ಎಐಗಿಂತ ಚುರುಕು ಈ 16 ವರ್ಷದ ಬಾಲಕ! ಕಿರಿಯ ವಯಸ್ಸಿಗೆ ಗಿನ್ನಿಸ್​ ವಿಶ್ವ ದಾಖಲೆ, ಚಿನ್ನದ ಪದಕಗಳ ಸಾಧನೆ | Aryan Shukla  
ದೇಶ

ಎಐಗಿಂತ ಚುರುಕು ಈ ಆರ್ಯನ್ ಶುಕ್ಲಾ! 16ನೇ ವಯಸ್ಸಿಗೆ ಗಿನ್ನಿಸ್​ ವಿಶ್ವ ದಾಖಲೆ, ಚಿನ್ನದ ಪದಕಗಳ ಸಾಧನೆ | Aryan Shukla

Aryan Shukla: 5ಜಿ ಕಾಲದಲ್ಲಿರುವ ಜನರನ್ನು ಅದಾಗಲೇ 8ಜಿ ವೇಗಕ್ಕೆ ಕರೆದುಕೊಂಡು ಹೋಗಿರುವ ಕೃತಕ ಬುದ್ಧಿಮತ್ತೆ (ಎಐ) ಎಷ್ಟೇ ವೇಗವಾಗಿ ಲೆಕ್ಕಾಚಾರಗಳನ್ನು ಮಾಡಿದರೂ, 16 ವರ್ಷ ವಯಸ್ಸಿನ ಆರ್ಯನ್ ಶುಕ್ಲಾ ತನ್ನ ಮನಸ್ಸಿನಲ್ಲೇ ಅದಕ್ಕಿಂತಲೂ ವೇಗವಾಗಿ ಉತ್ತರಿಸುವುದರ ಮುಂದೆ ಏನೇನೂ ಅಲ್ಲ. ಈ ಅದ್ಭುತ, ಅಪರೂಪದ ಪ್ರತಿಭೆಯನ್ನು ಕಂಡು ಕೇವಲ ಬಾಲಕನ ಕುಟುಂಬಸ್ಥರು ಮಾತ್ರವಲ್ಲ, ಇಡೀ ಭಾರತೀಯರೇ ಅಕ್ಷರಶಃ ಬೆರಗಾಗಿದ್ದಾರೆ ಮತ್ತು ಹೆಮ್ಮೆ ಪಡುತ್ತಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನ ಈ ಬಾಲಕನ ಪ್ರತಿಭೆ ಇಡೀ ಜಗತ್ತನ್ನೇ ಅಚ್ಚರಿಗೊಳಿಸುತ್ತಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ, ತಮ್ಮ ಅಸಾಧಾರಣ ಜ್ಞಾಪಕ ಶಕ್ತಿ ಮತ್ತು ಲೆಕ್ಕಾಚಾರದ ವೇಗದಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ ಒಂಬತ್ತು ಗಿನ್ನಿಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೇವಲ 12ನೇ ವಯಸ್ಸಿನಲ್ಲಿ, 'ಮೆಂಟಲ್ ಕ್ಯಾಲ್ಕುಲೇಷನ್ ವರ್ಲ್ಡ್ ಕಪ್' (ಮಾನಸಿಕ ಲೆಕ್ಕಾಚಾರದ ವಿಶ್ವಕಪ್) ಗೆದ್ದು ವಿಶ್ವ ಚಾಂಪಿಯನ್ ಆಗಿದ್ದಾರೆ.

'ಹ್ಯೂಮನ್ ಕ್ಯಾಲ್ಕುಲೇಟರ್'

ಈಗ ಎಲ್ಲರೂ ಈತನನ್ನು ಭಾರತದ ಹೆಮ್ಮೆಯ 'ಹ್ಯೂಮನ್ ಕ್ಯಾಲ್ಕುಲೇಟರ್' ಎಂಬ ಬಿರುದಿನಿಂದಲೇ ಗುರುತಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚಿ ಮಾತನಾಡುತ್ತಿದ್ದಾರೆ. ಬಾಲಕನ ಈ ಅದ್ಭುತ ಸಾಧನೆಗಳ ಹಿಂದೆ ಕೇವಲ ಲೆಕ್ಕಾಚಾರದ ಮೇಲಿನ ಆಸಕ್ತಿ ಮಾತ್ರವಲ್ಲ, ಏಳು ವರ್ಷಗಳ ಕಠಿಣ ಪರಿಶ್ರಮ ಮತ್ತು ಅವರ ಮೇಲೆ ಯಾವುದೇ ಒತ್ತಡ ಹೇರದೆ, ಸತತವಾಗಿ ಬೆನ್ನಿಗೆ ನಿಂತಿರುವ ಪೋಷಕರ ಪ್ರೋತ್ಸಾಹವಿದೆ.

ಆರ್ಯನ್ ಅವರ ಈ ಪಯಣವು ಆರು ವರ್ಷ ವಯಸ್ಸಿನಲ್ಲಿ ಒಂದು ಸಣ್ಣ ಕುತೂಹಲದೊಂದಿಗೆ ಪ್ರಾರಂಭವಾಯಿತು ಎನ್ನಲಾಗಿದೆ. ಸಂಖ್ಯೆಗಳು ಮತ್ತು ಲೆಕ್ಕಾಚಾರಗಳಲ್ಲಿ ವಿಪರೀತ ಆಸಕ್ತಿ ಹೊಂದಿದ್ದ ಆರ್ಯನ್ ಅವರ ವಿಶಿಷ್ಟ ಪ್ರತಿಭೆಯನ್ನು ಅವರ ಪೋಷಕರು ಮೊದಲು ಹಾಗೂ ಬಹುಬೇಗನೇ ಗುರುತಿಸಿದರು. ಸಾಮಾನ್ಯ ಮಕ್ಕಳಿಗಿಂತ ಆರ್ಯನ್ ಭಿನ್ನವಾಗಿದ್ದಾರೆ ಎಂಬುದನ್ನು ಅರಿತುಕೊಂಡ ಅವರ ತಂದೆ ನಿತಿನ್ ಶುಕ್ಲಾ, ತಕ್ಷಣವೇ ಮಗನನ್ನು ವಿವಿಧ ಸ್ಪರ್ಧೆಗಳಿಗೆ ಕರೆದೊಯ್ಯಲು ಪ್ರಾರಂಭಿಸಿದರು.

7 ಚಿನ್ನದ ಪದಕ

ಅಂತೆಯೇ, 2018ರಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ 'ಮೆಮೊರಿಯಾಡ್ ಟರ್ಕಿ ಓನ್​ ಚಾಂಪಿಯನ್‌ಶಿಪ್'ನಲ್ಲಿ, ಎಂಟು ವರ್ಷದ ಆರ್ಯನ್ ಭಾರತವನ್ನು ಪ್ರತಿನಿಧಿಸಿ 7 ಚಿನ್ನದ ಪದಕಗಳು ಸೇರಿ ಒಟ್ಟು 10 ಪದಕಗಳನ್ನು ಬಾಚಿಕೊಂಡರು. ಮತ್ತು ಮಕ್ಕಳ ವಿಭಾಗದಲ್ಲಿ ಎರಡು ವಿಶ್ವ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಈ ಅಂತಾರಾಷ್ಟ್ರೀಯ ಪಯಣದ ಭಾಗವಾಗಿ, 2022ರ ಜುಲೈನಲ್ಲಿ ಜರ್ಮನಿಯ ಪ್ಯಾಡರ್‌ಬೋರ್ನ್‌ನಲ್ಲಿ ನಡೆದ 'ಮೆಂಟಲ್ ಕ್ಯಾಲ್ಕುಲೇಷನ್ ವರ್ಲ್ಡ್ ಕಪ್'ನಲ್ಲಿ ಆರ್ಯನ್ ಹೊಸ ಸಂಚಲನ ಮೂಡಿಸಿದರು.

ಜಾಗತಿಕವಾಗಿ 40 ಪ್ರತಿಭಾವಂತರೊಂದಿಗೆ ಸ್ಪರ್ಧಿಸಿದ ಅವರು, ಕೇವಲ 12ನೇ ವಯಸ್ಸಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಹಿಂದೆ ಇಂತಹ ಸ್ಪರ್ಧೆಗಳಲ್ಲಿ ಜಪಾನ್ ತಂಡದವರೇ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರು. ಆರ್ಯನ್ ಆ ಪ್ರಾಬಲ್ಯವನ್ನು ಮುರಿಯುವ ಮೂಲಕ ಈ ಸಾಧನೆಗೈದಿದ್ದಾರೆ. ನಂತರ, 2024ರ ಸೆಪ್ಟೆಂಬರ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ, ಅವರು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದರ ಜತೆಗೆ, 900 ಅಂಕಗಳಿಗೆ 819.84 ಅಂಕಗಳನ್ನು ಗಳಿಸಿದರು. ಅಲ್ಲದೆ, ಒಟ್ಟಾರೆ ಶ್ರೇಯಾಂಕ, ಬಹುಮುಖ ಪ್ರತಿಭೆ, ಸಂಕಲನ, ಗುಣಾಕಾರ, ವರ್ಗಮೂಲಗಳು ಮತ್ತು ಕ್ಯಾಲೆಂಡರ್ ದಿನಾಂಕಗಳು - ಹೀಗೆ ಎಲ್ಲಾ ಆರು ವಿಭಾಗಗಳಲ್ಲಿಯೂ ಟ್ರೋಫಿಗಳನ್ನು ಗೆದ್ದರು. ಇದಲ್ಲದೆ, ಅವರು ವಿವಿಧ ವಿಭಾಗಗಳಲ್ಲಿ ಐದು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.

25.19 ಸೆಕೆಂಡುಗಳಲ್ಲಿ...

2024ರ ಫೆಬ್ರವರಿಯಲ್ಲಿ, ಇಟಾಲಿಯನ್ ದೂರದರ್ಶನ ಕಾರ್ಯಕ್ರಮವಾದ 'ಲೋ ಶೋ ಡಿ ರೆಕಾರ್ಡ್'ನಲ್ಲಿ ಅವರು ತಮ್ಮ ಗಿನ್ನಿಸ್ ವಿಶ್ವ ದಾಖಲೆಗಳ ಸರಣಿಯನ್ನು ಪ್ರಾರಂಭಿಸಿದರು. ಅವರು ಕೇವಲ 25.19 ಸೆಕೆಂಡುಗಳಲ್ಲಿ ಐದು ಅಂಕಿಗಳ 50 ಸಂಖ್ಯೆಗಳನ್ನು ಮಾನಸಿಕವಾಗಿ ಕೂಡಿಸುವ ಮೂಲಕ ತಮ್ಮ ಮೊದಲ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಅದೇ ವರ್ಷದ ಡಿಸೆಂಬರ್ 4ರಂದು, ದುಬೈನಲ್ಲಿರುವ ವಿಶ್ವ ದಾಖಲೆಗಳ ಕಚೇರಿಯಲ್ಲಿ ಅವರು ಒಂದೇ ದಿನದಲ್ಲಿ ಆರು ದಾಖಲೆಗಳನ್ನು ಮುರಿದರು.

ಐದು ಅಂಕಿಗಳ 50 ಸಂಖ್ಯೆಗಳನ್ನು 18.71 ಸೆಕೆಂಡುಗಳಲ್ಲಿ, ನಾಲ್ಕು ಅಂಕಿಗಳ 100 ಸಂಖ್ಯೆಗಳನ್ನು 30.9 ಸೆಕೆಂಡುಗಳಲ್ಲಿ ಮತ್ತು ನಾಲ್ಕು ಅಂಕಿಗಳ 200 ಸಂಖ್ಯೆಗಳನ್ನು 1 ನಿಮಿಷ 9.68 ಸೆಕೆಂಡುಗಳಲ್ಲಿ ಕೂಡಿಸುವ ಮೂಲಕ ಅವರು ಎಲ್ಲರನ್ನೂ ಬೆರಗುಗೊಳಿಸಿದರು. ತಮ್ಮ ದೊಡ್ಡ ಸಂಖ್ಯೆಗಳ ಗುಣಾಕಾರ ಮತ್ತು ಭಾಗಾಕಾರದಲ್ಲೂ ದಾಖಲೆಗಳನ್ನು ಬರೆದರು. ನಂತರ, ಏಪ್ರಿಲ್ 2026ರಲ್ಲಿ ಇಟಲಿಗೆ ಭೇಟಿ ನೀಡಿದಾಗ, ಅವರು ಎಂಟು ಅಂಕಿಗಳ ಹತ್ತು ಸಂಖ್ಯೆಗಳ ವರ್ಗಮೂಲಗಳನ್ನು 71.22 ಸೆಕೆಂಡುಗಳಲ್ಲಿ ಕಂಡುಹಿಡಿಯುವ ಮೂಲಕ ತಮ್ಮ ಖಾತೆಗೆ ಇನ್ನೂ ಎರಡು ದಾಖಲೆಗಳನ್ನು ಸೇರಿಸಿಕೊಂಡರು.

ಶೇ.97ರಷ್ಟು ಅಂಕ

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ, ಆರ್ಯನ್ ಅವರ ಪೋಷಕರು ಎಂದಿಗೂ ಅವರ ಮೇಲೆ ಯಾವುದೇ ಒತ್ತಡ ಹೇರಲಿಲ್ಲ. ಫಲಿತಾಂಶಕ್ಕಿಂತ ಕಠಿಣ ಪರಿಶ್ರಮವೇ ಹೆಚ್ಚು ಮುಖ್ಯ ಎಂದು ನಂಬಿದ್ದರು. ಪ್ರಸ್ತುತ ನಾಸಿಕ್‌ನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ 11ನೇ ತರಗತಿಯಲ್ಲಿ ಓದುತ್ತಿರುವ ಆರ್ಯನ್, 10ನೇ ತರಗತಿಯಲ್ಲಿ ಶೇ.97ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಅವರು ಗಣಿತ, ಭೌತಶಾಸ್ತ್ರ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಗೊಂಡರೂ, ಮಾನವನ ಮಿದುಳಿನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಮತ್ತು ತಂತ್ರಜ್ಞಾನ ವಿಫಲವಾದಾಗ ಮಾನವ ಕೌಶಲ್ಯಗಳೇ ಅತ್ಯಂತ ದೊಡ್ಡ ಆಧಾರವಾಗುತ್ತವೆ ಎನ್ನುತ್ತಾರೆ ಬಾಲಕನ ತಂದೆ ನಿತಿನ್.

ಕೇವಲ ಗೆಲುವುಗಳಿಗೆ ಸೀಮಿತವಾಗದೆ, ಆರ್ಯನ್ ಈಗ ಇತರ ಮಕ್ಕಳಿಗೆ 'ಮೆಂಟಲ್​ ಮ್ಯಾಥ್ಸ್​' ಕಲಿಸುವ ಶಿಕ್ಷಕರಾಗುತ್ತಿದ್ದಾರೆ. ಅವರು 'ಗ್ಲೋಬಲ್ ಮೆಂಟಲ್ ಕ್ಯಾಲ್ಕ್ಯುಲೇಟರ್ಸ್ ಅಸೋಸಿಯೇಷನ್' (GMCA)ನ ಸ್ಥಾಪಕ ಮಂಡಳಿ ಸದಸ್ಯರಾಗಿದ್ದು, ಈ ಕಲಿಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸುತ್ತಿದ್ದಾರೆ. ಆನ್‌ಲೈನ್ ಕ್ಲಾಸ್​ಗಳ ಮೂಲಕ ಮಕ್ಕಳಲ್ಲಿರುವ ಸಂಖ್ಯೆಗಳ ಬಗೆಗಿನ ಭಯವನ್ನು ಹೋಗಲಾಡಿಸಲು ದಾಪುಗಾಲು ಇಟ್ಟಿದ್ದಾರೆ. ನವೆಂಬರ್ 2025ರಲ್ಲಿ, ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ 'ಮಿಸ್ಕ್ ಗ್ಲೋಬಲ್ ಫೋರಮ್'ನಲ್ಲಿ ಅವರು ಪ್ಯಾನೆಲಿಸ್ಟ್ ಆಗಿ ಭಾಗವಹಿಸಿ, ಶಿಕ್ಷಣದಲ್ಲಿ ಮಾನಸಿಕ ಲೆಕ್ಕಾಚಾರದ ಮಹತ್ವದ ಕುರಿತು ಮಾತನಾಡಿದರು.

ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ, ಆರ್ಯನ್ ಎಲ್ಲಾ ಪೋಷಕರಿಗೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರೆ. ಹೆತ್ತವರು ತಮ್ಮ ಈಡೇರದ ಕನಸುಗಳನ್ನು ಮಕ್ಕಳಿಂದ ಪೂರೈಸಿಕೊಳ್ಳಲು ಒತ್ತಡ ಹೇರಬಾರದು. ಬದಲಾಗಿ, ಮಕ್ಕಳ ಆಸಕ್ತಿಗಳನ್ನು ಗುರುತಿಸಿ ಅವರಿಗೆ ಸಾಕಷ್ಟು ಸಮಯವನ್ನು ನೀಡಬೇಕು ಎಂದು ಹೇಳುತ್ತಾರೆ. ಬಾಲ್ಯದಲ್ಲೇ ಲೆಕ್ಕಾಚಾರಗಳೆಂದರೆ ತುಂಬಾ ಇಷ್ಟವಿದ್ದಿದ್ದರಿಂದ, ಸತತ ಏಳು ವರ್ಷಗಳ ಕಾಲ ಅದರಲ್ಲಿಯೇ ತೊಡಗಿಸಿಕೊಂಡ ಕಾರಣವೇ ಇಂದು ಆ ಆಸಕ್ತಿ ಆರ್ಯನ್​ ಅವರನ್ನು ಇಂದು ವಿಶ್ವಪ್ರಸಿದ್ಧಿ ಮಾಡಿದೆ. ತಂತ್ರಜ್ಞಾನವು ಎಷ್ಟೇ ವೇಗವಾಗಿ ಮುನ್ನಡೆಯುತ್ತಿದ್ದರೂ, ಕುತೂಹಲ ಮತ್ತು ಶಿಸ್ತುಬದ್ಧ ಅಭ್ಯಾಸವಿದ್ದರೆ ಒಬ್ಬ ವ್ಯಕ್ತಿಯು ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು ಎಂಬುದಕ್ಕೆ ಆರ್ಯನ್‌ನ ಪಯಣವೇ ಒಂದು ಜ್ವಲಂತ ಸಾಕ್ಷಿ ಎಂದು ಹೇಳಬಹುದು,(ಏಜೆನ್ಸೀಸ್).