಆರೋಪವನ್ನು ಪೊಲೀಸ್ ಅಧಿಕಾರಿ ಹೊತ್ತಿದ್ದು, ಸದ್ಯ ಅವರ ಬ್ಯಾಂಕ್ ಡಿಟೇಲ್ಸ್ ಪರಿಶೀಲನೆ ಮಾಡಲಾಗುತ್ತಿದೆ. ಹೀಗಾಗಿ, ಪೊಲೀಸ್ ಅಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥ ಎಂದು ಸಾಬೀತಾದರೆ ಕ್ರಿಮಿನಲ್ ಕೇಸ್ ಎದುರಿಸಬೇಕಾದ ಸಾಧ್ಯತೆ ಇದೆ ಎನ್ನಲಾಗುತ್ತಿದೆ, (ಏಜೆನ್ಸೀಸ್).