ನವದೆಹಲಿ: ಮಹಿಳಾ ಮೀಸಲಾತಿಯ ಕುರಿತು ಕಾಂಗ್ರೆಸ್ನ ನಿಲುವನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಶುಕ್ರವಾರ(ನ. 27) ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರಿಗೆ ಮರೆವು ಖಾಯಿಲೆಯಿರಬಹುದು ಎಂದು ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಪಿ.ಚಿದಂಬರಂ, ಮಹಿಳಾ ಮೀಸಲಾತಿ ಕಾನೂನನ್ನು ಅಂಗೀಕರಿಸಲು ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿತ್ತು ಮತ್ತು ಈಗ ಅದನ್ನು ತಕ್ಷಣವೇ ಜಾರಿಗೆ ತರುವಂತೆ ಒತ್ತಾಯಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರಿಗೆ ಬಹುಶಃ ಮರೆವಿನ ಕಾಯಿಲೆ ಇರಬೇಕು ಅಥವಾ ಅವರು ಸತ್ಯವನ್ನು ಮರೆಮಾಚುತ್ತಿರಬೇಕು. ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು (1/3) ಸ್ಥಾನಗಳನ್ನು ಮೀಸಲಿಡುವ ಭರವಸೆಯ ಅನುಷ್ಠಾನವನ್ನು ಕಾಂಗ್ರೆಸ್ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ.
ಸಂವಿಧಾನದ (106ನೇ) ತಿದ್ದುಪಡಿ ಕಾಯಿದೆ, 2023 ಈಗಾಗಲೇ ಜಾರಿಯಾಗಿದೆ. ಈ ಮಸೂದೆಯು 2023ರ ಸೆಪ್ಟೆಂಬರ್ 20 ಮತ್ತು 21ರಂದು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿತ್ತು. ಈ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿತ್ತು ಮತ್ತು ಈ ಕಾಯಿದೆಯನ್ನು ತಕ್ಷಣವೇ ಜಾರಿಗೆ ತರುವಂತೆ ಆಗ್ರಹಿಸುತ್ತಾ ಬಂದಿದೆ. ಹೀಗಿದ್ದರೂ, ಬಿಜೆಪಿ ಸರ್ಕಾರವು ಈ ಕಾಯಿದೆಯನ್ನು ಯಾಕೆ ಜಾರಿಗೆ ತರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ಈ ಕಾಯಿದೆಯು 'ಅನುಚ್ಛೇದ 334ಎ'ಅನ್ನು ಸೇರಿಸಿದ್ದು, ಮಹಿಳಾ ಮೀಸಲಾತಿಯ ಜಾರಿಯನ್ನು ಮುಂದಿನ ಜನಗಣತಿಯ ನಂತರ ನಡೆಯಲಿರುವ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೊಂದಿಗೆ ಜೋಡಿಸಿದೆ. ಸಂಸತ್ತಿನಲ್ಲಿ ನಡೆದ ಚರ್ಚೆ ವೇಳೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಈ ನಿಬಂಧನೆಯನ್ನು ವಿರೋಧಿಸಿದ್ದವು ಎಂದು ಹೇಳಿದ್ದಾರೆ.
ಇದು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಎಂಬ ಎರಡು ಅನಗತ್ಯ ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದಿರುವ ಅವರು, ಬಿಜೆಪಿಯು ಈ ನಿಬಂಧನೆಯನ್ನು ಸೇರಿಸಲು ಪಟ್ಟು ಹಿಡಿದಿತ್ತು. ಅನುಚ್ಛೇದ 334ಎ ಅನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಲು ಸಾಧ್ಯವಿದೆ. 334A ವಿಧಿಯನ್ನು ರದ್ದುಗೊಳಿಸಿದರೆ, ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬಹುದು ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ(ನ. 26) ನಡೆದ ಸಂವಿಧಾನ ಗೌರವ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, ಸಂವಿಧಾನಾತ್ಮಕ ಸಂಸ್ಥೆಗಳು ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ಪ್ರಶ್ನಿಸುತ್ತಲೇ, ರಾಜಕೀಯ ಪ್ರದರ್ಶನಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸಲು ಬಿಜೆಪಿ ಬದ್ಧವಾಗಿದೆ. ರಾಹುಲ್ ಗಾಂಧಿಯವರಿಂದ ಈ ಮಸೂದೆ ಅನುಷ್ಠಾನವನ್ನು ತಡೆಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).