Andhra Pradesh Engineer family death 
ದೇಶ

'ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬೆದರಿಕೆ'; ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!..Andhra

ಪ್ರಮುಖ ಮುಖ್ಯಾಂಶಗಳು

  • ಗೋಧಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಕೇಸ್​ಗೆ ಟ್ವಿಸ್ಟ್.
  • ರೈಫಲ್ ಶೂಟಿಂಗ್ ಕೋಚ್ ಶೇಖ್ ಸಾದಿಕ್ ಖಾನ್ ಕಾರಣ ಎಂದು ಡೆತ್​ನೋಟ್ ಬರೆದಿದ್ದ ಕುಟುಂಬ.
  • ಶೇಖ್ ಸಾದಿಕ್ ಖಾನ್​ರನ್ನು ಬಂಧಿಸಿದ ಪೊಲೀಸರು, ವಿಚಾರಣೆ ಮುಂದುವರಿಕೆ.

ಗೋದಾವರಿ: ಆಂಧ್ರ ಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್​ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಗೆ ಸದ್ಯ ಟ್ವಿಸ್ಟ್​ವೊಂದು ಸಿಕ್ಕಿದೆ. ಪೊಲೀಸರು ನಡೆಸಿದ ತನಿಖೆಯ ಪ್ರಕಾರ ರೈಫಲ್​ ತರಬೇತಿದಾರನ ಮತಾಂತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಆರೋಪದ ಮೇರೆಗೆ ಆತನನ್ನು ಪೊಲೀಸರು ಬಂಧಿಸಿದ್ದಾರೆ

ಆಗಸ್ಟ್ 16 ಮತ್ತು 17 ರ ಮಧ್ಯರಾತ್ರಿ ಪಂಚಾಯತ್ ರಾಜ್ ಸಹಾಯಕ ಎಂಜಿನಿಯರ್ ತಿಲ್ಲಪುಡಿ ನೂಕರಾಜು, ಅವರ ಪತ್ನಿ ಮೀನಾ, ಮಗಳು ಸೌಜನ್ಯ ಮತ್ತು 10 ವರ್ಷದ ಮೊಮ್ಮಗ ರಾಜಮಹೇಂದ್ರವರಂನ ರಸ್ತೆ-ಕಮ್-ರೈಲು ಸೇತುವೆಯಿಂದ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಅಲ್ಲೇ ಇದ್ದ ಮೀನುಗಾರರು ಕುಟುಂಬಸ್ಥರನ್ನು ಕಾಪಾಡಲು ಮುಂದಾಯಿತು. ಇದರಲ್ಲಿ ಮೊಮ್ಮಗ ಮಾತ್ರ ಪ್ರಾಣಾಪಯದಿಂದ ಪಾರಾಗಿದ್ದು, ನೂಕರಾಜು ಮತ್ತು ಮಗಳು, ಪತ್ನಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮತಾಂತರಕ್ಕೆ ಒತ್ತಾಯ

ಕುಟುಂಬವು ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ, ಇದರ ಹಿಂದಿರುವ ಕಾರಣ ಏನು ಎಂದು ತನಿಖೆಗೆ ಮುಂದಾದ ಪೊಲೀಸರಿಗೆ ಮೃತ ನೂಕರಾಜು ಅವರು ಬರೆದಿದ್ದ ಡೆತ್ ನೋಟ್ ಲಭ್ಯವಾಗಿತ್ತು. ಈ ಪತ್ರದಲ್ಲಿ ರೈಫಲ್ ಶೂಟಿಂಗ್ ಕೋಚ್ ಶೇಖ್ ಸಾದಿಕ್ ಖಾನ್ ಎಂಬಾತನೇ ತಮ್ಮ ಕುಟುಂಬದ ಈ ಪರಿಸ್ಥಿತಿಗೆ ಕಾರಣ. ಬೇರೆ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ, ಕೊಲೆ ಬೆದರಿಕೆ ಮತ್ತು ಸುಲಿಗೆ ಮಾಡಲು ಯತ್ನಿಸಿದ್ದ ಎನ್ನುವುದಾಗಿ ಉಲ್ಲೇಖಿಸಿದ್ದಾರೆ. ನೂಕುರಾಜು ಅವರು ಮಾಡಿದ್ದ ಆರೋಪಗಳಡಿ ಶೇಖ್ ಸಾದಿಕ್ ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ 10ಕ್ಕೂ ಹೆಚ್ಚು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಆರೋಪಿ ಯಾವುದೇ ಮೊಬೈಲ್ ಫೋನ್ ಬಳಸದೆ ಹಾಗೂ ಡಿಜಿಟಲ್ ವಹಿವಾಟುಗಳನ್ನು ಮಾಡದೆ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಆದರೂ ಆತನ ಚಲನವಲನಗಳನ್ನು ಬೆನ್ನತ್ತಿದ ತನಿಖಾಧಿಕಾರಿಗಳು, ಐದು ರಾಜ್ಯಗಳಲ್ಲಿ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಉತ್ತರ ಪ್ರದೇಶದ ಮೀರತ್‌ನಲ್ಲಿ ಆತನನ್ನು ಬಂಧಿಸಿದ್ದಾರೆ. "ಇದೊಂದು ಅತ್ಯಂತ ಕಠಿಣ ಕಾರ್ಯಾಚರಣೆಯಾಗಿತ್ತು" ಎಂದು ಕಾಕಿನಾಡ ಜಿಲ್ಲಾ ಎಸ್ಪಿ ಬಿಂದು ಮಾಧವ್ ತಿಳಿಸಿದ್ದಾರೆ.
ಸದ್ಯ ಆರೋಪಿ ಖಾನ್‌ನನ್ನು ಟ್ರಾನ್ಸಿಟ್ ವಾರಂಟ್ ಆಧಾರದ ಮೇಲೆ ಆಂಧ್ರಪ್ರದೇಶಕ್ಕೆ ಕರೆತರಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ನೂಕರಾಜು ಅವರ ಮೊಮ್ಮಗ ವ್ಯಾಸಂಗ ಮಾಡುತ್ತಿದ್ದ ಶಾಲೆಯಲ್ಲಿ ಖಾನ್ ರೈಫಲ್ ಶೂಟಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಆತ ನೂಕರಾಜು ಮತ್ತು ಅವರ ಕುಟುಂಬಕ್ಕೆ ಪರಿಚಿತನಾಗಿದ್ದ ಎಂದು ತಿಳಿದುಬಂದಿದೆ.

ಮಾಜಿ ಸಂಸದ ಹೇಳಿದ್ದೇನು?

ಮಾಜಿ ಸಂಸದ ವಿಜಯಸಾಯಿ ಅವರು ಮಾತನಾಡಿ, ಈ ಕೇಸ್ ಅನ್ನು ಸಿಬಿಐ ಅಥವಾ ಎನ್‌ಐಎ ತನಿಖೆಗೆ ನೀಡಬೇಕು. ಇದರಲ್ಲಿ ಅಂತರರಾಷ್ಟ್ರೀಯ ಸಂಪರ್ಕವಿದೆ. ಖಾನ್ ಧಾರ್ಮಿಕ ಮತಾಂತರ, ಸುಲಿಗೆ, ಬಂದೂಕು ಪೂರೈಕೆ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ, (ಏಜೆನ್ಸೀಸ್).