ಈರೋಡ್: ದ್ರಾವಿಡ ವಿರೋಧಿ ಪ್ರಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೌನವನ್ನು ಟೀಕಿಸಿದ ಡಿಸಿಎಂ ಉದಯನಿಧಿ ಸ್ಟಾಲಿನ್(Udhayanidhi Stalin), ಪಳನಿಸ್ವಾಮಿ ಅವರು ಎಂಜಿಆರ್ ಮತ್ತು ಅಣ್ಣಾದೊರೈ ಅವರನ್ನು ಮರೆತಿದ್ದಾರೆ. ಈಗ ಅವರ ಮನಸ್ಸಿನಲ್ಲಿರುವ ಏಕೈಕ ವ್ಯಕ್ತಿ ಅಮಿತ್ ಶಾ. ಶಾ ಅವರ ಮನೆ ಪ್ರಸ್ತುತ ಎಐಎಡಿಎಂಕೆ ಮತ್ತು ಇತರ ಕೆಲವು ಪಕ್ಷಗಳ ಪ್ರಧಾನ ಕಚೇರಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ(ನ. 30) ಈರೋಡ್‌ನ ಎಲುಮತ್ತೂರಿನಲ್ಲಿ ನಡೆದ ಆರನೇ ಪುಥಿಯ ದ್ರಾವಿಡ ಕಳಗಂ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, ಪಶ್ಚಿಮ ತಮಿಳುನಾಡಿನಲ್ಲಿ ಡಿಎಂಕೆ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ಇತರೆ ಪಕ್ಷಗಳ ಯಾವುದೇ ತಂತ್ರಗಳು ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಅನೇಕ ಜನರಿಗೆ 'ದ್ರಾವಿಡ' ಎಂಬ ಹೆಸರು ಇಷ್ಟವಾಗುವುದಿಲ್ಲ. ಈ ಹೆಸರನ್ನು ಕೇಳಿದ ಕೂಡಲೇ ದೆಹಲಿಯಿಂದ ತೀವ್ರ ವಿರೋಧ ಮತ್ತು ಬೆದರಿಕೆಗಳು ಬರುತ್ತವೆ. ಸ್ಥಳೀಯ ಬಲಪಂಥೀಯರು ಸಹ ವಿವಿಧ ಅಪಪ್ರಚಾರಗಳನ್ನು ಹರಡುತ್ತಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯಪಾಲ ಆರ್.ಎನ್. ರವಿ 'ದ್ರಾವಿಡ' ಎಂಬ ಪದವು ಒಂದು ಕಾಲ್ಪನಿಕ ಎಂದು ಹೇಳದ್ದಾರೆ. ಆದರೆ ನಮ್ಮ ನಾಯಕ ಕರುಣಾನಿಧಿ ಈಗಾಗಲೇ ಇವೆಲ್ಲಕ್ಕೂ ಉತ್ತರಿಸಿದ್ದಾರೆ. ನಾವು ಭಾಷೆಯಿಂದ ತಮಿಳರು, ಜನಾಂಗದಿಂದ ದ್ರಾವಿಡರು ಮತ್ತು ರಾಷ್ಟ್ರೀಯತೆಯಿಂದ ಭಾರತೀಯರು ಎಂದು ಉದಯನಿಧಿ ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).