Amit Shah | ಗೃಹ ಸಚಿವ ಅಮಿತ್ ಷಾ
ಕೊಲ್ಕತ್ತಾ: 15 ವರ್ಷಗಳಿಂದ ಟಿಎಂಸಿ ನಾಯಕರು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿರುವ ಪ್ರತಿಯೊಂದು ರೂಪಾಯಿಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವಾಪಸ್ ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಗುಡುಗಿದ್ದಾರೆ.
ಉತ್ತರ ಬಂಗಾಳದಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಿದ ಸಚಿವ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮತ್ತು ಕೇಂದ್ರದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದರೂ ಅವರ ಮೇಲೆ ಒಂದು ಪೈಸೆಯ ಭ್ರಷ್ಟಾಚಾರದ ಕಲೆ ಇಲ್ಲ ಎಂದರು.
ಟಿಎಂಸಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಷಾ, ಶಿಕ್ಷಕರ ನೇಮಕಾತಿ ಹಗರಣದಲ್ಲಿ 300 ಕೋಟಿ ರೂ. ಹಾಗೂ ಉತ್ತರ ಬಂಗಾಳದ ಪ್ರವಾಹ ಪರಿಹಾರ ನಿಧಿಯಿಂದ 100 ಕೋಟಿ ರೂ.ಗಳನ್ನು ಟಿಎಂಸಿ ನಾಯಕರು ನುಂಗಿದ್ದಾರೆ ಎಂದು ದೂರಿದರು. ಈ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಿ ಬಡವರಿಗೆ ತಲುಪಿಸುವುದಾಗಿ ಅವರು ಭರವಸೆ ನೀಡಿದರು.
ನಾಲ್ಕನೇ ಟಿ ಬಿಜೆಪಿ ಕಾರ್ಯಕರ್ತರ ಕಣ್ಣೀರು
ಇದೇ ವೇಳೆ ನಾಲ್ಕನೇ ಟಿ (4th T) ಎಂಬ ಹೊಸ ವ್ಯಾಖ್ಯಾನ ನೀಡಿದ ಅಮಿತ್ ಷಾ, ಉತ್ತರ ಬಂಗಾಳವು ಚಹಾ (Tea), ಮರ (Timber) ಮತ್ತು ಪ್ರವಾಸೋದ್ಯಮಕ್ಕೆ (Tourism) ಹೆಸರುವಾಸಿಯಾಗಿದ್ದರೆ, ಮಮತಾ ಬ್ಯಾನರ್ಜಿ ಇದಕ್ಕೆ ನಾಲ್ಕನೇ ಅಂಶವಾಗಿ ಬಿಜೆಪಿ ಕಾರ್ಯಕರ್ತರ ಕಣ್ಣೀರು (Tears) ಮತ್ತು ಹಿಂಸಾಚಾರವನ್ನು ಸೇರಿಸಿದ್ದಾರೆ ಎಂದು ಟೀಕಿಸಿದರು. ತಮ್ಮ ಪಕ್ಷದ ಕಾರ್ಯಕರ್ತರ ಮೇಲಿನ ದಾಳಿಯನ್ನು ಖಂಡಿಸಿದ ಷಾ, ಮೇ 5ರ ಬಳಿಕ ಹಿಂಸಾಚಾರದಲ್ಲಿ ತೊಡಗಿರುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಳನುಸುಳುವಿಕೆ ಬಗ್ಗೆ ಹೇಳಿದ್ದೇನು..?
ಉತ್ತರ ಬಂಗಾಳದ ಪ್ರಮುಖ ಸಮಸ್ಯೆಯಾದ ಒಳನುಸುಳುವಿಕೆಯ ಬಗ್ಗೆಯೂ ಮಾತನಾಡಿದ ಅಮಿತ್ ಷಾ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಮಾಡಿದಂತೆ ಬಂಗಾಳದಲ್ಲೂ ಒಳನುಸುಳುವವರನ್ನು ಗುರುತಿಸಿ ಹೊರಹಾಕುವುವ ಶಪಥ ಮಾಡಿದರು. ಬಿಹಾರದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡಿರುವುದು ಮತ್ತು ಒಡಿಶಾದಲ್ಲಿ ಬಿಜೆಪಿ ಸರ್ಕಾರವಿರುವುದನ್ನು ಉಲ್ಲೇಖಿಸಿದ ಅವರು, ಬಂಗಾಳದ ಗೆಲುವಿನೊಂದಿಗೆ ಆಂಗ್-ಬ್ಯಾಂಗ್-ಕಲಿಂಗ್ ರಾಜಕೀಯ ನಕ್ಷೆ ಪೂರ್ಣಗೊಳ್ಳಲಿದೆ ಎಂದರು.
ಪ್ರಾದೇಶಿಕ ಅಭಿವೃದ್ಧಿಯ ಭಾಗವಾಗಿ ಚಹಾ ತೋಟದ ಕಾರ್ಮಿಕರಿಗೆ ಭೂಮಿ ಮಾಲೀಕತ್ವ, ವೇತನ ಹೆಚ್ಚಳ ಮತ್ತು ಹೊಸ ಮಾದರಿ ಶಾಲೆಗಳ ಸ್ಥಾಪನೆಯಂತಹ ಹಲವಾರು ಕಲ್ಯಾಣ ಯೋಜನೆಗಳನ್ನು ಇದೇ ವೇಳೆ ಘೋಷಿಸಿದರು. ಮಮತಾ ಬ್ಯಾನರ್ಜಿ ವಂಶಪಾರಂಪರ್ಯ ರಾಜಕೀಯವನ್ನು ಟೀಕಿಸಿದ ಶಾ, ಮುಖ್ಯಮಂತ್ರಿಗಳಿಗೆ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಅಧಿಕಾರಕ್ಕೆ ತರುವ ಆಸೆ ಇದೆಯೇ ಹೊರತು ಬಂಗಾಳದ ಅಭಿವೃದ್ಧಿಯಲ್ಲ ಎಂದು ಹೇಳಿದರು(ಏಜೆನ್ಸೀಸ್).