ಸಾವಿನ ದವಡೆಯಲ್ಲಿರುವ ನೀರಾನೆಗಳಿಗೆ ಅಂಬಾನಿ ಆಸರೆ: ವಂತರಾಕ್ಕೆ ಶಿಫ್ಟ್​ ಮಾಡಲು ಕೊಲಂಬಿಯಾಗೆ ಮನವಿ! Vantara  
ದೇಶ

ಸಾವಿನ ದವಡೆಯಲ್ಲಿರುವ ನೀರಾನೆಗಳಿಗೆ ಅಂಬಾನಿ ಆಸರೆ: ವಂತರಾಕ್ಕೆ ಶಿಫ್ಟ್​ ಮಾಡಲು ಕೊಲಂಬಿಯಾಗೆ ಮನವಿ! Vantara

ಪ್ರಮುಖ ಮುಖ್ಯಾಂಶಗಳು

  • ಕೊಲಂಬಿಯಾದ ಮ್ಯಾಗ್ಡಲೇನಾ ನದಿ ಪಾತ್ರದಲ್ಲಿರುವ 80 ನೀರಾನೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಆದೇಶಿಸಿದೆ
  • ಈ ಕಠಿಣ ನಿರ್ಧಾರಕ್ಕೆ ತಡೆ ನೀಡುವಂತೆ ವಿಶ್ವದ ಬೃಹತ್ ವನ್ಯಜೀವಿ ಸಂರಕ್ಷಣಾ ಕೇಂದ್ರ 'ವಂತಾರಾ' ಮನವಿ ಮಾಡಿದೆ
  • ವಂತಾರಾ ಸಂಸ್ಥೆಯ ಸಂಸ್ಥಾಪಕ ಅನಂತ್ ಅಂಬಾನಿ ಅವರು ಕೊಲಂಬಿಯಾ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ
  • ನೀರಾನೆಗಳನ್ನು ಕೊಲ್ಲುವ ಬದಲಿಗೆ ಮಾನವೀಯ ನೆಲೆಯಲ್ಲಿ 'ವಂತಾರಾ'ಗೆ ಸ್ಥಳಾಂತರಿಸಿ ಎಂದಿದ್ದಾರೆ ಅನಂತ್​ ಅಂಬಾನಿ
ಜಾಮ್‌ನಗರ : ಕೊಲಂಬಿಯಾದ ಮ್ಯಾಗ್ಡಲೇನಾ ನದಿ ಪಾತ್ರದಲ್ಲಿರುವ 80 ನೀರಾನೆಗಳನ್ನು (ಹಿಪೊಪೊಟಮಸ್) ಹತ್ಯೆ ಮಾಡಲು ಅಲ್ಲಿನ ಸರ್ಕಾರ ಆದೇಶಿಸಿದೆ. ಈ ಕಠಿಣ ನಿರ್ಧಾರಕ್ಕೆ ತಡೆ ನೀಡುವಂತೆ ಕೋರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ವಿಶ್ವದ ಬೃಹತ್ ವನ್ಯಜೀವಿ ಸಂರಕ್ಷಣಾ ಕೇಂದ್ರಗಳಲ್ಲಿ ಒಂದಾದ 'ವಂತಾರಾ' ( Vantara ) ಸಂಸ್ಥೆಯ ಸಂಸ್ಥಾಪಕ ಅನಂತ್ ಅಂಬಾನಿ ಅವರು ಕೊಲಂಬಿಯಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಾಣಿಗಳನ್ನು ಕೊಲ್ಲುವ ಬದಲಿಗೆ, ವೈಜ್ಞಾನಿಕವಾಗಿ ಮತ್ತು ಮಾನವೀಯ ನೆಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ, ಗುಜರಾತ್‌ನ ಜಾಮ್‌ನಗರದಲ್ಲಿರುವ 'ವಂತಾರಾ' ಕೇಂದ್ರದಲ್ಲಿ ಕಾಯಂ ಆಶ್ರಯ ನೀಡಲು ಸಿದ್ಧವಿರುವುದಾಗಿ ಅವರು ಅಧಿಕೃತ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
ಕೊಲಂಬಿಯಾದಲ್ಲಿ ನೀರಾನೆಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ 80 ನೀರಾನೆಗಳನ್ನು ಸಾಯಿಸಲು ಅಲ್ಲಿನ ಸರ್ಕಾರ ಆದೇಶಿಸಿದೆ. ಇದೀಗ ಆ 80 ನೀರಾನೆಗಳನ್ನು ರಕ್ಷಣೆ ಮಾಡಲು ಅನಂತ್ ಅಂಬಾನಿ ಅವರು ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದು ಸಮಗ್ರ ಯೋಜನೆಯೊಂದನ್ನು ಪ್ರಸ್ತಾಪಿಸಿದ್ದಾರೆ. ಪ್ರಾಣಿ ಕಲ್ಯಾಣಕ್ಕಾಗಿ ಅತ್ಯುನ್ನತ 'ಗ್ಲೋಬಲ್ ಹ್ಯೂಮನ್ ಅವಾರ್ಡ್' ಪಡೆದಿರುವ ಅಂಬಾನಿ, ಈ ಪ್ರಾಣಿಗಳಿಗೆ ಸುರಕ್ಷಿತ ಮತ್ತು ಮಾನವೀಯ ಪರಿಹಾರವನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ. ತಜ್ಞ ಪಶುವೈದ್ಯರ ತಂಡ, ಬಯೋಸೆಕ್ಯೂರಿಟಿ ಶಿಷ್ಟಾಚಾರ ಮತ್ತು ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯ ಮೂಲಕ ಈ ಕಾರ್ಯಾಚರಣೆಯನ್ನು ನಡೆಸಲು ಅವರ 'ವಂತಾರಾ' ಫೌಂಡೇಶನ್ ಸಿದ್ಧವಾಗಿದೆ ಎಂದಿದ್ದಾರೆ.
ಈ ಯೋಜನೆಯಡಿ, ಕೊಲಂಬಿಯಾದಿಂದ ಸ್ಥಳಾಂತರಿಸಲಾಗುವ ಎಲ್ಲಾ 80 ನೀರಾನೆಗಳಿಗೆ ಗುಜರಾತ್‌ನಲ್ಲಿ ಅವುಗಳ ನೈಸರ್ಗಿಕ ಪರಿಸರಕ್ಕೆ ಪೂರಕವಾದ ವಿಶೇಷ ವಾಸಸ್ಥಳವನ್ನು ನಿರ್ಮಿಸಲಾಗುವುದು. ಅಲ್ಲಿ ಈ ಪ್ರಾಣಿಗಳಿಗೆ ಜೀವಿತಾವಧಿಯವರೆಗೆ ಸಂಪೂರ್ಣ ಆರೈಕೆ ಮತ್ತು ಪೋಷಣೆಯನ್ನು ವಂತಾರಾ ತಂಡವು ನೀಡಲಿದೆ. ಈ ಹಿಪೋಗಳು ಪರಿಸ್ಥಿತಿಯ ಸಂತ್ರಸ್ತವಾಗಿದ್ದು, ಅವುಗಳನ್ನು ಕೊಲ್ಲುವ ಬದಲು ಸುರಕ್ಷಿತವಾಗಿ ರಕ್ಷಿಸುವುದು ಈ ಪ್ರಸ್ತಾವನೆಯ ಮುಖ್ಯ ಉದ್ದೇಶವಾಗಿದೆ.

ಸಂರಕ್ಷಣೆ ಮತ್ತು ಸುರಕ್ಷತೆಯ ಸಮನ್ವಯ

"ಕರುಣೆ ಮತ್ತು ಸಾರ್ವಜನಿಕ ಸುರಕ್ಷತೆ ಎಂಬುದು ಪರಸ್ಪರ ವಿರೋಧಿ ಅಂಶಗಳಲ್ಲ" ಎಂದು ಅಂಬಾನಿ ತಿಳಿಸಿದ್ದಾರೆ. ವೈಜ್ಞಾನಿಕ ಯೋಜನೆಗಳ ಮೂಲಕ ನದಿ ತೀರದ ಸಮುದಾಯಗಳನ್ನು ರಕ್ಷಿಸುವುದು ಮಾತ್ರವಲ್ಲದೆ, ಪರಿಸರ ವ್ಯವಸ್ಥೆ ಹಾಗೂ ಪ್ರಾಣಿಗಳನ್ನು ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೊಲಂಬಿಯಾ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಸಂಪೂರ್ಣ ಸಹಕಾರ ನೀಡಲು ವಂತರಾ ಸಿದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಪರ್ಯಾಯ ಮಾರ್ಗದ ಪ್ರಸ್ತಾವನೆ

ಪ್ರಾಣಿಗಳ ಹತ್ಯೆಯ ಅಂತಿಮ ನಿರ್ಧಾರವನ್ನು ಸದ್ಯಕ್ಕೆ ಮುಂದೂಡುವಂತೆ ವಂತರಾ ಸಂಸ್ಥೆಯು ಕೊಲಂಬಿಯಾ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿದೆ. ಪ್ರಾಣಿ ಕಲ್ಯಾಣ ಮತ್ತು ವೈಜ್ಞಾನಿಕ ಕಾರ್ಯಾಚರಣೆಯ ಕುರಿತಾದ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಲು ತಾವು ಸಿದ್ಧರಿರುವುದಾಗಿ ಸಂಸ್ಥೆ ತಿಳಿಸಿದೆ. ಪ್ರತಿ ಜೀವಿಯೂ ಅಮೂಲ್ಯ ಎಂಬ ವಂತರಾದ ಮೂಲ ತತ್ವದ ಅಡಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ.

ಅಂತಾರಾಷ್ಟ್ರೀಯ ಸಹಕಾರ ಮತ್ತು ಅನುಮೋದನೆ

ವನ್ಯಜೀವಿಗಳ ಸಂಕೀರ್ಣ ಸವಾಲುಗಳಿಗೆ ವಿಜ್ಞಾನ ಆಧಾರಿತ ಪರಿಹಾರಗಳನ್ನು ನೀಡುವಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಈ ಪ್ರಸ್ತಾವನೆ ಎತ್ತಿ ತೋರಿಸುತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ಮುನ್ನ ಕೊಲಂಬಿಯಾ ಮತ್ತು ಭಾರತ ಸರ್ಕಾರಗಳ ಅನುಮತಿ ಹಾಗೂ ಸಂಬಂಧಿತ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಮಂಜೂರಾತಿಗಳನ್ನು ಪಡೆದುಕೊಳ್ಳಲಾಗುವುದು ಎಂದು ವಂತಾರಾ ಸಂಸ್ಥೆ ಸ್ಪಷ್ಟಪಡಿಸಿದೆ.

ನೀರಾನೆಗಳ ಹತ್ಯೆ ಏಕೆ?

ಕೊಲಂಬಿಯಾದ ಮ್ಯಾಗ್ಡಲೇನಾ ನದಿ ತೀರದಲ್ಲಿರುವ ಸುಮಾರು 200 ‘ನೀರಾನೆ’ಗಳ ಸಂಖ್ಯೆಯು ಇಂದು ಆ ದೇಶದ ಜೀವವೈವಿಧ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 1980ರ ದಶಕದಲ್ಲಿ ಆಮದು ಮಾಡಿಕೊಳ್ಳಲಾದ ಕೆಲವೇ ನೀರಾನೆಗಳಿಂದ ವೃದ್ಧಿಯಾದ ಈ ಸಂತತಿಯು, ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ವೇಗವಾಗಿ ಬೆಳೆದಿದೆ. ನೈಸರ್ಗಿಕ ಶತ್ರುಗಳಿಲ್ಲದ ಕಾರಣ ಇವುಗಳ ಸಂಖ್ಯೆ ಮಿತಿಮೀರಿದ್ದು, ಸ್ಥಳೀಯ ಪರಿಸರ ವ್ಯವಸ್ಥೆ ಮತ್ತು ಸಮುದಾಯದ ಸುರಕ್ಷತೆಗೆ ಧಕ್ಕೆ ತರುತ್ತಿವೆ. ಈ ಕಾರಣದಿಂದಾಗಿ ಕೊಲಂಬಿಯಾ ಸರ್ಕಾರವು ಇವುಗಳನ್ನು 'ಆಕ್ರಮಣಕಾರಿ ಪ್ರಭೇದ' ಎಂದು ಘೋಷಿಸಿದ್ದು, ಇತ್ತೀಚೆಗೆ 80 ನೀರಾನೆಗಳನ್ನು ಕೊಲ್ಲಲು (Lethal control) ಅನುಮತಿ ನೀಡಿದೆ. ಈ ನಿರ್ಧಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇವುಗಳಿಗೆ ಪರ್ಯಾಯವಾಗಿ ಮಾನವೀಯ ಮತ್ತು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.

ವಂತಾರಾ ಕುರಿತು

ಈ ನಿಟ್ಟಿನಲ್ಲಿ ಗುಜರಾತಿನ ಜಾಮ್‌ನಗರದಲ್ಲಿರುವ 'ವಂತಾರ' (Vantara) ವನ್ಯಜೀವಿ ಕೇಂದ್ರವು ಪ್ರಮುಖ ಭರವಸೆಯಾಗಿ ಕಾಣಿಸಿಕೊಂಡಿದೆ. ವಿಶ್ವದ ಅತಿದೊಡ್ಡ ಮತ್ತು ಸುಧಾರಿತ ಸಂರಕ್ಷಣಾ ಕೇಂದ್ರಗಳಲ್ಲಿ ಒಂದಾದ ವಂತಾರಾ, ಆನೆಗಳು, ಬೃಹತ್ ಬೆಕ್ಕುಗಳು ಮತ್ತು ಸರೀಸೃಪಗಳಂತಹ ಸಂಕಷ್ಟದಲ್ಲಿರುವ ಪ್ರಾಣಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿಯನ್ನು ಒದಗಿಸುತ್ತದೆ. ಅಂತಾರಾಷ್ಟ್ರೀಯ ವನ್ಯಜೀವಿ ಸಂಸ್ಥೆಗಳು ಮತ್ತು ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಈ ಕೇಂದ್ರವು, ಗಡಿಯಾಚೆಗಿನ ಪ್ರಾಣಿಗಳ ರಕ್ಷಣೆ ಮತ್ತು ಸ್ಥಳಾಂತರದಲ್ಲಿ ಅಪಾರ ಅನುಭವ ಹೊಂದಿದೆ. ವೈಜ್ಞಾನಿಕ ಸಂಶೋಧನೆ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿರುವ ವಂತಾರಾ, ಇಂತಹ ಜಾಗತಿಕ ವನ್ಯಜೀವಿ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ vantara.in ಗೆ ಭೇಟಿ ನೀಡಬಹುದಾಗಿದೆ.