ಅಳಿಯನಿಗೆ 158 ಬಗೆಯ ಭಕ್ಯ್ಯ ಉಣಬಡಿಸಿದ ಅತ್ತೆ-ಮಾವ
- ಪುತ್ರಿಯ ಗಂಡನಿಗೆ 158 ಬಗೆಯ ವಿಶೇಷ ಭಕ್ಷ್ಯ ಉಣಬಡಿಸಿದ ಅತ್ತೆ-ಮಾವ
- ಮದುವೆ ಬಳಿಕ ಮೊದಲ ಬಾರಿಗೆ ಮನೆಗೆ ಬಂದ ಮಗಳ ಗಂಡನಿಗೆ ವಿಶೇಷ ಭೋಜನ
- ಅತ್ತೆ-ಮಾವ, ಅಳಿಯ-ಸೊಸೆಯ ಖುಷಿಗೆ ಕೊನೆಯೇ ಇಲ್ಲ
ಆಂಧ್ರಪ್ರದೇಶ: ಮನೆಗೆ ಬಂದ ಅಳಿಯನಿಗೆ ಅತ್ತೆ-ಮಾವಂದಿರು ವಿಶೇಷ ಮನ್ನಣೆ ನೀಡುವುದು ಸಾಮಾನ್ಯ ಸಂಗತಿ. ಆದರೆ, ಆಂಧ್ರಪ್ರದೇಶದಲ್ಲಿ ಬಹಳ ಹಿಂದಿನಿಂದ ಒಂದು ವಿಶೇಷ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಅದೇನೆಂದರೆ, ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಕಾಲಿಡುವ ಅಳಿಯನಿಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಉಣಬಡಿಸುವುದು. ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಇಂತಹ ಆಚರಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಅಂತೆಯೇ, ಸಂಕ್ರಾಂತಿ ಹಬ್ಬಕ್ಕೆ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ವಿಶೇಷ ಆತಿಥ್ಯ ನೀಡಿದ ಅತ್ತೆ-ಮಾವನ ಪ್ರೀತಿ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.
ರೈತರ ಸುಗ್ಗಿಯನ್ನು ಸಂಭ್ರಮಿಸುವ ಒಂದು ವಿಶೇಷ ದಿನವೇ ಸಂಕ್ರಾಂತಿ ಹಬ್ಬ. ಈ ದಿನದಂದು ಎಳ್ಳು-ಬೆಲ್ಲ, ಕಬ್ಬು ಹಂಚಿ, ಮನೆಗೆ ಬರುವ ಅತಿಥಿಗಳಿಗೆ ಸಿಹಿಭರಿತ ಹಾಗೂ ರುಚಿಕರವಾದ ಅಡುಗೆ ತಯಾರಿಸಿ, ಉಣಬಡಿಸುವುದು ನಮ್ಮ ಸಂಪ್ರದಾಯಗಳಲ್ಲಿ ಸಾಮಾನ್ಯ. ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚು. ಹೀಗಿರುವಾಗ, ತೆನಾಲಿ ಮೂಲದ ಕುಟುಂಬವೊಂದು ತಮ್ಮ ಮನೆಗೆ ಮೊದಲ ಬಾರಿಗೆ ಬಂದ ಅಳಿಯನಿಗೆ ಬರೋಬ್ಬರಿ 158 ಬಗೆಯ ಭಕ್ಷ್ಯಗಳನ್ನು ಬಡಿಸುವ ಮೂಲಕ ಅವರ ಹೊಟ್ಟೆಯನ್ನು ಸಂತೃಪ್ತಿ ಪಡಿಸಿದ್ದಾರೆ.
ಆಂಧ್ರಪ್ರದೇಶದ ಗೋದಾವರಿ ಮೂಲದ ಅಳಿಯ ಶ್ರೀದತ್ತ ಮತ್ತು ಮಗಳು ಮೌನಿಕಾ ಸಪ್ತಪದಿ ತುಳಿದ ಬಳಿಕ ಮೊದಲ ಬಾರಿಗೆ ಮನೆಗೆ ಕಾಲಿಡುವ ಘಳಿಗೆಯನ್ನು ಹೆತ್ತವರು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಅತ್ತೆ-ಮಾವ ನೀಡಿದ ಭೂರಿ ಭೋಜನ ಸವಿದ ಅಳಿಯ ಖುಷಿ ಹೇಳತೀರದು ಎಂಬುದು ಹರಿದಾಡುತ್ತಿರುವ ಫೋಟೋ, ವಿಡಿಯೋಗಳೇ ಹೇಳುತ್ತಿವೆ,(ಏಜೆನ್ಸೀಸ್).