Anand Mahindra 
ದೇಶ

144 ವರ್ಷಗಳ ಹಿಂದೆ ಕೇದರನಾಥ ದೇಗುಲ ಹೇಗಿತ್ತು ಗೊತ್ತಾ?; ರೇರ್​ ಫೋಟೋ ಹಂಚಿಕೊಂಡ ಉದ್ಯಮಿ Anand Mahindra

ಪ್ರಮುಖ ಮುಖ್ಯಾಂಶಗಳು

  • 1882ರಲ್ಲಿ ಕ್ಲಿಕ್ಕಿಸಿದ ಕೇದರನಾಥ ದೇಗುಲದ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ
  • ರಸ್ತೆ, ಹೆಲಿಕಾಪ್ಟರ್​ ಇಲ್ಲದ ಆ ಕಾಲದಲ್ಲಿ ಶಿವನ ಪವಿತ್ರ ಸ್ಥಳ ಹೇಗಿತ್ತು ನೋಡಿ ಎಂದು ಪೋಸ್ಟ್
  • ಪ್ರಯಾಣದ ಮೂಲಕ ನಮ್ಮನ್ನು ನಾವು ಕಂಡುಕೊಳ್ಳಬೇಕು ಎಂದು ಟ್ವೀಟ್
Anand Mahindra: ಉದ್ಯಮಿ ಆನಂದ್​ ಮಹೀಂದ್ರಾ ಅವರು ಹೀಗೆನೆ, ಸದಾ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿ ಇರುತ್ತಾರೆ. ಅವರಿಗೆ ತಿಳಿಯುವ ಸಾಕಷ್ಟು ವಿಚಾರದ ಬಗ್ಗೆ ಜನರಿಗೆ ಅಪಡೇಟ್ ಕೊಡುತ್ತಿರುತ್ತಾರೆ. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಏನಾದರೂ ಹೊಸತಾಗಿ, ಕಂಡರೆ ಸಾಕು ಅದರ ಬಗ್ಗೆ ವರ್ಣಿಸಿ ಮಾಹಿತಿ ಹಂಚಿಕೊಳ್ಳುತ್ತಾರೆ. ಸದ್ಯ ಕೇದರನಾಥ ಯಾತ್ರೆ ಇದೇ ಸಮಯದಲ್ಲಿ ಆರಂಭವಾಗಿದ್ದು, ಅವರು ಈ ಪವಿತ್ರ ಸ್ಥಳದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಉತ್ತರಾಖಂಡದ ಗರ್ವಾಲ್ ಹಿಮಾಲಯದಲ್ಲಿ ಎತ್ತರದಲ್ಲಿರುವ ಕೇದರನಾಥ ದೇವಾಲಯ ಭಾರತದ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದು. ಶಿವನಿಗೆ ಅರ್ಪಿತವಾದ ಈ ಸ್ಥಳಕ್ಕೆ ಈಗಾಗಲೇ ಪ್ರಯಾಣಿಸುವುದನ್ನು ಆರಂಭಿಸಲಾಗಿದೆ. ಏಪ್ರಿಲ್​ ಅಂತ್ಯ ಅಂದರೆ ಅಕ್ಷಯ ತೃತೀಯದಿಂದ ಆರಂಭವಾಗಿ ನವೆಂಬರ್​ವರೆಗೂ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕೊಡಲಾಗಿರುತ್ತದೆ. ಏಕೆಂದರೆ ನವೆಂಬರ್​ನಂತರದ ದಿನಗಳು ಚಳಿಗಾಲವಾದ್ದರಿಂದ ದೇಗುಲ ಸಂಪೂರ್ಣ ಹಿಮದಿಂದ ತುಂಬಿ ಹೋಗಿರುತ್ತದೆ.
ಕೇದರನಾಥ ಯಾತ್ರೆ ಆರಂಭವಾಗಿರುವ​​ ಚರ್ಚೆಗಳ ನಡುವೆ ಆನಂದ್ ಮಹೀಂದ್ರಾ ಅವರು ಒಂದು ಕಾಲದಲ್ಲಿ ತೀರ್ಥಯಾತ್ರೆ ಹೇಗಿತ್ತು.. ಎಂಬುದನ್ನು ಪ್ರತಿಬಿಂಬಿಸಲು 144 ವರ್ಷಗಳ ಹಿಂದಿನ ಪಟವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಆನಂದ್​ ಮಹೀಂದ್ರ ಟ್ವೀಟ್​ನಲ್ಲಿ ಏನಿದೆ?

1882ರಲ್ಲಿ ಕ್ಲಿಕ್ಕಿಸಿಕೊಂಡ ಕೇದರನಾಥ ದೇಗುಲದ ಚಿತ್ರ. ಅತ್ಯಂತ ಹಳೆಯ ಛಾಯಾಚಿತ್ರಗಳಲ್ಲಿ ಒಂದಾಗಿದೆ. ನನ್ನ ಕಣ್ಣಿಗೆ ಇತ್ತೀಚೆಗೆ ಬಿತ್ತು, ನೋಡ್ತಿದ್ರೆ ನೋಡ್ತಾನೆ ಇರಬೇಕೆನಿಸಿತು. ನನ್ನ ಕಣ್ಣುಗಳನ್ನು ಅದರಿಂದ ತೆಗೆಯಲಾಗಲಿಲ್ಲ. 144 ವರ್ಷಗಳ ಹಿಂದೆ ಹೇಗಿತ್ತು ನೋಡಿ..ಅಲ್ಲಿ ರಸ್ತೆಯಿಲ್ಲ..ಜನರ ಶಬ್ಧವಿಲ್ಲ..ರೈಲುಮಾರ್ಗಗಳಿಲ್ಲ.. ಹೆಲಿಕಾಪ್ಟರ್‌ಗಳಿಲ್ಲ. ಹಿಮಾಲಯದ ಮಡಿಲಲ್ಲಿ ನೆಲೆಸಿರುವ ಶಿವನ ನೆಲೆಯಷ್ಟೇ ಇತ್ತು.ಆಗ, ಯಾತ್ರೆಗೆ ಸಮಯ, ಸಹನೆ ಮತ್ತು ಶ್ರದ್ಧೆ ಬೇಕಿತ್ತು. ಪ್ರಯಾಣವು ಕೇವಲ ಆಕಸ್ಮಿಕವಾಗಿರಲಿಲ್ಲ; ಪ್ರಯಾಣವೇ ಯಾತ್ರೆಯಾಗಿತ್ತು.
ಇಂದು, ತಲುಪುವುದು ಸುಲಭವಾಗಿದೆ. ಮತ್ತು ಅದು ಒಳ್ಳೆಯ ವಿಷಯ, ಏಕೆಂದರೆ ಇದು ಈ ಅನುಭವವನ್ನು ಇನ್ನೂ ಅನೇಕರಿಗೆ ತೆರೆದಿಡುತ್ತದೆ.ಆದರೆ ಬಹುಶಃ ಇನ್ನೂ ಏನನ್ನಾದರೂ ಕಾಪಾಡಿಕೊಳ್ಳಬೇಕಿದೆ ಅಲ್ಲವೇ? ಅದುವೆ ಸಾವಾಧಾನವಾಗಿ ಸಾಗಿ ಪ್ರಯಾಣದ ಪ್ರತಿ ಕ್ಷಣವನ್ನೂ ಸವಿಯುವ ಸಾಮರ್ಥ್ಯ. ಏಕೆಂದರೆ ಪ್ರಯಾಣಗಳು ಕೇವಲ ಗುರಿ ತಲುಪುವುದಲ್ಲ, ಆ ಹಾದಿಯಲ್ಲಿ ನಾವು ಎಂತಹ ವ್ಯಕ್ತಿಯಾಗಿ ಬದಲಾಗುತ್ತೇವೆ ಎಂಬುದೇ ಮುಖ್ಯ ಎಂದು ಬರೆದುಕೊಂಡಿದ್ದಾರೆ.

1.1 ಲಕ್ಷಕ್ಕೂ ಹೆಚ್ಚು ಜನ ಭೇಟಿ

ಕೇದರನಾಥ ಯಾತ್ರೆ ಆರಂಭವಾದ ಮೊದಲ ಮೂರು ದಿನದಲ್ಲಿ 1.1 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಶೀವನ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ. ಯಾತ್ರಿಕರ ಸುಗಮ ಸಂಚಾರಕ್ಕೆ ಉತ್ತರಾಖಂಡದ ಸರ್ಕಾರ ಸುಧಾರಿತ ಮೂಲಸೌಕರ್ಯ ಒದಗಿಸಿದೆ ಎನ್ನಲಾಗಿದೆ, (ಏಜೆನ್ಸೀಸ್​).