ತಮಿಳುನಾಡಿನ ತಿರುವಳ್ಳೂರಿನ ಸೀಫುಡ್ ಕಂಪನಿಯಲ್ಲಿ ಅಮೋನಿಯಾ ಅನಿಲ ಸೋರಿಕೆ!
- ತಮಿಳುನಾಡಿನ ತಿರುವಳ್ಳೂರಿನ ಸೀಫುಡ್ ಕಂಪನಿಯಲ್ಲಿ ಅಮೋನಿಯಾ ಅನಿಲ ಸೋರಿಕೆ!
- ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, 46 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ
- ಅವಘಡದ ಬಗ್ಗೆ 24 ಗಂಟೆಯೊಳಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಿಎಂ ವಿಜಯ್ ಖಡಕ್ ಆದೇಶ
ಚೆನ್ನೈ: ಸಮುದ್ರ ಜೀವಿಗಳ ರಫ್ತು ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ ಹಿನ್ನಲೆ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ತಮಿಳುನಾಡಿನ (Ammonia Gas Leak in Tamil Nadu) ತಿರುವಳ್ಳೂರಿನಲ್ಲಿ ವರದಿಯಾಗಿದೆ.
ಇಂದು (ಜೂನ್.21) ಮಧ್ಯಾಹ್ನ ಸೇಂಟ್ ಪೀಟರ್ಸ್ ಮತ್ತು ಪೌಲ್ ಸಿ ಫುಡ್ ಎಕ್ಸಪೋರ್ಟ್ ಎಂಬ ಕಂಪನಿಯಲ್ಲಿ ಈ ಘಟನೆ ಸಂಭವಿಸಿದ್ದು, ಇಬ್ಬರು ಮೃತ ಪಟ್ಟಿದ್ದರೆ ಸುಮಾರು 46 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸಿಎಂ ವಿಜಯ್ನಿಂದ ಕಠಿಣ ಕ್ರಮಕ್ಕೆ ಆಗ್ರಹ!
ಈ ದುರ್ಘಟನೆ ಬಗ್ಗೆ ಮಾಹಿತಿ ದೊರೆತ ತಕ್ಷಣ ರಾಜ್ಯದ ನೂತನ ಸಿಎಂ ಜೋಸೆಫ್ ವಿಜಯ್, ಕಂಪನಿ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆಂದು ಐಟಿ ಸಚಿವ ಆರ್. ಕುಮಾರ್ ತಿಳಿಸಿದ್ದಾರೆ.
ಈ ಅವಘಡಕ್ಕೆ ತುತ್ತಾದ ಹೆಚ್ಚಿನ ಕಾರ್ಮಿಕರು ಉತ್ತರ ಭಾರತದವರೆಂದು ಗುರುತಿಸಲಾಗಿದ್ದು, ಅಮೋನಿಯಾ ಸೋರಿಕೆಯಿಂದ ವಾಂತಿ, ಉಸಿರಾಟದ ಸಮಸ್ಯೆ ಎದುರಾಗಿದೆ. ನಂತರ ಅವರನ್ನು ಚೆನ್ನೈನಲ್ಲಿ ಉನ್ನತ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಎನ್ಡಿಆರ್ಎಫ್ ನಿಂದ ಮುಂದುವರೆದ ರಕ್ಷಣಾ ಕಾರ್ಯ!
ನಂತರ ಸ್ಥಳಕ್ಕೆ ಆಗಮಿಸಿದ ಎನ್ಡಿಆರ್ಎಫ್ ಪಡೆಯ ಸುಮಾರು 30 ಜನ ಕಮಾಂಡೋಗಳು, ಕಂಪನಿಗೊಳಗೆ ಹೋಗಿ ಸೋರಿಕೆ ಆಗುತ್ತಿದ್ದ ಅಮೋನಿಯಾ ಅನಿಲವನ್ನು ಸರಿ ಪಡಿಸಿದ್ದಾರೆ. ಈ ಅನಿಲವು ಸೀಗಡಿ (shrimp) ಯನ್ನು ಸಂಸ್ಕೃರಿಸಲು ಇಟ್ಟಿದ್ದ ಘಟಕದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಈಗಾಗಲೇ ಸ್ಥಳದಲ್ಲಿ ತಿರುವಳ್ಳೂರು ಜಿಲ್ಲೆಯ ಉಸ್ತುವಾರಿ ಸಚಿವ ಆರ್. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಾಯಿ ಪ್ರಣೀತ್ ಮೊದಲಾದವರು ಹಾಜರಿದ್ದಾರೆ. ಈ ಘಟನೆ ಕುರಿತು 24 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ಸಿಎಂ ವಿಜಯ್ ಖಡಕ್ ಆದೇಶ ನೀಡಿದ್ದಾರೆ, (ಏಜನ್ಸೀಸ್).