- ಅಕ್ರಮ ಆಸ್ತಿ ಗಳಿಸಿದ ಆರೋಪ ಮುಜರಾಯಿ ಅಧಿಕಾರಿ ಕಾಳಿಂಗಿರಿ ಶಾಂತಿ ಬಂಧಿಸಿದ ಎಸಿಬಿ
- ವಿಶಾಖಪಟ್ಟಣಂ ಸೇರಿದಂತೆ ನಾಲ್ಕಾರು ಕಡೆ ಏಕಕಾಲಕ್ಕೆ ಎಸಿಬಿ ದಾಳಿ
- 770 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಸೇರಿ ಅಕ್ರಮ ಆಸ್ತಿ ಗಳಿಸಿಕೊಂಡಿರುವ ಶಾಂತಿ
Andhra Pradesh: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಭ್ರಷ್ಟ ಅಧಿಕಾರಿಗಳ ವಿರುದ್ಧ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸಿದ ದಾಳಿಯ ನಂತರ, ಮುಜರಾಯಿ ಇಲಾಖೆಯ ಸಹಾಯಕ ಕಮಿಷನರ್ ಕಾಳಿಂಗಿರಿ ಶಾಂತಿ ಎಂಬುವವರನ್ನು ಬಂಧಿಸಲಾಗಿದೆ.
ಕಾಳಿಂಗಿರಿ ಶಾಂತಿ 2020ರಲ್ಲಿ ಆಂಧ್ರಪ್ರದೇಶದ ಮುಜರಾಯಿ ಇಲಾಖೆಯ ಸಹಾಯಕ ಕಮಿಷನರ್ ಆಗಿ ಸಾರ್ವಜನಿಕ ಸೇವಾ ಆಯೋಗದ ಮೂಲಕ ನೇಮಕಗೊಂಡಿದ್ದರು, ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ ಸೇವೆ ಸಲ್ಲಿಸಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ 2024 ರಿಂದ 2026ರವರೆಗೆ ಅಮಾನತಿನಲ್ಲಿದ್ದರು ಎನ್ನಲಾಗಿದೆ.
ಕಾಳಿಂಗಿರಿ ಶಾಂತಿಯವರ ಬಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಇದೆ ಎನ್ನುವುದನ್ನು ಗುಪ್ತ ಮೂಲಗಳಿಂದ ಪತ್ತೆ ಹಚ್ಚಿದ ಎಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದರು. ಅವರ ವಿಶಾಖಪಟ್ಟಣಂನಲ್ಲಿರುವ ಫ್ಲ್ಯಾಟ್, ತಾಡೆಪಲ್ಲಿಯ ಕುಂಚನಪಲ್ಲಿಯಲ್ಲಿರುವ ಮನೆ ಮತ್ತು ಅವರ ತಾಯಿಯ ಬಟ್ಟೆ ಅಂಗಡಿಯ ಮೇಲೆ ದಾಳಿ ನಡೆಸಿ, ಸುಮಾರು 10 ಗಂಟೆಗಳ ಕಾಲ ನಡೆದ ಸುದೀರ್ಘ ಶೋಧ ನಡೆಸಿದರು.
ತನಿಖೆಯಲ್ಲಿ ಬಯಲಾಗಿದ್ದು ಏನು?
ಶಾಂತಿ ಅವರು ದೇಗುಲಗಳಿಗೆ ಭೂಮಿಯನ್ನು ಲೀಸ್ಗೆ ನೀಡುವ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ ಎನ್ನುವುದು ಬಯಲಿಗೆ ಬಂದಿದೆ. ಜೊತೆಗೆ ಹುಂಡಿ ಎಣಿಕೆ ಕಾರ್ಯದಲ್ಲಿ ಪಾರದರ್ಶಕತೆ ಇಲ್ಲದಿರುವ ಆರೋಪಗಳನ್ನು ಅವರ ಮೇಲೆ ವರಿಸಲಾಗಿದೆ. ಸದ್ಯ ಕೋರ್ಟ್ ಅವರನ್ನು ಏಪ್ರಿಲ್.21ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ವಿಜಯವಾಡ ಜಿಲ್ಲಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಏನೆಲ್ಲ ಸಿಕ್ಕಿದೆ?
ವಿಶಾಖಪಟ್ಟಣಂನಲ್ಲಿರುವ ವಸತಿ ಫ್ಲಾಟ್, ವಿನಯವಾಡದಲ್ಲಿರುವ ಜಿ+2 ಕಟ್ಟಡ, ಸುಮಾರು 770 ಗ್ರಾಂ ಚಿನ್ನಾಭರಣಗಳು, ಸುಮಾರು 3 ಕಿಲೋಗ್ರಾಂಗಳಷ್ಟು ಬೆಳ್ಳಿ ವಸ್ತುಗಳು, 1.15 ಲಕ್ಷ ರೂ. ನಗದು ಮತ್ತು ಸುಮಾರು 3 ಲಕ್ಷ ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರೊಂದಿಗೆ ವೋಕ್ಸ್‌ವ್ಯಾಗನ್ ಪೋಲೋ ಕಾರು, ಮೋಟಾರ್‌ಸೈಕಲ್, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಹ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ, (ಏಜೆನ್ಸೀಸ್)