Andhra Man Beaten, Tied To Scooter, Dragged Over Non-Payment Of Rs 30,000 
ದೇಶ

30 ಸಾವಿರಕ್ಕಾಗಿ ಇಷ್ಟು ಕ್ರೂರಿಗಳಾಗ್ತಾರಾ?; ಸಾಲಗಾರನ ಕತ್ತಿಗೆ ಹಗ್ಗ ಕಟ್ಟಿ, ಅರೆಬೆತ್ತಲೆಗೊಳಿಸಿ ರಸ್ತೆಯುದ್ದಕ್ಕೂ ಎಳೆದೊಯ್ದ ದೃಶ್ಯ ವೈರಲ್..Andhra

ಪ್ರಮುಖ ಮುಖ್ಯಾಂಶಗಳು

  • ಮೂವತ್ತು ಸಾವಿರ ರೂಪಾಯಿ ಪಾವತಿ ಮಾಡದಿದ್ದಕ್ಕೆ ಹಲ್ಲೆ.
  • ಕತ್ತಿಗೆ ಹಗ್ಗ ಕಟ್ಟಿ ರಸ್ತೆಯೆಲ್ಲ ಅಲೆದಾಡಿಸಿದ ನಾಲ್ವರು.
  • ವೈರಲ್​ ಆದ ವಿಡಿಯೋ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಆಂಧ್ರ: ಮೂವತ್ತು ಸಾವಿರ ರೂಪಾಯಿಯನ್ನು ಮರುಪಾವತಿ ಮಾಡಿಲ್ಲ ಎನ್ನುವ ಸಿಟ್ಟಿನಿಂದ ವ್ಯಕ್ತಿಯೊಬ್ಬನ ಕತ್ತಿಗೆ ಹಗ್ಗ ಕಟ್ಟಿ, ಅರೆಬೆತ್ತಲೆ ಮಾಡಿ ರಸ್ತೆ ಮಧ್ಯೆ ಎಳೆದೊಯ್ದ ಪೈಶಾಚಿಕ ಘಟನೆ ಆಂಧ್ರದ ವಿಜಯನಗರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 
ಎಕ್ಸ್​ ಸೇರಿದಂತೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದ್ದು, ನೆಟ್ಟಿಗರು ಮಾನವೀಯತೆ ಎಲ್ಲಿದೆ, ಪೊಲೀಸರು ಈ ಘಟನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇ ಬೇಕು ಎಂದು ಒತ್ತಾಯಿಸಿದ್ದಾರೆ. ವೈರಲ್​ ಆದ ವಿಡಿಯೋ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. 

 ಯೆಲ್ಲಾ ರಾಜೇಶ್ ಸಂತ್ರಸ್ತ

ಮೂವತ್ತು ಸಾವಿರ ರೂಪಾಯಿ ಪಾವತಿ ಮಾಡಲಾಗದೆ, ಅಸಾಹಯಕ ಸ್ಥಿತಿಯಲ್ಲಿ ಅರೆಬೆತ್ತಲೆಯಾಗಿ ರಸ್ತೆ ಮಧ್ಯೆ ಓಡಾಡಿದ ವ್ಯಕ್ತಿಯನ್ನು ಪೊಲೀಸರು, ಯೆಲ್ಲಾ ರಾಜೇಶ್​ ಎಂದು ಗುರುತಿಸಿದ್ದಾರೆ.
ಪೊಲೀಸರು ಕಲೆ ಹಾಕಿದ ಮಾಹಿತಿ ಪ್ರಕಾರ, ಯೆಲ್ಲಾ ರಾಜೇಶ್​ ಅವರು ಮೆಕ್ಯಾನಿಕ್ ವಿ. ಮಹೇಶ್ ಎಂಬಾತನಿಂದ   25,000 ರೂಪಾಯಿ ಕೊಟ್ಟು ಸ್ಕೂಟರ್​ ಖರೀದಿ ಮಾಡಲು ಒಪ್ಪಿದ್ದರು. ಆದರೆ ಟೆಸ್ಟ್​ ರೈಡ್​ ಮಾಡುವಾಗ ಆಯತಪ್ಪಿ ಪೊಲೀಸ್​ ಕಾನ್​ಸ್ಟೇಬಲ್​ ಒಬ್ಬರ ಕಾರಿಗೆ ಗಾಡಿ ಡಿಕ್ಕಿ ಹೊಡೆದು ಹಾನಿಗೊಳಗಾಗಿದೆ. ರಿಪೇರಿ ವೆಚ್ಚಕ್ಕಾಗಿ ಮಹೇಶ್​ ಸಹೋದರ 5 ಸಾವಿರ ಪಾವತಿ ಮಾಡಿದ್ದರು. ಹೀಗಾಗಿ ಯೆಲ್ಲಾ ರಾಜೇಶ್​ ಸಾಲ 30 ಸಾವಿರಕ್ಕೆ ಏರಿಕೆಯಾಯ್ತು.

ಅಪಹರಿಸಿ, ಹಣಕ್ಕೆ ಬೇಡಿಕೆ

ಹಣ ನೀಡಲು ರಾಜೇಶ್​ ನಿರಂತರ ಹಿಂದೇಟು ಹಾಕುತ್ತಿದ್ದ. ತಪ್ಪಿಸಿಕೊಂಡು ಓಡಾಡುತ್ತಿದ್ದ. ಹೀಗಾಗಿ ಕೋಪಗೊಂಡ ಮಹೇಶ್​ ಹಾಗೂ ಆತನ ಸ್ನೇಹಿತ ಶ್ರೀರಾಮ್​ ಸೆಪ್ಟೆಂಬರ್​ 5ರಂದು ರಾಜೇಶ್​ನನ್ನು ಅಪಹರಿಸಿ ಭೋಗಪುರದ ಶೆಡ್​​ನಲ್ಲಿ ಕೂಡಿಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸೆಪ್ಟೆಂಬರ್ 6 ರ ಬೆಳಿಗ್ಗೆ ಬಂದ ಮಹೇಶ್​ ಬಳಿ ನನಗೆ ಈಗಿಂದೀಗಲೇ ಹಣ ಪಾವತಿ ಮಾಡೋಕೆ ಸಾಧ್ಯವಿಲ್ಲ ಎಂದು ರಾಜೇಶ್ ಹೇಳಿದ್ದಾನೆ. ಇದರಿಂದ ಸಿಟ್ಟಾಗಿ ಮಹೇಶ್, ಶ್ರೀರಾಮ್ ಮತ್ತು ಮೂವರು ಸಹಚರರಾದ ಬಿ ವೆಂಕಟ ರಾವ್, ಎನ್ ಗೋವಿಂದ್ ಮತ್ತು ವಿ ಅಪ್ಪಾ ರಾವ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತನನ್ನು ಅರೆಬೆತ್ತಲೆಗೊಳಿಸಿ, ಕೈ ಮತ್ತು ಕುತ್ತಿಗೆಗೆ ಹಗ್ಗಗಳನ್ನು ಕಟ್ಟಿ, ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋಗಿ, ನಂತರ ಎಳೆದೊಯ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್​ ಆದ ವಿಡಿಯೋ ಆಧಾರದ ಮೇಲೆ ಮಹೇಶ್​ ಮತ್ತು ಆತನ ಸ್ನೇಹಿತರ ವಿರುದ್ಧ ಕೇಸ್ ದಾಖಲಿಸಿದ್ದಾರೆ, (ಏಜೆನ್ಸೀಸ್).